ಮಡಿಕೇರಿ ಮಾ.೫ : ಬಡವರ ಮತಗಳಿಂದ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಸರಕಾರ ಇಲ್ಲಿಯವರೆಗೆ ಬಡವರಿಗೆ ನಿವೇಶನ ಮತ್ತು ವಸತಿ ಸೌಲಭ್ಯವನ್ನು ನೀಡದೆ ವಂಚಿಸಿದೆ ಎಂದು ಭಾರತ ಕಮ್ಯುನಿಸ್ಟ್ ಪಕ್ಷ ಹಾಗೂ ಎ.ಐ.ಟಿ.ಯು.ಸಿಯ ಕೊಡಗು ಜಿಲ್ಲಾ ಘಟಕಗಳು ಜಂಟಿ ಸುದ್ದಿಗೋಷ್ಠಿಯಲ್ಲಿ ಆರೋಪಿಸಿವೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎ.ಐ.ಟಿ.ಯು.ಸಿ ಸಂಘಟನೆಯ ಜಿಲ್ಲಾಧ್ಯಕ್ಷ ಹೆಚ್.ಎಂ ಸೋಮಪ್ಪ ಅವರು, ೨೦೦೭ ರಿಂದ ನಮ್ಮ ಸಂಘಟನೆ ಕೊಡಗು ಜಿಲ್ಲೆಯಲ್ಲಿರುವ ಎಲ್ಲಾ ನಿವೇಶನ ಮತ್ತು ವಸತಿ ರಹಿತ ಬಡವರಿಗೆ, ದಲಿತರಿಗೆ, ಕಾರ್ಮಿಕರಿಗೆ, ಸರ್ವ ದುಡಿಯುವ ವರ್ಗಕ್ಕೆ ನಿವೇಶನ ಹಾಗೂ ವಸತಿಯನ್ನು ನೀಡಬೇಕೆಂದು ಹೋರಾಟ ನಡೆಸುತ್ತಲೇ ಬಂದಿದೆ. ಆದರೆ ಇಲ್ಲಿಯವರೆಗೆ ಅಧಿಕಾರಕ್ಕೆ ಬಂದ ಯಾವುದೇ ಸರಕಾರಗಳು ಬಡವರ ಈ ಬೇಡಿಕೆಗಳನ್ನು ಈಡೇರಿಸಿಲ್ಲ. ರಾಜಕೀಯ ಪಕ್ಷಗಳಿಗೆ ಬಡವರ ಮತಗಳು ಬೇಕು, ಆದರೆ ಬಡವರಿಗೆ ನಿವೇಶನ ಮತ್ತು ವಸತಿ ಸೌಲಭ್ಯ ಕಲ್ಪಿಸಬೇಕು ಎನ್ನುವ ಜವಾಬ್ದಾರಿ ಇಲ್ಲದಾಗಿದೆ. ಪ್ರಸ್ತುತ ಇರುವ ಕಾಂಗ್ರೆಸ್ ಸರಕಾರ ಕೂಡ ಶೋಷಿತರ ಬೇಡಿಕೆಗಳಿಗೆ ಸ್ಪಂದಿಸುವಲ್ಲಿ ವಿಫಲವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

೨೦೨೦-೨೦೨೨ ರವರೆಗೆ ಗ್ರಾಮ ಪಂಚಾಯ್ತಿಗಳ ವ್ಯಾಪ್ತಿಯಲ್ಲಿ ಜಾಗವನ್ನು ಗುರುತು ಮಾಡಲಾಗಿತ್ತು. ಅದು ನಮ್ಮ ಪಕ್ಷ ಮತ್ತು ಸಂಘಟನೆಯ ಹೋರಾಟದ ಫಲವಾಗಿದೆ. ಶಾಸಕರುಗಳು ಆಯ್ಕೆಯಾಗಿರುವುದೇ ಜನಸೇವೆಗಾಗಿ, ಜನರ ಹಕ್ಕುಗಳನ್ನು ಮತ್ತು ಬೇಡಿಕೆಗಳನ್ನು ಪೂರೈಸುವುದಕ್ಕಾಗಿ. ಆದರೆ ಕೊಡಗು ಜಿಲ್ಲೆಯಲ್ಲಿ ಇಂದಿಗೂ ಸಾವಿರಾರು ಕುಟುಂಬಗಳು ಸ್ವಂತ ಮನೆ, ನಿವೇಶನವಿಲ್ಲದೆ ಸಂಕಷ್ಟದಲ್ಲಿದ್ದಾರೆ. ಕೊಡಗು ಜಿಲ್ಲೆಯ ಇಬ್ಬರು ಶಾಸಕರುಗಳಿಗೆ ಪರಿಶಿಷ್ಟರು, ಕಾರ್ಮಿಕರು ಹಾಗೂ ಎಲ್ಲಾ ದುಡಿಯುವ ವರ್ಗದ ಮೇಲೆ ನೈಜ ಕಾಳಜಿ ಇದ್ದರೆ ಮುಂದಿನ ಚುನಾವಣೆಯೊಳಗೆ ಎಲ್ಲಾ ನಿವೇಶನ ರಹಿತರಿಗೆ ಮನೆ ನಿರ್ಮಿಸಿಕೊಡಬೇಕು ಎಂದರು.

ಭಾರತ ಕಮ್ಯುನಿಸ್ಟ್ ಪಕ್ಷದ ಜಿಲ್ಲಾ ಕಾರ್ಯದರ್ಶಿ ರಫೀಕ್ ಎಂ.ಹೆಚ್ ಮಾತನಾಡಿ, ನಮ್ಮ ಪಕ್ಷ ನಿವೇಶನ ಮತ್ತು ವಸತಿಗಾಗಿ ನಿರಂತರ ಹೋರಾಟ ಮತ್ತು ಕಾಲ್ನಡಿಗೆ ಜಾಥಾಗಳನ್ನು ನಡೆಸಿಕೊಂಡು ಬಂದಿದೆ. ೨೦೧೯ರಲ್ಲಿ ವೀರಾಜಪೇಟೆಯ ಅಧಿಕಾರಿಗಳು ಸುಮಾರು ೭ ಸಾವಿರ ಫಲಾನುಭವಿಗಳಿಗೆ ನಿವೇಶನ ನೀಡಲು ಮುಂದಾಗಿರುವುದಾಗಿ ಭರವಸೆ ನೀಡಿದ್ದರು. ಆದರೆ ಈ ಭರವಸೆ ಇಲ್ಲಿಯವರೆಗೆ ಈಡೇರಿಲ್ಲವೆಂದು ಬೇಸರ ವ್ಯಕ್ತಪಡಿಸಿದರು.

ಪ್ರಸ್ತುತ ವೀರಾಜಪೇಟೆ ಭಾಗದ ೩ ಸಾವಿರ ಫಲಾನುಭವಿಗಳಿಗೆ ನಿವೇಶನ ನೀಡಲು ಮುಂದಾಗಿರುವುದು ಸ್ವಾಗತಾರ್ಹ ಕ್ರಮವಾಗಿದೆ. ಆದರೆ ನಾಡಿನಲ್ಲಿರುವ ಬಡವರಿಗೆ ನಾಗರಿಕ ಸಂಪರ್ಕವಿಲ್ಲದ ಕಾಡು ಪ್ರದೇಶದಲ್ಲಿ ನಿವೇಶನ ಗುರುತಿಸಿರುವುದು ಸರಿಯಲ್ಲ, ಇದನ್ನು ಸಿಪಿಐ ವಿರೋಧಿಸುತ್ತದೆ ಎಂದರು.

ಆಲ್ ಇಂಡಿಯಾ ದಲಿತ ಮೂವ್‌ಮೆಂಟ್‌ನ ರಾಜ್ಯ ಮುಖಂಡ ಮಾಯಮುಡಿ ರಮೇಶ್ ಮಾತನಾಡಿ, ಬಡವರು, ಪರಿಶಿಷ್ಟರು ಹಾಗೂ ಕಾರ್ಮಿಕರು ನೆಲೆ ನಿಂತಿರುವ ಪ್ರದೇಶದಲ್ಲೇ ನಿವೇಶನ ಮತ್ತು ವಸತಿ ಸೌಲಭ್ಯ ಕಲ್ಪಿಸಬೇಕು ಎಂದು ಒತ್ತಾಯಿಸಿದರು.

ನಮ್ಮ ಸಂಘಟನೆಯ ಹೋರಾಟದ ಫಲವಾಗಿ ವೀರಾಜಪೇಟೆಯಲ್ಲಿ ಮೂರು ಸಾವಿರ ಫಲಾನುಭವಿಗಳಿಗೆ ನಿವೇಶನ ದೊರೆಯುತ್ತಿದೆ. ಆದರೆ ಕೆಲವು ಹೊಟ್ಟೆಪಾಡಿನ ಸಂಘಟನೆಗಳು ನಾವೇ ನಿವೇಶನ ದೊರಕಿಸಿಕೊಡುತ್ತಿದ್ದೇವೆ ಎಂದು ಸುಳ್ಳು ಹೇಳುತ್ತಿವೆ. ಈ ಸಂಘಟನೆಗಳು ಮೊದಲು ಸಂಕಷ್ಟದಲ್ಲಿರುವ ಆದಿವಾಸಿಗಳ ಸಮಸ್ಯೆಗಳಿಗೆ ಸ್ಪಂದಿಸಲಿ ಎಂದರು. ಸುದ್ದಿಗೋಷ್ಠಿಯಲ್ಲಿ ಸಿಪಿಐ ಪಕ್ಷದ ಸೋಮವಾರಪೇಟೆ ಕಾರ್ಯದರ್ಶಿ ಶಬಾನಾ ಎಸ್.ಹೆಚ್ ಉಪಸ್ಥಿತರಿದ್ದರು.