ಸೋಮವಾರಪೇಟೆ, ಫೆ.೨೮: ಸಮೀಪದ ತೋಳೂರುಶೆಟ್ಟಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೂತಿ ಗ್ರಾಮದ ವಾಂಟ್ಲುಗದ್ದೆ ಹಾಗೂ ಚಿಕ್ಕತೋಳೂರಿನಲ್ಲಿ ಚಿರತೆ ಧಾಳಿ ನಡೆದಿದ್ದು, ಎರಡು ಕುರಿಗಳನ್ನು ಬಲಿ ಪಡೆದಿದೆ.
ಚಿರತೆ ಧಾಳಿಯಿಂದಾಗಿ ಈ ಭಾಗದಲ್ಲಿ ಆತಂಕ ಸೃಷ್ಟಿಯಾಗಿದ್ದು, ಅರಣ್ಯ ಇಲಾಖಾ ಸಿಬ್ಬಂದಿಗಳು ಚಿರತೆಯ ಪತ್ತೆಗೆ ಮುಂದಾಗಿದ್ದಾರೆ.
ಕೂತಿ ಗ್ರಾಮ ವ್ಯಾಪ್ತಿಯ ವಾಂಟ್ಲುಗದ್ದೆ ನಿವಾಸಿ ಹೆಚ್.ಎ.ಬಸಪ್ಪ ಅವರು ಸಾಕಿದ್ದ ಕುರಿಗಳ ಮೇಲೆ ಇಂದು ಬೆಳಗಿನ ಜಾವ ಸುಮಾರು ೪ ಗಂಟೆಗೆ ಚಿರತೆ ದಾಳಿ ನಡೆಸಿದ್ದು, ಒಂದು ಕುರಿಯನ್ನು ಕೊಂದು ಹಾಕಿದೆ.
ನಾಯಿ ಬೊಗಳುವ ಶಬ್ದ ಕೇಳಿ ಮನೆಯವರು ತಕ್ಷಣ ಕುರಿಗಳನ್ನು ಕಟ್ಟಿ ಹಾಕಿದ ಸ್ಥಳಕ್ಕೆ ತೆರಳಿದ್ದು ಅಷ್ಟರಲ್ಲಿ ಚಿರತೆ, ಕುರಿಯನ್ನು ಬಿಟ್ಟು ಪರಾರಿಯಾಗಿದೆ. ಕುರಿಗಳನ್ನು ಕಟ್ಟಿಹಾಕಿದ್ದರಿಂದ ಸತ್ತ ಕುರಿಯ ದೇಹವನ್ನು ಹೊತ್ತೊಯ್ಯಲು ಸಾಧ್ಯವಾಗಿಲ್ಲ. ಪಕ್ಕದಲ್ಲೇ ಇದ್ದ ಮತ್ತೊಂದು ಕುರಿಯ ಮೇಲೆ ಧಾಳಿ ನಡೆಸಿ ಗಾಯಗೊಳಿಸಿದೆ.
ಇದರೊಂದಿಗೆ ಚಿಕ್ಕತೋಳೂರು ಗ್ರಾಮದ ಹೆಚ್.ಟಿ. ತಮ್ಮಯ್ಯ ಅವರು ಗ್ರಾಮ ಸಮೀಪದ ಬೆಟ್ಟದಲ್ಲಿ ಮೇಯಲು ಬಿಟ್ಟಿದ್ದ ಕುರಿಗಳನ್ನು ಚಿರತೆ ದಾಳಿ ನಡೆಸಿ ತಿಂದು ಹಾಕಿದೆ. ಈ ಘಟನೆಯಿಂದ ಸುತ್ತಮುತ್ತಲಿನ ಗ್ರಾಮದ ಜನರಲ್ಲಿ ಆತಂಕ ನಿರ್ಮಾಣವಾಗಿದ್ದು, ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಒಂದೇ ಚಿರತೆ ಕೂತಿ ಹಾಗೂ ಚಿಕ್ಕತೋಳೂರು ಭಾಗದಲ್ಲಿ ಧಾಳಿ ನಡೆಸಿದೆಯೇ-ಇಲ್ಲವೇ ಎಂಬುದನ್ನು ಖಚಿತಪಡಿಸಿಕೊಳ್ಳಲು ಅರಣ್ಯ ಇಲಾಖಾಧಿಕಾರಿಗಳು ಕಾರ್ಯಾಚರಣೆ ನಡೆಸುತ್ತಿದ್ದಾರೆ.