ವೀರಾಜಪೇಟೆ, ಫೆ. ೨೮: ಪಟ್ಟಣದ ಸೆಂಟ್ ಆ್ಯನ್ಸ್ ಪದವಿ ಕಾಲೇಜಿನ ಎನ್‌ಎಸ್‌ಎಸ್ ಘಟಕದ ವಾರ್ಷಿಕ ವಿಶೇಷ ಶಿಬಿರ ಮಾರ್ಚ್ ೪ ರಿಂದ ಮಾರ್ಚ್ ೧೦ ರವರೆಗೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಲ್ತೋಡು ನಾಂಗಾಲದಲ್ಲಿ ಜರುಗಲಿದೆ.

ಮಾರ್ಚ್ ೪ ರಂದು ಬೆಳಿಗ್ಗೆ ೧೧ ಗಂಟೆಗೆ ಉದ್ಘಾಟನಾ ಸಮಾರಂಭ ಜರುಗಲಿದ್ದು, ಉದ್ಘಾಟನೆಯನ್ನು ವೀರಾಜಪೇಟೆ ಕ್ಷೇತ್ರದ ಶಾಸಕ ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಎ.ಎಸ್. ಪೊನ್ನಣ್ಣ ನೆರವೇರಿಸಲಿದ್ದಾರೆ. ಬಿಟ್ಟಂಗಾಲ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಮೂಕಚಂಡ ಪ್ರಸನ್ನ ಸುಬ್ಬಯ್ಯ ಧ್ವಜಾರೋಹಣವನ್ನು ನೆರವೇರಿಸಲಿದ್ದಾರೆ.

ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷೆ ಆಶಾ ಅಧ್ಯಕ್ಷತೆಯನ್ನು ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ವೀರಾಜಪೇಟೆಯ ಲಿಟಲ್ ಸ್ಕಾಲರ್ಸ್ ಅಕಾಡೆಮಿಯ ಮುಖ್ಯಸ್ಥೆ ಪೂಜಾ ಸಜೇಶ್ ಹಾಗೂ ಶಾಲಾ ಸ್ಥಳ ದಾನಿಗಳಾದ ಕುಪ್ಪಂಡ ಗೋಪಾಲ್ ಬೋಪಯ್ಯ ಉಪಸ್ಥಿತರಿರುವರು. ಸಂತ ಅನ್ನಮ್ಮ ವಿದ್ಯಾಸಂಸ್ಥೆಯ ವ್ಯವಸ್ಥಾಪಕ ಜೇಮ್ಸ್ ಡೊಮಿನಿಕ್ ಸಾನಿಧ್ಯವನ್ನು ವಹಿಸಲಿದ್ದಾರೆ. ಸೆಂಟ್ ಆ್ಯನ್ಸ್ ಪದವಿ ಕಾಲೇಜಿನ ವ್ಯವಸ್ಥಾಪಕ ಮದಲೈ ಮುತ್ತು, ಪ್ರಾಂಶುಪಾಲೆ ತೃಪ್ತಿ ಬೋಪಣ್ಣ, ಶಾಲಾ ಮುಖ್ಯ ಶಿಕ್ಷಕಿ ಫ್ಯಾನ್ಸಿ ಲೋಬೋ ಮೊದಲಾದವರು ಉಪಸ್ಥಿತರಿರಲಿದ್ದಾರೆ.

ಮಾರ್ಚ್ ೫ ರಂದು ವೀರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣಾಧಿಕಾರಿ ಲತಾ ಸೈಬರ್ ಅಪರಾಧ ತಡೆಗಟ್ಟುವಿಕೆಯ ಕುರಿತು ಉಪನ್ಯಾಸವನ್ನು ನೀಡಲಿದ್ದಾರೆ. ತಾ. ೬ ರಂದು ಗೋಣಿಕೊಪ್ಪಲು ಕೆ.ವಿ.ಕೆ.ಯ ವಿಜ್ಞಾನಿ ಡಾ. ವೀರೇಂದ್ರ ಕುಮಾರ್ ಮಣ್ಣು ಹಾಗೂ ಸಸ್ಯ ಸಂರಕ್ಷಣೆ ಕುರಿತು, ತಾ. ೭ ರಂದು ನಾಂಗಾಲ ಗ್ರಾಮದ ಉದ್ಯಮಿ ಭಜನ್ ಬೋಪಣ್ಣ ಯುವ ಜನತೆ ಮತ್ತು ಪರಿಸರದ ಕುರಿತು, ತಾ. ೮ ರಂದು ವೀರಾಜಪೇಟೆ ಕಾವೇರಿ ಪದವಿ ಕಾಲೇಜಿನ ಆಂಗ್ಲ ಭಾಷ ವಿಭಾಗದ ಮುಖ್ಯಸ್ಥೆ ಕುಪ್ಪಂಡ ವೀಣಾ ನಾಗರಿಕರು ಹಾಗೂ ಕಾನೂನಿನ ಅರಿವಿನ ಕುರಿತು, ತಾ. ೯ ರಂದು ವೀರಾಜಪೇಟೆಯ ಐಸಿಟಿಸಿ ವಿಭಾಗದ ಆಪ್ತ ಸಮಾಲೋಚಕ ಚಿಟ್ಯಪ್ಪ ಏಡ್ಸ್ ಜಾಗೃತಿಯ ಕುರಿತು ಉಪನ್ಯಾಸವನ್ನು ನೀಡಲಿದ್ದಾರೆ.

ಈ ಏಳು ದಿವಸಗಳ ಕಾಲ ಶಿಬಿರದಲ್ಲಿ ಶ್ರಮದಾನ, ಗ್ರಾಮ ಸ್ವಚ್ಛತಾ ಅಭಿಯಾನ, ಆರೋಗ್ಯ ಜಾಗೃತಿ ಹಾಗೂ ಶಿಬಿರ, ಸಾಂಸ್ಕೃತಿಕ ಕಾರ್ಯಕ್ರಮಗಳು, ಶೈಕ್ಷಣಿಕ ಕಾರ್ಯಕ್ರಮಗಳು, ಪರಿಸರ ಜಾಗೃತಿ, ಮುಂತಾದ ಹತ್ತು ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ತಾ. ೯ ರಂದು ಸಂಜೆ ಶಿಬಿರ ಜ್ಯೋತಿ ಕಾರ್ಯಕ್ರಮ ಜರುಗಲಿದೆ. ತಾ. ೧೦ ರಂದು ಶಿಬಿರದ ಸಮಾರೋಪ ಸಮಾರಂಭ ನಡೆಯಲಿದ್ದು, ಉದ್ಘಾಟನೆಯನ್ನು ವಿಧಾನ ಪರಿಷತ್ ಸದಸ್ಯ ಮಂಡೇಪAಡ ಸುಜಾ ಕುಶಾಲಪ್ಪ ನೆರವೇರಿಸಲಿದ್ದಾರೆ. ಸಮಾರೋಪ ಭಾಷಣವನ್ನು ಮಡಿಕೇರಿ ಆಕಾಶವಾಣಿಯ ಉದ್ಘೋಷಕ ವಿನೋದ್ ಮೂಡಗದ್ದೆ ಮಾಡಲಿದ್ದಾರೆ.ಅಧ್ಯಕ್ಷತೆಯನ್ನು ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷೆ ಆಶಾ ವಹಿಸಲಿದ್ದಾರೆ. ಸೆಂಟ್ ಆ್ಯನ್ಸ್ ಪದವಿ ಕಾಲೇಜಿನ ವ್ಯವಸ್ಥಾಪಕ ಮದಲೈ ಮುತ್ತು ಸಾನಿಧ್ಯವನ್ನು ವಹಿಸಲಿದ್ದಾರೆ. ಪ್ರಾಂಶುಪಾಲೆ ತೃಪ್ತಿ ಬೋಪಣ್ಣ, ಶಾಲಾ ಮುಖ್ಯ ಶಿಕ್ಷಕಿ ಫ್ಯಾನ್ಸಿ ಲೋಬೋ ಹಾಗೂ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಚೇಂದ್ರಿಮಾಡ ಕಾವೇರಪ್ಪ ಮೊದಲಾದವರು ಪಾಲ್ಗೊಳ್ಳಲಿದ್ದಾರೆ. ವಿಜ್ಞಾನ ಮತ್ತು ವೈಜ್ಞಾನಿಕ ಮನೋಧರ್ಮಕ್ಕಾಗಿ ಯುವಜನತೆ ಎಂಬ ಧ್ಯೇಯವಾಕ್ಯದೊಂದಿಗೆ ಶಿಬಿರವು ಜರುಗಲಿದ್ದು, ಹಲವಾರು ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಸೆಂಟ್ ಆ್ಯನ್ಸ್ ಪದವಿ ಕಾಲೇಜಿನ ಎನ್‌ಎಸ್‌ಎಸ್ ಘಟಕದ ಅಧಿಕಾರಿ ಬಿ.ಎನ್. ಶಾಂತಿಭೂಷಣ್ ಮಾಹಿತಿ ನೀಡಿದ್ದಾರೆ.