*ಗೋಣಿಕೊಪ್ಪ, ಮಾ. ೫: ಗೋಣಿಕೊಪ್ಪ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಹಳೆಯ ವಿದ್ಯಾರ್ಥಿಗಳ ಸಂಘದ ಜ್ಞಾನ ದೇಗುಲದ ಚೊಚ್ಚಲ ವಾರ್ಷಿಕೋತ್ಸವ ನಡೆಯಿತು.
ಗ್ರಾ.ಪಂ ಅಧ್ಯಕ್ಷ ಕುಲ್ಲಚಂಡ ಪ್ರಮೋದ್ ಗಣಪತಿ ಜ್ಞಾನ ದೇಗುಲದ ಮುಂಭಾಗ ಹೂಕುಂಡಕ್ಕೆ ನೀರೆರೆದು ಚಾಲನೆ ನೀಡಿದರು. ಸಂಘದ ಅಧ್ಯಕ್ಷ ಮಣಿಕಂಠ ಅಧ್ಯಕ್ಷತೆಯಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಗ್ರಾ.ಪಂ ಅಧ್ಯಕ್ಷ ಪ್ರಮೋದ್ ಗಣಪತಿ ಮಾತನಾಡಿ, ಮಕ್ಕಳಲ್ಲಿ ಮಾತನಾಡುವ ಪ್ರೇರಣೆಯನ್ನು ತುಂಬಬೇಕಾಗಿದೆ. ವಿಚಾರಗಳನ್ನು ಪ್ರಸ್ತುತಪಡಿಸಲು ಅಂಜುವ ವಿದ್ಯಾರ್ಥಿಗಳಿಗೆ ಅಪಾರವಾದ ಆತ್ಮಶಕ್ತಿಯನ್ನು ತುಂಬುವ ಕೆಲಸ ಶಿಕ್ಷಕರು ಮಾಡಬೇಕು ಎಂದು ಹೇಳಿದರು. ಹಳೆ ವಿದ್ಯಾರ್ಥಿಗಳ ಸಂಘ ಶಾಲೆಯ ಸರ್ವೋತೋಮುಖ ಅಭಿವೃದ್ಧಿಗೆ ಮನೋ ಇಚ್ಛೆಯನ್ನು ವ್ಯಕ್ತಪಡಿಸಿರುವುದು ಶ್ಲಾಘನೀಯವಾಗಿದೆ ಎಂದು ಹೇಳಿದರು.
ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ಜಗದೀಶ್ ಜೋಡುಬೀಟಿ ಮಾತನಾಡಿ, ಶಾಲೆಗೆ ಮಕ್ಕಳ ದಾಖಲಾತಿ ಕಾರ್ಯಕ್ಕೆ ಹಳೆ ವಿದ್ಯಾರ್ಥಿಗಳ ಸಂಘ ಕೈಜೋಡಿಸಬೇಕು. ಈ ಸಮಾಜದ ಪ್ರತಿಯೊಬ್ಬರು ಮಕ್ಕಳ ಕಲಿಕೆಯಲ್ಲಿ ಮಾನವೀಯ ಪ್ರೇಮವನ್ನು ತಿಳಿಸಿಕೊಡಬೇಕು ಎಂದು ಹೇಳಿದರು.
ಶಾಲೆಯ ಮುಖ್ಯೋಪಾಧ್ಯಾಯ ಹೆಚ್.ಕೆ ಕುಮಾರ್ ಮಾತನಾಡಿ, ಮಕ್ಕಳ ಶೈಕ್ಷಣಿಕ ಪ್ರಗತಿಗೆ ಅನುಗುಣವಾಗಿ ಕಲಿಕೆಯ ಗುಣಮಟ್ಟವನ್ನು ಏರಿಸಲು ಶಿಕ್ಷಕರು ಮುಂದಾಗಿದ್ದಾರೆ. ಈ ನಿಟ್ಟಿನಲ್ಲಿ ಈ ಶಾಲೆಯ ಮಕ್ಕಳ ಶೈಕ್ಷಣಿಕ ಪ್ರಗತಿಯ ಜೊತೆಗೆ ಅಭಿವೃದ್ಧಿಯು ನಡೆಯಬೇಕಾಗಿದೆ. ಈ ಹಿನ್ನೆಲೆಯಲ್ಲಿ ಹಳೆಯ ವಿದ್ಯಾರ್ಥಿಗಳ ಸಂಘದ ಸಂಘಟನಾತ್ಮಕ ಕಾರ್ಯ ಅಪರೂಪದ ತ್ಯಾಗವಾಗಿದೆ ಎಂದು ಹೇಳಿದರು.
ಗ್ರಾ.ಪ ಸದಸ್ಯ ಬಿ.ಎನ್ ಪ್ರಕಾಶ್ ಮಾತನಾಡಿ, ಮಕ್ಕಳ ಕಲಿಕೆಗೆ ಬೇಕಾದ ಕೌಶಲ್ಯವನ್ನು ಒದಗಿಸಿಕೊಡುವ ಕಾರ್ಯವನ್ನು ಮಾಡಬೇಕು. ಈ ನಿಟ್ಟಿನಲ್ಲಿ ಹಳೆಯ ವಿದ್ಯಾರ್ಥಿಗಳು ಸಂಘ ಶಾಲೆಯ ವಾತಾವರಣ ಬದಲಾಯಿಸುವ ಮೂಲಕ ಶೈಕ್ಷಣಿಕವಾಗಿ ಮಕ್ಕಳ ಭೌತಿಕ ಬೆಳವಣಿಗೆಗೆ ಸಹಕರಿಸಿದ್ದಾರೆ ಎಂದು ಹೇಳಿದರು.
ಮಂಡ್ಯದ ಪ್ರಗತಿಪರ ರೈತ ಸೋಮಶೇಖರ್ ಮಾತನಾಡಿ, ಮಾನವ ಕುಲಕ್ಕೆ ಉತ್ತಮ ಆರೋಗ್ಯಪೂರ್ಣ ಮಣ್ಣು ಮತ್ತು ಭೂಮಿಯನ್ನು ಒದಗಿಸುವುದು ಹಕ್ಕಾಗಿದೆ. ಆ ನಿಟ್ಟಿನಲ್ಲಿ ರೈತರು ಕಾರ್ಯ ಪ್ರವೃತ್ತರಾದಾಗ, ಆರೋಗ್ಯ ಪೂರ್ಣವಾದ ಆಹಾರ ಪದಾರ್ಥಗಳನ್ನು ಒದಗಿಸಲು ಸಾಧ್ಯವಾಗಲಿದೆ ಎಂದು ತಿಳಿಸಿದರು.
ನಿವೃತ್ತ ಶಿಕ್ಷಕ ದೇವಯ್ಯ, ಉದ್ಯಮಿಗಳಾದ ಪ್ರಮೋದ್ ಕಾಮತ್, ಶಾಂತರಾಮ್ ಕಾಮತ್, ಗ್ರಾ.ಪಂ ಸದಸ್ಯೆ ಗೀತಾ, ಹಳೆಯ ವಿದ್ಯಾರ್ಥಿ ಸಂಘದ ಸುರೇಶ್ ರೈ, ಬಿ.ಇ ಕಿರಣ್, ಸುಬ್ರಮಣಿ, ಸುರೇಶ್ ಇದ್ದರು.
ಈ ಸಂದರ್ಭ ಶಾಲೆಯಲ್ಲಿ ದಾನಿಗಳು ಇಟ್ಟ ದತ್ತಿನಿಧಿಯನ್ನು ವಿದ್ಯಾರ್ಥಿಗಳಿಗೆ ವಿತರಿಸಲಾಯಿತು. ವಿದ್ಯಾರ್ಥಿಗಳಿಂದ ವಿಜ್ಞಾನ ಪ್ರದರ್ಶನ ನಡೆಯಿತು. ಶಾಲೆಯ ವಿದ್ಯಾರ್ಥಿಗಳಿಂದ, ಹಳೆ ವಿದ್ಯಾರ್ಥಿಗಳಿಂದ ನೃತ್ಯ, ಮ್ಯಾಜಿಕ್ ಶೋ, ಹಾಡು, ವಿವಿಧ ಸಂಸ್ಕೃತಿಗಳ ಕಾರ್ಯಕ್ರಮ ನಡೆಯಿತು. ಹಳೆ ವಿದ್ಯಾರ್ಥಿಗಳು, ಶಾಲೆಯ ಶಿಕ್ಷಕರು, ಪೋಷಕರು, ವಿದ್ಯಾರ್ಥಿಗಳು ಇದ್ದರು.