ಮಡಿಕೇರಿ, ಮಾ. ೬: ಬಲಿಜ ಸಮಾಜದ ವಿದ್ಯಾರ್ಥಿಗಳ ಉದ್ಯೋಗದ ಅನುಕೂಲಕ್ಕಾಗಿ ೨ಎ ಹಿಂದುಳಿದ ವರ್ಗದ ಮೀಸಲಾತಿ ನೀಡುವಂತಾಗಬೇಕು ಎಂದು ಯೋಗಿ ನಾರಾಯಣ ಬಲಿಜ ಸಂಘದ ಜಿಲ್ಲಾಧ್ಯಕ್ಷ ಟಿ.ಜಿ. ಗಣೇಶ್ ನಾಯ್ಡು ಒತ್ತಾಯಿಸಿದ್ದಾರೆ.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ಸಹಯೋಗದೊಂದಿಗೆ ನಗರದ ಗಾಂಧಿ ಭವನದಲ್ಲಿ ಮಂಗಳವಾರ ನಡೆದ ಶ್ರೀ ಯೋಗಿ ನಾರಾಯಣ ಯತೀಂದ್ರರ ಜಯಂತಿ (ಕೈವಾರ ತಾತಯ್ಯ) ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಬಲಿಜ ಸಮಾಜದ ವಿದ್ಯಾರ್ಥಿಗಳಿಗೆ ಶಿಕ್ಷಣದಲ್ಲಿ ೨ಎ ಮೀಸಲಾತಿ ನೀಡಲಾಗಿದೆ. ಆದರೆ ಉದ್ಯೋಗದಲ್ಲಿ ಮಾತ್ರ ೩ಎ ನಲ್ಲಿ ಮೀಸಲಾತಿ ಕಲ್ಪಿಸಲಾಗಿದೆ. ಇದರಿಂದ ಬಲಿಜ ಸಮಾಜದ ವಿದ್ಯಾರ್ಥಿಗಳಿಗೆ ಅನ್ಯಾಯವಾಗಿದ್ದು, ಶಿಕ್ಷಣದಂತೆ ಉದ್ಯೋಗದಲ್ಲಿಯೂ ಸಹ ೨ಎ ಹಿಂದುಳಿದ ವರ್ಗದಡಿ ಮೀಸಲಾತಿ ನೀಡುವಂತಾಗಬೇಕು ಎಂದು ಮನವಿ ಮಾಡಿದರು.
ಪ್ರತೀ ಸಮಾಜದಲ್ಲಿಯೂ ಸಹ ಶ್ರೀಮಂತರು ಮತ್ತು ಬಡವರು ಇದ್ದಾರೆ. ಆದರೆ ಕಡು ಬಡವರಿಗೆ ಉದ್ಯೋಗ ದೊರೆಯುತ್ತಿಲ್ಲ, ಆದ್ದರಿಂದ ಈ ಬಗ್ಗೆ ಗಮನಹರಿಸಬೇಕು ಎಂದು ಯೋಗಿ ನಾರಾಯಣ ಬಲಿಜ ಸಮಾಜದ ಜಿಲ್ಲಾ ಘಟಕದ ಅಧ್ಯಕ್ಷರು ಕೋರಿದರು.
ಕರ್ನಾಟಕ ರೇಷ್ಮೆ ಮಾರಾಟ ಮಂಡಳಿ ಮಾಜಿ ಅಧ್ಯಕ್ಷ ಟಿ.ಪಿ. ರಮೇಶ್ ಮಾತನಾಡಿ, ಶ್ರೀ ಯೋಗಿ ನಾರಾಯಣ ಯತೀಂದ್ರ ಅವರ ೩೦೦ ನೇ ವರ್ಷಾಚರಣೆಯನ್ನು ಇಂದು ಹಮ್ಮಿಕೊಳ್ಳಲಾಗಿದೆ ಎಂದರು.
ಕೈವಾರ ತಾತಯ್ಯ ಅವರ ಜೀವನ, ಆಚಾರ-ವಿಚಾರಗಳು, ಸಂಸ್ಕೃತಿ, ಸಮಾಜಕ್ಕೆ ನೀಡಿರುವ ಕೊಡುಗೆಯನ್ನು ಸದಾ ಸ್ಮರಿಸುವಂತಾಗಬೇಕು ಎಂದು ಅವರು ತಿಳಿಸಿದರು. ದಾರ್ಶನಿಕರಾಗಿದ್ದ ಕೈವಾರ ತಾತಯ್ಯ ಅವರು ೧೭೨೬ ರಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನಲ್ಲಿ ಜನಿಸಿದ್ದಾರೆ ಎಂದು ಅವರು ಹೇಳಿದರು. ದಾಸರ ಪದಗಳು, ಕೀರ್ತನೆಗಳ ಮೂಲಕ ಸಮಾಜದಲ್ಲಿ ಸಮಾನತೆಯ ಸಂದೇಶವನ್ನು ಸಾರಿದ್ದಾರೆ. ದಾಸ ಸಾಹಿತ್ಯದ ಕೋಗಿಲೆ ಅವರ ಹೆಸರಿನಲ್ಲಿದೆ. ಬಡವರು, ಅನಾಥರು ಇತರರಿಗಾಗಿ ಶ್ರಮಿಸಿದ್ದಾರೆ ಎಂದು ಅವರು ನುಡಿದರು. ಸಾಮಾನ್ಯ ಕುಟುಂಬದಲ್ಲಿ ಹುಟ್ಟಿ ಬೆಳೆದು ಸಮಾಜದಲ್ಲಿ ಇತರರಂತೆ ಬದುಕುವುದು ಹೇಗೆ ಎಂಬುದನ್ನು ಕಲಿಸಿಕೊಟ್ಟಿದ್ದಾರೆ ಎಂದು ಟಿ.ಪಿ. ರಮೇಶ್ ಹೇಳಿದರು.
ಕೊಡಗು ಬಲಿಜ ಸಮಾಜದ ಅಧ್ಯಕ್ಷ ಟಿ.ಎಲ್. ಶ್ರೀನಿವಾಸ್ ಮಾತನಾಡಿ, ಕೊಡಗು ಜಿಲ್ಲೆಯಲ್ಲಿ ಬಲಿಜ ಸಮಾಜದ ೮ ರಿಂದ ೧೦ ಸಾವಿರ ಜನಸಂಖ್ಯೆ ಇದ್ದು, ಕೈವಾರ ತಾತಯ್ಯ ಅವರ ಜಯಂತಿ ಸಂದರ್ಭದಲ್ಲಿ ರಥೋತ್ಸವ ಹಮ್ಮಿಕೊಳ್ಳುವ ಆಶಯವಿದೆ ಎಂದು ಹೇಳಿದರು. ಜಿಲ್ಲೆಯ ಪ್ರತೀ ಗ್ರಾಮಗಳಲ್ಲಿ ಕೈವಾರ ತಾತಯ್ಯ ಅವರ ಜಯಂತಿಯನ್ನು ಆಚರಿಸುವಂತಾಗಬೇಕು ಎಂದು ತಿಳಿಸಿದರು.
ಬಲಿಜ ಸಂಘದ ತಾಲೂಕು ಘಟಕದ ಅಧ್ಯಕ್ಷೆ ಟಿ.ಕೆ. ಮೀನಾಕ್ಷಿ ಕೇಶವ ಮಾತನಾಡಿ, ಕೈವಾರ ತಾತಯ್ಯ ಅವರು ನಾಡಿಗೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಅವರ ಸಮಾಜಮುಖಿ ಚಿಂತನೆಗಳು, ಆಲೋಚನೆಗಳು ದೂರದೃಷ್ಟಿ ಹೊಂದಿದ್ದವು ಎಂದು ತಿಳಿಸಿದರು.
ಶಾಲಾ ಶಿಕ್ಷಣ ಇಲಾಖೆಯ ಡಿವೈಪಿಸಿ ಕೃಷ್ಣಪ್ಪ ಮಾತನಾಡಿದರು. ಪ್ರಮುಖರಾದ ಹೆಚ್.ಎಲ್. ದಿವಾಕರ, ಕಂದಾ ದೇವಯ್ಯ ಉದಯ್ ಕುಮಾರ್, ಹೇಮಲತಾ, ಶ್ಯಾಮಲಾ, ನವೀನ, ಸಮಂತ್, ಯಶವಂತ್, ಇತರರು ಇದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕುಮಾರ ಸ್ವಾಗತಿಸಿದರು. ಮಣಜೂರು ಮಂಜುನಾಥ್ ನಿರೂಪಿಸಿ, ವಂದಿಸಿದರು.