ಸೋಮವಾರಪೇಟೆ, ಫೆ. ೨೮: ಸೋಮವಾರಪೇಟೆ ವಲಯ ಅರಣ್ಯಕ್ಕೆ ಒಳಪಡುವ ಮಾದಾಪುರ ಶಾಖಾ ವ್ಯಾಪ್ತಿಯಲ್ಲಿ ನಡೆದಿರುವ ಅಕ್ರಮ ಮರಹನನ ಕೃತ್ಯಕ್ಕೆ ಸಹಕಾರ ನೀಡಿದ ಆರೋಪದಡಿ ಡಿ.ಆರ್.ಎಫ್. ಓ. ಅವರನ್ನು ಕರ್ತವ್ಯದಿಂದ ಅಮಾನತು ಮಾಡಲಾಗಿದೆ.
ಮಾದಾಪುರ ಗ್ರಾಮದ ಎನ್.ಜಿ.ಕೀರ್ತಿ ಪ್ರಸಾದ್ ಎಂಬವರಿಗೆ ಸೇರಿದ ಯಡವಾರೆ ಗ್ರಾಮದ ಸರ್ವೆ ನಂಬರ್ ೬೦/೧ರ ಜಾಗದಲ್ಲಿ ಸ್ವಂತ ಉಪಯೋಗಕ್ಕೆಂದು ಮೂರು ಹಲಸಿನ ಮರಗಳನ್ನು ಕಡಿಯಲು ಇಲಾಖೆಯಿಂದ ಅನುಮತಿ ನೀಡಲಾಗಿತ್ತು. ಈ ಜಾಗವನ್ನು ಮರೆಮಾಚಿ ಬೇರೊಂದು ಜಾಗದ ಸರ್ವೆ ನಂಬರ್ ೫೪ ರಲ್ಲಿ ಅಕ್ರಮವಾಗಿ ಆರು ಹಲಸಿನ ಮರಗಳನ್ನು ಕಡಿದು ಸಾಗಿಸಿರುವುದು ತನಿಖೆಯ ವೇಳೆ ಬೆಳಕಿಗೆ ಬಂದಿದ್ದು, ಕರ್ತವ್ಯ ಲೋಪ ಆರೋಪದ ಮೇರೆ ಡಿ.ಆರ್.ಎಫ್.ಓ. ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಉಲ್ಲಾಸ್ ಪ್ರಕಾಶ್ ಎಂಬವರನ್ನು ಸೇವೆಯಿಂದ ಅಮಾನತು ಮಾಡಲಾಗಿದೆ.
ಈ ಪ್ರಕರಣಕ್ಕೆ ಸಂಬAಧಿಸಿದAತೆ ಮಡಿಕೇರಿ ಅರಣ್ಯ ಸಂಚಾರಿ ದಳಕ್ಕೆ ತನಿಖೆಯ ಉಸ್ತುವಾರಿ ವಹಿಸಿದ್ದು, ಅದರಂತೆ ತನಿಖಾ ವರದಿಯನ್ನು ಅರಣ್ಯ ಸಂರಕ್ಷಣಾಧಿಕಾರಿಗಳಾದ ಸೋನಾಲ್ ವೃಷ್ಣಿ ಅವರಿಗೆ ಸಲ್ಲಿಸಿದ ಮೇರೆ ಈ ಕ್ರಮವಾಗಿದೆ.
ತನಿಖಾ ತಂಡದ ಸಿಬ್ಬಂದಿಗಳು ಜಾಗವನ್ನು ತಪಾಸಣೆ ಮಾಡಿದ ಸಂದರ್ಭ ಯಡವಾರೆಯ ಎನ್.ಜಿ. ಕೀರ್ತಿಪ್ರಸಾದ್ ಅವರ ಮನೆಯ ಹಿಂಭಾಗದ ಕಾಫಿ ತೋಟದಲ್ಲಿ ಆರು ಹಲಸಿನ ಮರಗಳನ್ನು ಅಕ್ರಮವಾಗಿ ಕಡಿದಿರುವುದು ಕಂಡು ಬಂದಿದೆ.
ಈ ನಿಟ್ಟಿನಲ್ಲಿ ಅಕ್ರಮವಾಗಿ ಮರ ಕಡಿಯಲು ಸಹಕಾರ ನೀಡಿದ್ದೂ ಅಲ್ಲದೆ, ಮರ ಕಡಿಯಲು ಅನುಮತಿ ಪಡೆದ ಜಾಗವನ್ನು ಬಿಟ್ಟು ಬೇರೊಂದು ಜಾಗದಲ್ಲಿ ಕಡಿಯಲು ಅವಕಾಶ ಮಾಡಿಕೊಟ್ಟಿದ್ದು, ಮೂರರ ಬದಲಿಗೆ ಆರು ಮರಗಳನ್ನು ಕಡಿಯಲು ಸಹಕಾರ ನೀಡಿದ ಆರೋಪದ ಮೇರೆ ಡಿ.ಆರ್.ಎಫ್. ಓ. ಉಲ್ಲಾಸ್ ಪ್ರಕಾಶ್ ಅವರನ್ನು ಅಮಾನತು ಮಾಡಲಾಗಿದೆ.
ಇದರೊಂದಿಗೆ ಅನುಮತಿ ಪಡೆಯದೇ ಮರ ಕಡಿದ ಸರ್ವೇ ನಂ. ೫೪ರ ಜಾಗದ ಮಾಲೀಕರ ಮೇಲೂ ಅರಣ್ಯ ಇಲಾಖೆ ಮೊಕದ್ದಮೆ ದಾಖಲಿಸಲಾಗಿದೆ.