ಕೂಡಿಗೆ, ಫೆ. ೨೮: ಕುಶಾಲನಗರ ಹೆಚ್.ಆರ್.ಪಿ. ಕಾಲೋನಿ ಅಂಗನವಾಡಿ ಕೇಂದ್ರಕ್ಕೆ ಕೊಡಗು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ. ಎನ್.ವಿ. ಪ್ರಸಾದ್ ಭೇಟಿ ನೀಡಿ ಗರ್ಭಿಣಿ, ಬಾಣಂತಿಯರಿಗೆ ಹಾಗೂ ಮಕ್ಕಳಿಗೆ ಸರ್ಕಾರದಿಂದ ನೀಡುವ ಪೌಷ್ಟಿಕ ಆಹಾರದ ಬಗ್ಗೆ ಪರಿಶೀಲಿಸಿದರು.

ಅಂಗನವಾಡಿ ಕೇಂದ್ರದಲ್ಲಿರುವ ಮಕ್ಕಳ ಶಾಲಾ ಪೂರ್ವ ಶಿಕ್ಷಣದ ಬಗ್ಗೆ ಮಾಹಿತಿ ಪಡೆದರು. ಅಂಗನವಾಡಿ ಕೇಂದ್ರದಲ್ಲಿ ಮಕ್ಕಳಿಗೆ ನೀಡುವ ಬಿಸಿ ಊಟವನ್ನು ಪರಿಶೀಲಿಸಿ, ನಂತರ ಬಸವನಹಳ್ಳಿಯ ನೀರು ಶುದ್ಧೀಕರಣ ಘಟಕಕ್ಕೆ ಹಾಗೂ ಆಶ್ರಮ ಶಾಲೆಗೆ ಭೇಟಿ ನೀಡಿದರು.

ಈ ಸಂದರ್ಭ ಕೊಡಗು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಆನಂದ್ ಪ್ರಕಾಶ್ ಮೀನಾ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ಪ್ರಸನ್ನಕುಮಾರ್, ಕಾರ್ಯನಿರ್ವಾಹಕ ಅಧಿಕಾರಿ ವಿ. ಪರಮೇಶ್ ಕುಮಾರ್, ತಾಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶ್ರೀದೇವಿ ಸೇರಿದಂತೆ ಅಂಗನವಾಡಿ ಕಾರ್ಯಕರ್ತೆ ಹಾಜರಿದ್ದರು.