ನಾಪೋಕ್ಲು, ಫೆ. ೨೭: ಹಿಂದೂ ಸಂಗಮ ಕಾರ್ಯಕ್ರಮದ ಪ್ರಚಾರಾರ್ಥವಾಗಿ ವಾಹನದಲ್ಲಿ ಭಗವಾ ಧ್ವಜ ಅಳವಡಿಸಿದ್ದ ವಿಚಾರದಲ್ಲಿ ತಗಾದೆ ತೆಗೆದ ಅನ್ಯಕೋಮಿನ ಯುವಕರು ಹಿಂದೂ ಕಾರ್ಯಕರ್ತನ ಮೇಲೆ ತೀವ್ರ ಹಲ್ಲೆಗೈದ ಆರೋಪದಡಿ ನಾಪೋಕ್ಲು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ, ಈ ವಿಚಾರದಿಂದ ನಾಪೋಕ್ಲು ಪಟ್ಟಣದಲ್ಲಿ ಕೆಲ ಕಾಲ ಬಿಗುವಿನ ವಾತಾವರಣ ನಿರ್ಮಾಣಗೊಂಡಿತು. ರಸ್ತೆ ತಡೆ ಮಾಡಲಾಗಿದ್ದು ವಾಹನಗಳು ನಿಲುಗಡೆಗೊಂಡವು. ಬಳಿಕ ಪೊಲೀಸ್ ಅಧಿಕಾರಿಗಳು ಧಾವಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದರು. ಪ್ರಕರಣ ಸಂಬAಧ ಓರ್ವ ಆರೋಪಿಯನ್ನು ಬಂಧಿಸಿರುವುದಾಗಿ ಎಸ್.ಪಿ. ಬಿಂದುಮಣಿ ‘ಶಕ್ತಿ’ಗೆ ತಿಳಿಸಿದ್ದಾರೆ.

ದೊಡ್ಡಪುಲಿಕೋಟು ಗ್ರಾಮದ ಅಪ್ಪಚ್ಚಿರ ಗೌತಮ್ ಕಾರ್ಯಪ್ಪ ಎಂಬವರ ಮೇಲೆ ನಾಲ್ವರು ಯುವಕರು ಹಲ್ಲೆಗೈದಿದ್ದು ತಲೆ, ಹಣೆಯ ಭಾಗದಲ್ಲಿ ಪೆಟ್ಟಾಗಿರುವ ಅವರನ್ನು ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ಸೇರಿಸಲಾಗಿದೆ. ಈ ಕುರಿತು ಹಿಂದೂ ಸಂಗಮ ಪ್ರಚಾರಕ್ಕೆ ಬಂದಿದ್ದ ಕರವಂಡ ಲವ ನಾಣಯ್ಯ ಪೊಲೀಸರಿಗೆ ದೂರು ನೀಡಿದ್ದಾರೆ. ಇದರನ್ವಯ ನಾಪೋಕ್ಲು ಠಾಣೆಯಲ್ಲಿ ನಾಲ್ವರ ವಿರುದ್ಧ ವಿವಿಧ ಸೆಕ್ಷನ್‌ಗಳಡಿ ಎಫ್‌ಐಆರ್ ದಾಖಲಾಗಿದೆ.

ಏನಿದು ಘಟನೆ?

ಶುಕ್ರವಾರ ಸಂಜೆ ೪ ಗಂಟೆ ವೇಳೆಗೆ ನಾಪೋಕ್ಲುವಿನ ಪೊನ್ನಾಡ್ ಸೂಪರ್ ಮಾರ್ಕೆಟ್ ಎದುರು ಸಾಮಗ್ರಿ ಖರೀದಿಸಲೆಂದು ಗೌತಮ್ ಅವರು ಭಗವಾ ಧ್ವಜ ಕಟ್ಟಿದ್ದ ತಮ್ಮ ಪಿಕಪ್ ವಾಹನದಲ್ಲಿ ಬಂದಿದ್ದು, ಈ ವೇಳೆ ಲವ ನಾಣಯ್ಯ ಸಿಕ್ಕಿ ಧ್ವಜ ಕಟ್ಟಿದ್ದ ಕುರಿತು ಮಾತನಾಡುವಾಗ ಬಲಮಾವಟಿಯಲ್ಲಿ ತಾ. ೨೮ ರಂದು (ಇಂದು) ನಡೆಯಲಿರುವ ಹಿಂದೂ ಸಂಗಮದ ಕಾರ್ಯಕ್ರಮದ ಕುರಿತು ಪ್ರಚಾರಕ್ಕೆ ಬಂದಿರುವುದಾಗಿ ಗೌತಮ್ ತಿಳಿಸಿದ್ದಾರೆ.

ಇದನ್ನು ನೋಡಿ ಪಕ್ಕದ ಅಂಗಡಿಯಲ್ಲಿದ್ದ ಸುಹೇಲ್ ಎಂಬಾತ ಕಬ್ಬಿಣದ ರಾಡ್‌ನಿಂದ, ಸಿದ್ಧಿಕ್ ಎಂಬಾತ ಬೇಸ್‌ಬಾಲ್ ಬ್ಯಾಟ್‌ನಿಂದ ಗೌತಮ್ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಇವರೊಂದಿಗೆ ನಾಫಿ ಎಂಬಾತನೂ ಹಲ್ಲೆಯಲ್ಲಿ ಭಾಗಿಯಾಗಿದ್ದು, ರಾಶೀದ್ ಎಂಬಾತನೂ ಸಹಕರಿಸಿರುವುದಾಗಿ ಕರವಂಡ ಲವ ನಾಣಯ್ಯ ನೀಡಿರುವ ದೂರಿನಲ್ಲಿ ಉಲ್ಲೇಖಿಸಲಾಗಿದೆ. ೪ಐದನೇ ಪುಟಕ್ಕೆ

೪ಐದನೇ ಪುಟಕ್ಕೆ ಈ ಸಂಬAಧ ಎಫ್.ಐ.ಆರ್. ದಾಖಲಾಗಿದೆ. ನಂತರ ಜನರು ಸೇರುತ್ತಿದಂತೆ ಕೆಂಪು ಬಣ್ಣದ ಅಲ್ಟೋ ಕಾರಿನಲ್ಲಿ ಆರೋಪಿಗಳು ಪರಾರಿಯಾಗಿದ್ದಾರೆ. ಕೊಲೆ ಮಾಡುವ ಉದ್ದೇಶದಿಂದ ಈ ಕೃತ್ಯ ಎಸಗಲಾಗಿದೆ ಎಂದು ಆರೋಪಿಸಲಾಗಿದೆ. ಸದ್ಯ ಓರ್ವನನ್ನು ಪೊಲೀಸರು ಬಂಧಿಸಿರುವ ಕುರಿತು ಮಾಹಿತಿ ಲಭ್ಯವಾಗಿದೆ.

ರಸ್ತೆ ತಡೆ - ಬಿಗುವಿನ ವಾತಾವರಣ

ಘಟನೆಯ ಕುರಿತು ವಿಷಯ ತಿಳಿಯುತ್ತಿದ್ದಂತೆ ಹಿಂದೂ ಪರ ಸಂಘಟನೆ ಹಾಗೂ ಬಿಜೆಪಿ ಪ್ರಮುಖರು ಸ್ಥಳಕ್ಕೆ ಆಗಮಿಸಿ ರಸ್ತೆ ತಡೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹಿಸಿದರು.

ಮಾಜಿ ಶಾಸಕ ಕೆ.ಜಿ. ಬೋಪಯ್ಯ ಕೂಡ ಸ್ಥಳಕ್ಕೆ ದೌಡಾಯಿಸಿ ಅಸಮಾಧಾನ ವ್ಯಕ್ತಪಡಿಸಿದರು. ಈ ಸಂದರ್ಭ ಮಾತನಾಡಿದ ಅವರು, ಆರ್‌ಎಸ್‌ಎಸ್ ಜನ್ಮಶತಾಬ್ಧಿ ಅಂಗವಾಗಿ ನಡೆಯುತ್ತಿರುವ ಹಿಂದೂ ಸಂಗಮ ವ್ಯವಸ್ಥಿತ ಹಾಗೂ ಶಾಂತಿಯುತವಾಗಿ ನಡೆಯುತ್ತಿದೆ. ಸಮಾಜಕ್ಕೆ ಸಂದೇಶ ನೀಡುವ ಕೆಲಸವಾಗುತ್ತಿದೆ. ಕೊನೆ ಹಂತದ ಕಾರ್ಯಕ್ರಮಕ್ಕೆ ಅಡ್ಡಿ ಉಂಟು ಮಾಡುವ ಕೆಲಸವಾಗಿದೆ. ತಪ್ಪಿತಸ್ಥರಾದ ಎಲ್ಲರನ್ನೂ ಬಂಧಿಸಬೇಕು. ಜಿಲ್ಲೆಯಲ್ಲಿ ಗಾಂಜಾ, ಗೋ ಮಾಂಸ ಸಾಗಾಟ ಹೆಚ್ಚುತ್ತಲೇ ಇದೆ. ಇದನ್ನು ತಪ್ಪಿಸಬೇಕು. ಈ ವಿಷಯದಲ್ಲಿ ಪೊಲೀಸರಿಂದ ದಾಳಿ ಹೆಚ್ಚಾಗಬೇಕು. ಗಾಂಜಾ ಸೇವನೆ-ಮಾರಾಟವನ್ನು ತಡೆಗಟ್ಟಬೇಕು ಎಂದು ಆಗ್ರಹಿಸಿದರು.

ಈ ಹಿಂದೆ ನಾಪೋಕ್ಲಿನಲ್ಲಿ ನಡೆದ ಅಹಿತಕರ ಘಟನೆ ಮರುಕಳಿಸದಂತೆ ಪೊಲೀಸ್ ಇಲಾಖೆ ಎಚ್ಚರಿಕೆ ವಹಿಸಬೇಕು. ಹಿಂದೂಗಳ ರಕ್ಷಣೆ ಮಾಡಬೇಕು ಎಂದು ಆಗ್ರಹಿಸಿದರು.

ಅಪ್ಪಚೆಟ್ಟೋಳಂಡ ಮನು ಮುತ್ತಪ್ಪ ಮಾತನಾಡಿ, ಘಟನೆಯನ್ನು ಖಂಡಿಸಿದರು. ಹಿಂದೂಗಳ ರಕ್ಷಣೆ ಆಗಬೇಕೆಂಬುದು ನಮ್ಮ ಉದ್ದೇಶ. ಆರೋಪಿಗಳನ್ನು ಬಂಧಿಸದಿದ್ದಲ್ಲಿ ಹೋರಾಟ ತೀವ್ರಗೊಳಿಸಲಾಗುವುದು ಎಂದು ಎಚ್ಚರಿಸಿದರು.

ಹಲ್ಲೆಯಿಂದ ನಾಪೋಕ್ಲು ಪಟ್ಟಣದಲ್ಲಿ ಕೆಲ ಕಾಲ ಬಿಗುವಿನ ವಾತಾವರಣ ಸೃಷ್ಟಿಯಾಯಿತು. ಸುತ್ತಮುತ್ತಲಿನ ಗ್ರಾಮಗಳಿಂದ ನೂರಾರು ಹಿಂದೂಪರ ಕಾರ್ಯಕರ್ತರು, ಸಾರ್ವಜನಿಕರು ನಾಪೋಕ್ಲು ಪಟ್ಟಣಕ್ಕೆ ಆಗಮಿಸಿ ಘಟನೆಯನ್ನು ಖಂಡಿಸಿದರು.

ಈ ಸಂದರ್ಭ ಪ್ರಮುಖರಾದ ತಳೂರು ಕಿಶೋರ್ ಕುಮಾರ್, ಕರವಂಡ ಅಪ್ಪಣ್ಣ, ಪ್ರತೀಪ್, ಕೇಲೇಟಿರ ವಾಸು ಮುದ್ದಯ್ಯ, ಕಾಂಗಾAಡ ಜಾಲಿ ಪೂವಪ್ಪ, ಕುಲ್ಲೇಟಿರ ಅಜಿತ್, ಉಮಾ ಪ್ರಭು, ವಿಶ್ವ ಹಿಂದೂ ಪರಿಷತ್ ಪ್ರಮುಖ ರಮೇಶ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಪೊಲೀಸ್ ಇಲಾಖೆ ಹೆಚ್ಚುವರಿ ಭದ್ರತೆಯನ್ನು ಪಟ್ಟಣದಲ್ಲಿ ಕಲ್ಪಿಸಿತು. ವೀರಾಜಪೇಟೆ ಡಿವೈಎಸ್‌ಪಿ ಮಹೇಶ್ ಕುಮಾರ್, ಸೋಮವಾರಪೇಟೆ ಡಿವೈಎಸ್‌ಪಿ ಚಂದ್ರಶೇಖರ್, ವೃತ್ತ ನಿರೀಕ್ಷಕ ಅನೂಪ್ ಮಾದಪ್ಪ, ಮಡಿಕೇರಿ ಗ್ರಾಮಾಂತರ ಇನ್ಸ್ಪೆಕ್ಟರ್ ಚಂದ್ರಶೇಖರ್, ನಾಪೋಕ್ಲು ಠಾಣಾಧಿಕಾರಿ ರಾಘವೇಂದ್ರ ಸೇರಿದಂತೆ ಅಧಿಕಾರಿಗಳ ತಂಡ ತಕ್ಷಣ ದೌಡಾಯಿಸಿ ಅಹಿತಕರ ಘಟನೆ ನಡೆಯದಂತೆ ಎಚ್ಚರಿಕೆ ವಹಿಸಿ ಪ್ರತಿಭಟನಾಕಾರರ ಮನವೊಲಿಸುವ ಪ್ರಯತ್ನವನ್ನು ಮಾಡಿದರು. ಆರೋಪಿಗಳ ಪೈಕಿ ಓರ್ವನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ ಮೇರೆ ಆಕ್ರೋಶ ಸ್ವಲ್ಪ ಮಟ್ಟಿಗೆ ಕಡಿಮೆಯಾಯಿತು. ಆದರೆ, ಉಳಿದ ಆರೋಪಿಗಳನ್ನು ತಕ್ಷಣ ಬಂಧಿಸಬೇಕೆAದು ಪಟ್ಟುಹಿಡಿದರು.

ಕೆಲಕಾಲ ಸಂಚಾರ ವ್ಯವಸ್ಥೆಯೂ ಅಸ್ತವ್ಯಸ್ತವಾಯಿತು. ಪೊಲೀಸರು ಪ್ರತಿಭಟನಾಕಾರರನ್ನು ನಿಯಂತ್ರಿಸಲು ಹರಸಾಹಸಪಟ್ಟರು.

ಖಂಡನೆ

ಘಟನೆಯನ್ನು ಜಿಲ್ಲಾ ಬಿಜೆಪಿ ಸೇರಿದಂತೆ ಪ್ರಮುಖರು ಖಂಡಿಸಿದ್ದು, ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ.

ಜಿಲ್ಲಾ ಬಿಜೆಪಿ ಅಧ್ಯಕ್ಷ ನಾಪಂಡ ರವಿ ಕಾಳಪ್ಪ ಈ ಕುರಿತು ಹೇಳಿಕೆ ನೀಡಿದ್ದು, ಜಿಲ್ಲೆಯಲ್ಲಿ ಹಿಂದೂ ಸಂಗಮ ಅತ್ಯಂತ ವ್ಯವಸ್ಥಿತ ಹಾಗೂ ಶಾಂತಿಯುತವಾಗಿ ನಡೆಯುತ್ತಿದೆ. ಕೋಮು ಗಲಭೆ ಸೃಷ್ಟಿಸುವ ಉದ್ದೇಶದಿಂದ ಹಿಂದೂ ಕಾರ್ಯಕರ್ತನ ಮೇಲೆ ಹಲ್ಲೆ ಮಾಡಲಾಗಿದೆ. ಇದು ಅತ್ಯಂತ ಖಂಡನೀಯ. ಹಲ್ಲೆ ಮಾಡಿದವರನ್ನು ಕೂಡಲೇ ಬಂಧಿಸಬೇಕು. ಇದರ ಹಿಂದೆ ಮತ್ತಷ್ಟು ಮಂದಿಯ ಕೈವಾಡ ಇರುವ ಅನುಮಾನವಿದೆ. ಈ ಕುರಿತು ತನಿಖೆಯಾಗಬೇಕು. ಕ್ಷೇತ್ರದ ಶಾಸಕರು ಸರಕಾರದಲ್ಲಿ ಪ್ರಭಾವಿಗಳಾಗಿದ್ದು, ನಿಷ್ಪಕ್ಷಪಾತ ತನಿಖೆಗೆ ಸೂಚಿಸಬೇಕು. ಸಂತ್ರಸ್ತನಿಗೆ ನ್ಯಾಯ ದೊರಕಿಸಬೇಕೆಂದು ಒತ್ತಾಯಿಸಿದ ಅವರು, ಕ್ರಮಕೈಗೊಳ್ಳದೆ ಜಿಲ್ಲೆಯ ಶಾಂತಿ, ಸುವ್ಯವಸ್ಥೆ ಹದಗೆಟ್ಟರೆ ಸರಕಾರ ಹಾಗೂ ಪೊಲೀಸ್ ಇಲಾಖೆಯೇ ನೇರ ಹೊಣೆಯಾಗುತ್ತದೆ ಎಂದಿದ್ದಾರೆ.

ನಾಪೋಕ್ಲುವಿನಲ್ಲಿ ಹಿಂದೂ ಸಂಗಮ ಕಾರ್ಯಕ್ರಮ ನಿಮಿತ್ತ ಕಾರ್ಯ ನಿರ್ವಹಿಸುತ್ತಿದ್ದ ಕಾರ್ಯಕರ್ತನ ಮೇಲೆ ವಿನಾ ಕಾರಣ ಹಲ್ಲೆ ಮಾಡಿರುವದು ತೀವ್ರ ಖಂಡನೀಯ. ಈ ಪ್ರಕರಣದಲ್ಲಿ ಭಾಗಿಯಾಗಿರುವವರ ಮೇಲೆ ಪೊಲೀಸ್ ಇಲಾಖೆ ಕ್ರಮ ಕೈಗೊಳ್ಳುವದರೊಂದಿಗೆ ತಕ್ಕ ಶಿಕ್ಷೆ ವಿಧಿಸಬೇಕು. ಶಾಂತಿಯ ನಾಡಾದ ಕೊಡಗು ಜಿಲ್ಲೆಯಲ್ಲಿ ಇಂತಹ ಕೃತ್ಯ ಎಸಗುವವರ ಮೇಲೆ ಗಮನ ಹರಿಸುವದರೊಂದಿಗೆ ಇನ್ನು ಮುಂದಕ್ಕೆ ಇಂತಹ ಘಟನೆಗಳಿಗೆ ಜಿಲ್ಲಾಡಳಿತ ಆಸ್ಪದ ನೀಡದಂತೆ ಎಚ್ಚರವಹಿಸಬೇಕು ಎಂದು ಮಾಜಿ ಸಚಿವ ಎಂ.ಪಿ. ಅಪ್ಪಚ್ಚು ರಂಜನ್ ತಿಳಿಸಿದ್ದಾರೆ.

ವಿಧಾನ ಪರಿಷತ್ತು ಮಾಜಿ ಸದಸ್ಯ ಎಂ.ಪಿ. ಸುನಿಲ್ ಸುಬ್ರಮಣಿ ಕೂಡ ಘಟನೆ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸಾಮರಸ್ಯದಿಂದ ಒಂದಾಗಿ ಬದುಕಬೇಕೆಂಬುದು ನಮ್ಮ ಉದ್ದೇಶವಾಗಿದೆ. ಇಂತಹ ಕೃತ್ಯದಿಂದ ಸಮಾಜದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಗೌತಮ್ ಅವರ ಪ್ರಾಣಕ್ಕೆ ಅಪಾಯ ಬಂದಿದ್ದರೆ ಯಾರು ಹೊಣೆಯಾಗುತ್ತಿದ್ದರು ಎಂದು ಪ್ರಶ್ನಿಸಿದ ಅವರು, ಪೊಲೀಸ್ ಇಲಾಖೆ ಸೂಕ್ತ ತನಿಖೆ ಕೈಗೊಳ್ಳಬೇಕು. ಸರಕಾರವೂ ಇಲಾಖೆಗೆ ಸ್ವತಂತ್ರö್ಯ ನೀಡಬೇಕು. ತಪ್ಪಿತಸ್ಥರನ್ನು ಕೂಡಲೇ ಬಂಧಿಸಬೇಕು. ನೆಮ್ಮದಿಯಿಂದ ಬದುಕುವ ವಾತಾವರಣ ಸೃಷ್ಟಿಯಾಗಬೇಕೆಂದರು.

ಚಿತ್ರ, ವರದಿ : ದುಗ್ಗಳ ಸದಾನಂದ