ಮಡಿಕೇರಿ, ಫೆ. ೨೮: ಕೋಟ್ಯಂತರ ಜನರ ಜೀವನಾಡಿಯಾಗಿರುವ ಕಾವೇರಿ ನದಿ ನೀರು ತವರಿನಲ್ಲೇ ಕಲುಷಿತಗೊಳ್ಳುತ್ತಿದ್ದರೂ ಯಾವುದೇ ಕ್ರಮಕ್ಕೆ ಮುಂದಾಗದಿರುವುದು ಜಿಲ್ಲಾಡಳಿತದ ಮೌನಕ್ಕೆ ಕಾರಣವಾಗಿದೆ ಎಂದು ಕಾರ್ಮಿಕ ಸಂಘಟನೆಯ ಮುಖಂಡ ಪಿ.ಆರ್. ಭರತ್ ಆರೋಪಿಸಿದ್ದಾರೆ.

ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ನದಿ ನೀರನ್ನು ಪ್ರತಿವರ್ಷ ಪರಿಶೀಲನೆ ಸಂದರ್ಭ ಜಾನುವಾರುಗಳು ಕೂಡ ಕುಡಿಯಲು ಯೋಗ್ಯವಲ್ಲದ ನೀರೆಂದು ಘೋಷಣೆ ಮಾಡಿದ್ದರು. ಆದರೂ ಮುಂಜಾಗ್ರತಾ ಕ್ರಮಕೈಗೊಳ್ಳದ ಪಂಚಾಯಿತಿ ಹಾಗೂ ಜಿಲ್ಲಾಡಳಿತ ನಿರ್ಲಕ್ಷö್ಯ ತೋರುವುದರಿಂದಲೇ ನದಿ ಕಲುಷಿತಗೊಳ್ಳುತ್ತಿದೆ.

ಸಿದ್ದಾಪುರ - ನೆಲ್ಲಿಹುದಿಕೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಹಲವು ವರ್ಷಗಳಿಂದಲೂ ತ್ಯಾಜ್ಯ ಸುರಿಯಲು ಸೂಕ್ತ ಜಾಗದ ವ್ಯವಸ್ಥೆ ಇಲ್ಲದೇ ಕಾವೇರಿ ನದಿ ದಡ ಸೇರಿದಂತೆ ಗ್ರಾಮ ವ್ಯಾಪ್ತಿಗಳಲ್ಲಿ ತ್ಯಾಜ್ಯ ವಿಲೇವಾರಿ ಮಾಡಲಾಗುತ್ತಿದೆ.

ಸ್ವಚ್ಛತೆ, ಪರಿಸರ ಜಾಗೃತಿ ಮೂಡಿಸಬೇಕಾದ ಪಂಚಾಯಿತಿ ಎಲ್ಲೆಂದರಲ್ಲಿ ತ್ಯಾಜ್ಯ ವಿಲೇವಾರಿಗೆ ಮುಂದಾಗಿರುವುದರಿAದ ಎರಡು ಗ್ರಾಮಗಳು ತ್ಯಾಜ್ಯದ ರಾಶಿಯೊಂದಿಗೆ ಸಾರ್ವಜನಿಕರು, ಶಾಲಾ ವಿದ್ಯಾರ್ಥಿಗಳು ಮೂಗು ಮುಚ್ಚಿ ನಡೆದಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಕಾವೇರಿ ನದಿ ದಡದಲ್ಲಿ ತ್ಯಾಜ್ಯದ ರಾಶಿ ಹೆಚ್ಚಿನ ಸಂಖ್ಯೆಯಲ್ಲಿ ಕಂಡುಬರುತ್ತಿದ್ದು ಗ್ರಾಮದ ಚರಂಡಿಗಳ ಮೂಲಕ ಕಲುಷಿತ ನೀರು ನೇರವಾಗಿ ನದಿ ಸೇರುತ್ತಿದೆ.

ಇದರೊಂದಿಗೆ ಕಾಫಿ ಪಲ್ಪಿಂಗ್ ನೀರನ್ನು ರಾತ್ರಿ ವೇಳೆಯಲ್ಲಿ ಹರಿಯ ಬಿಡಲಾಗುತ್ತಿದೆ. ಇದರಿಂದ ಜಲಚರಗಳು ನಾಶವಾಗುತ್ತಿವೆ.

ಜನಪ್ರತಿನಿಧಿಗಳು ಶುಚಿತ್ವ ಹಾಗೂ ಪರಿಸರ ಕಾಳಜಿಯನ್ನು ತೋರದೆ ಗ್ರಾಮ ಪಂಚಾಯಿತಿಗಳಿಗೆ ಸೂಕ್ತ ಜಾಗದ ವ್ಯವಸ್ಥೆ ಮಾಡಿಕೊಡಲು ಸಾಧ್ಯವಾಗದೆ ಅಸಹಾಯಕತೆ ತೋರುತ್ತಿರುವುದರಿಂದ ಜನರು ಮೂಗು ಮುಚ್ಚಿ ಬರಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಈ ಹಿಂದೆ ಡಾಮಿನೊಸ್ ಯುವಕ ಸಂಘ ನದಿ ದಡವನ್ನು ಶುಚಿಗೊಳಿಸಿ ಹೂ ಗಿಡಗಳನ್ನು ನೆಟ್ಟು ಪೋಷಿಸುತ್ತಿದ್ದ ಸಂದರ್ಭ ಗ್ರಾಮ ಪಂಚಾಯಿತಿ ಸೂಕ್ತ ಸಹಕಾರ ನೀಡದೆ ಪಾಲನೆಯು ಮಾಡದೆ ನಿರ್ಲಕ್ಷö್ಯದ ಪರಿಣಾಮ ಕಾವೇರಿ ನದಿ ದಡ ಪರಿಸರ ಕಲುಷಿತ ವಾತಾವರಣದಲ್ಲಿ ಕಂಡುಬರುತ್ತದೆ.

ಜಿಲ್ಲೆ ಸೇರಿದಂತೆ ವಿವಿಧ ರಾಜ್ಯಗಳು ಹಾಗೂ ಬೆಂಗಳೂರಿಗೆ ಕಾವೇರಿ ನದಿ ನೀರು ಪೂರೈಕೆ ಆಗುತ್ತಿದ್ದು ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆ ಇದೆ.

ಸರ್ಕಾರ ನದಿ ಸಂರಕ್ಷಣೆಯೊAದಿಗೆ ಶುಚಿತ್ವಕ್ಕೆ ಆದ್ಯತೆ ನೀಡುವುದರ ಮೂಲಕ ಪಂಚಾಯಿತಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳದಿದ್ದಲ್ಲಿ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.

ಡಾಮಿನೊಸ್ ಯುವಕ ಸಂಘದ ಅಧ್ಯಕ್ಷ ಶೌಕತ್ ಮಾತನಾಡಿ, ಹಲವು ವರ್ಷಗಳಿಂದ ಸಂಘದ ಮೂಲಕ ಪರಿಸರ ಶುಚಿತ್ವಕ್ಕೆ ಆದ್ಯತೆ ನೀಡಿ ಸ್ವಚ್ಛಗೊಳಿಸುವ ಕಾರ್ಯಕ್ರಮವನ್ನು ಹಮ್ಮಿಕೊಂಡು ಈ ಹಿಂದೆ ನದಿ ಪ್ರದೇಶವನ್ನು ತ್ಯಾಜ್ಯ ಮುಕ್ತವನ್ನಾಗಿ ಮಾಡಿ ಹೂವಿನ ಗಿಡಗಳನ್ನು ನೀಡಲಾಗಿತ್ತು.

ಗ್ರಾಮ ಪಂಚಾಯಿತಿ ನಿರ್ಲಕ್ಷö್ಯದಿಂದ ಎಲ್ಲವೂ ತ್ಯಾಜ್ಯಮಯವಾಗಿದೆ. ರಾಶಿ ರಾಶಿ ತ್ಯಾಜ್ಯ ತುಂಬಿತುಳುಕುತ್ತಿದ್ದರೂ ಶುಚಿತ್ವಕ್ಕೂ ಮುಂದಾಗದೆ ನಿರ್ಲಕ್ಷö್ಯ ತೋರುತ್ತಿರುವ ಪರಿಣಾಮ ತ್ಯಾಜ್ಯ ನದಿಯೊಂದಿಗೆ ಸೇರಿ ಮಲಿನವಾಗುತ್ತಿದೆ. ಈ ಬಗ್ಗೆ ಜಿಲ್ಲಾಡಳಿತ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.

ಸಾಮಾಜಿಕ ಕಾರ್ಯಕರ್ತ ಅಜೀಜ್ ಮಾತನಾಡಿ, ನೆಲ್ಲಹುದಿಕೇರಿ ಸಿದ್ದಾಪುರ ಪಂಚಾಯಿತಿ ಆಡಳಿತದ ನಿರ್ಲಕ್ಷö್ಯದಿಂದ ಪವಿತ್ರ ಕಾವೇರಿ ನದಿ ಕಲುಷಿತಗೊಳ್ಳುತ್ತಿದೆ.

ತ್ಯಾಜ್ಯ ವಿಲೇವಾರಿಗೆ ಸೂಕ್ತ ಜಾಗ ಕಂಡುಕೊಳ್ಳಲಾಗದ ಗ್ರಾಮ ಪಂಚಾಯಿತಿ ಆಡಳಿತ ಮಂಡಳಿ. ಪರೋಕ್ಷವಾಗಿ ತ್ಯಾಜ್ಯ ಎಲ್ಲೆಂದರಲ್ಲಿ ಸುರಿಯಲು ಮುಂದಾಗಿದೆ ಗ್ರಾಮ ಪಂಚಾಯಿತಿ ಆಡಳಿತದ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.

- ಎಸ್.ಎಂ. ಮುಬಾರಕ್