ಮಡಿಕೇರಿ, ಫೆ. ೨೮: ತಾಯಿಯೊಂದಿಗೆ ತೆರಳುತ್ತಿದ್ದ ಮಗಳ ಮೇಲೆ ಕಾಡಾನೆಯೊಂದು ದಾಳಿ ನಡೆಸಿ ಬಲಿ ಪಡೆದ ಘಟನೆ ನಡೆದಿದೆ.

ಬೆಟ್ಟತ್ತೂರಿನ ಚಂಗಪ್ಪ, ದೇವಕ್ಕಿ ಎಂಬವರ ಪುತ್ರಿ ಮಡಿಕೇರಿ ಸಂತ ಮೈಕಲರ ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿನಿ ಪೂಜ್ಯ (೧೯) ಎಂಬಾಕೆಯೆ ಆನೆ ದಾಳಿಯಿಂದ ಸಾವನ್ನಪ್ಪಿದ ದುರ್ದೈವಿಯಾಗಿದ್ದಾಳೆ.

ದೇವಕ್ಕಿಯವರು ಕರಿಕೆ ಚೆತ್ತುಕಾಯದ ವಾಲ್ಮೀಕಿ ಆಶ್ರಮ ಶಾಲೆಯಲ್ಲಿ ಅಡುಗೆ ಕೆಲಸ ಮಾಡಿಕೊಂಡಿದ್ದು, ೧೫ ದಿನಗಳಿಗೊಮ್ಮೆ ಬೆಟ್ಟತ್ತೂರಿನ ಮನೆಗೆ ಬರುತ್ತಿದ್ದರು.

ಈ ನಡುವೆ ಪೂಜ್ಯಳ ವಾರ್ಷಿಕ ಪರೀಕ್ಷೆ ತಾ.೧೯ ರಂದು ಮುಗಿದಿದ್ದು, ಆ ಬಳಿಕ ಕೆಲದಿನ ಬೆಟ್ಟತ್ತೂರಿನ ತನ್ನ ಮನೆಯಲ್ಲಿದ್ದ ಪೂಜ್ಯ ಬಳಿಕ ತಾ. ೨೩ರಂದು ಕರಿಕೆಗೆ ತೆರಳಿ ತನ್ನ ತಾಯಿಯೊಂದಿಗಿದ್ದಳು.

ಇಂದು ತಾಯಿ ಹಾಗೂ ಮಗಳು ಬೆಟ್ಟತ್ತೂರಿನ ಮನೆಗೆ ಬರುವ ಸಲುವಾಗಿ ಚೇರಂಬಾಣೆಗೆ ಬಂದಿದ್ದು ಅಲ್ಲಿಗೆ ತಮ್ಮ ಬೈಕ್ನಲ್ಲಿ ತೆರಳಿದ್ದ ಚಂಗಪ್ಪ ಪತ್ನಿ ಹಾಗೂ ಮಗಳನ್ನು ಕರೆದುಕೊಂಡು ಬೆಟ್ಟತ್ತೂರಿನತ್ತ ಬಂದಿದ್ದಾರೆ.

ಈ ವೇಳೆ ಬೈಕ್‌ನಲ್ಲಿ ಮನೆಯ ಬಳಿಗೆ ತಲುಪುತ್ತಿದ್ದಂತೆ ಅಲ್ಲಿದ್ದ ಏರು ರಸ್ತೆಯಲ್ಲಿ ಬೈಕ್‌ನಲ್ಲಿ ಮೂವರು ತೆರಳಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಚಂಗಪ್ಪ ಪತ್ನಿ ದೇವಕ್ಕಿ ಹಾಗೂ ಮಗಳು ಪೂಜ್ಯಳನ್ನು ಬೈಕ್‌ನಿಂದ ಇಳಿಸಿ ನಡೆದುಕೊಂಡು ಬರುವಂತೆ ಹೇಳಿ ಮನೆಗೆ ತೆರಳಿದ್ದಾರೆ.

ಬಳಿಕ ದೇವಕ್ಕಿ ಹಾಗೂ ಪೂಜ್ಯ ನಡೆದುಕೊಂಡು ಬರುತ್ತಿದ್ದಂತೆ ಕಾಡಾನೆಯೊಂದು ದಿಢೀರ್ ದಾಳಿ ನಡೆಸಿ ಪೂಜ್ಯಳನ್ನು ಎಳೆದೊಯ್ದು ತುಳಿದು ಹಾಕಿದೆ.

ಆನೆ ದಾಳಿ ನಡೆಸುತ್ತಿದ್ದಂತೆ ದೇವಕ್ಕಿಯವರು ಬೊಬ್ಬೆ ಹಾಕಿದ್ದು ಇದನ್ನು ಕೇಳಿ ಚಂಗಪ್ಪ ಸ್ಥಳಕ್ಕೆ ತೆರಳಿ ನೋಡಿದಾಗ ಮಗಳ ಮೇಲೆ ಕಾಡಾನೆ ದಾಳಿ ನಡೆಸಿರುವ ವಿಚಾರ ತಿಳಿದು ಬಂದಿದೆ. ಪೂಜ್ಯಳ ದೇಹ ಬಿಸಿ ಇದ್ದ ಕಾರಣ ಕೂಡಲೇ ಆಕೆಯನ್ನು ಜಿಲ್ಲಾ ಆಸ್ಪತ್ರೆಗೆ ಕರೆತರಲಾಯಿತಾದರೂ ಅಷ್ಟರಾಗಲೇ ಪೂಜ್ಯಳ ಪ್ರಾಣ ಪಕ್ಷಿ ಹಾರಿಹೋಗಿತ್ತು. ಮಗಳನ್ನು ಕಳೆದುಕೊಂಡ ಹೆತ್ತವರ ಆಕ್ರಂದನ ಮುಗಿಲು ಮುಟ್ಟಿತ್ತು.