ಸಿದ್ದಾಪುರ, ಫೆ. ೨೫: ಭಾರತೀಯ ಪರಂಪರೆ, ಸಂಸ್ಕೃತಿ, ಆಚಾರ-ವಿಚಾರಗಳನ್ನು ರಕ್ಷಣೆ ಮಾಡುವುದು ಪ್ರತಿಯೊಬ್ಬರ ಕರ್ತವ್ಯ ಎಂದು ಸಂಸದ ಯದುವೀರ್ ಒಡೆಯರ್ ಕರೆ ನೀಡಿದರು.

ಸಿದ್ದಾಪುರದ ಶ್ರೀ ನಾರಾಯಣ ಗುರು ಸಭಾಂಗಣದಲ್ಲಿ ಕೊಡಗು ಎಸ್.ಎನ್.ಡಿ.ಪಿ. ವನಿತಾ ಸಮಾವೇಶ ಹಾಗೂ ಯೂನಿಯನ್ ರಚನೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಶ್ರೀ ನಾರಾಯಣ ಗುರುಗಳು ಭಾರತೀಯ ಸಂಸ್ಕೃತಿ ಮತ್ತು ಪರಂಪರೆಯನ್ನು ಉಳಿಸಲು ಶ್ರಮಿಸಿದ್ದಾರೆ. ಅವರ ಆದರ್ಶ, ತತ್ವ, ಸಿದ್ಧಾಂತ, ಸಂದೇಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಬದುಕಬೇಕು ಎಂದರು.

ಎಸ್.ಎನ್.ಡಿ.ಪಿ. ಉತ್ತಮ ಸಂಘಟನೆಯಾಗಿದ್ದು, ಸಮಾಜದ ಏಳಿಗೆ ಹಾಗೂ ಒಳಿತಿಗಾಗಿ ನಿರಂತರವಾಗಿ ಸೇವಾ ಕಾರ್ಯಗಳಲ್ಲಿ ಸಮಾಜಮುಖಿಯಾಗಿ ತೊಡಗಿಸಿಕೊಂಡಿದೆ ಎಂದ ಅವರು, ಸಿದ್ದಾಪುರದಲ್ಲಿ ಎಸ್.ಎನ್.ಡಿ.ಪಿ. ಕಟ್ಟಡದ ಬಳಿ ಸಮುದಾಯ ಭವನ ನಿರ್ಮಾಣ ಮಾಡಲು ಅನುದಾನ ನೀಡುವುದಾಗಿ ಇದೇ ಸಂದರ್ಭ ಭರವಸೆಯನ್ನು ನೀಡಿದರು.

ಪಾಸ್‌ಪೋರ್ಟ್ ಸಮ್ಮೇಳನ

ಕೊಡಗು ಜಿಲ್ಲೆಯ ಅಭಿವೃದ್ಧಿಗೆ ಸಾಕಷ್ಟು ಅನುದಾನವನ್ನು ಈಗಾಗಲೇ ಒದಗಿಸಲಾಗಿದೆ. ಅಭಿವೃದ್ಧಿ ಕಾರ್ಯಗಳು ಸಾಗುತ್ತಿದೆ. ರೈಲು ಮಾರ್ಗ ಯೋಜನೆ ಕೂಡ ಪರಿಸರಕ್ಕೆ ಹಾನಿಯಾಗದಂತೆ ಮುಂದುವರೆಯಲಿದೆ. ಜಿಲ್ಲೆಯಲ್ಲಿ ಪಾಸ್‌ಪೋರ್ಟ್ ಸಮ್ಮೇಳನವನ್ನು ಏಪ್ರಿಲ್ ತಿಂಗಳಿನಲ್ಲಿ ನಡೆಸಲಾಗುವುದು ಎಂದು ತಿಳಿಸಿದ ಅವರು, ಈ ಬಗ್ಗೆ ಕೇಂದ್ರ ಸಚಿವರೊಂದಿಗೆ ಚರ್ಚಿಸಲಾಗಿದೆ ಎಂದು ಮಾಹಿತಿ ನೀಡಿದರು.

ಜಿಲ್ಲಾ ಎಸ್‌ಎನ್‌ಡಿಪಿ ಯೂನಿಯನ್ ಜಿಲ್ಲಾಧ್ಯಕ್ಷ ವಿ.ಕೆ. ಲೋಕೇಶ್ ಮಾತನಾಡಿ, ಶ್ರೀ ನಾರಾಯಣ ಗುರುಗಳು ಅಸ್ಪೃಶ್ಯತೆ ವಿರುದ್ಧ ಹೋರಾಡಿದ ಮಹಾನ್ ಚೇತನ. ಅವರ ತತ್ವ ಸಿದ್ಧಾಂತಗಳನ್ನು ಮೈಗೂಡಿಸಿಕೊಳ್ಳಬೇಕು. ೧೯೦೩ ರಲ್ಲಿ ಎಸ್.ಎನ್.ಡಿ.ಪಿ. ಸಂಘಟನೆ ಪ್ರಾರಂಭವಾಗಿದ್ದು, ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಿ ಸಾಮಾಜಿಕವಾಗಿ ತೊಡಗಿಸಿಕೊಂಡಿದೆ. ಪ್ರತಿಯೊಬ್ಬ ಪೋಷಕರು ಮಕ್ಕಳಿಗೆ ಉತ್ತಮ ಶಿಕ್ಷಣವನ್ನು ನೀಡಬೇಕು. ದುಶ್ಚಟಗಳಿಂದ ದೂರ ಸರಿಯಬೇಕು ಎಂದು ಕರೆ ನೀಡಿದರು. ಎಸ್.ಎನ್.ಡಿ.ಪಿ. ಜಿಲ್ಲಾ ಯೂನಿಯನ್ ಕಾರ್ಯದರ್ಶಿ ಪ್ರೇಮಾನಂದ ಮಾತನಾಡಿ, ಮಹಿಳೆಯರು ಪ್ರತಿಯೊಂದು ಕ್ಷೇತ್ರದಲ್ಲಿ ಸಾಧನೆ ಮಾಡಬೇಕು ೪ನಾಲ್ಕನೇ ಪುಟಕ್ಕೆ

ಹಾಗೂ ಪ್ರತಿಯೊಂದು ಸಂಘದ ಶಾಖೆಗಳಲ್ಲಿ ಮಹಿಳಾ ವಿಭಾಗವನ್ನು ಪ್ರಾರಂಭಿಸಬೇಕೆAದು ತಿಳಿಸಿದರು.

ಸಂಘಟನೆಯ ಮಾಜಿ ಕಾರ್ಯದರ್ಶಿ ಎಂ.ವಿ. ಸಜೀವನ್ ಮಾತನಾಡಿ, ಜಿಲ್ಲಾ ವನಿತಾ ಯೂನಿಯನ್‌ಗೆ ನೂತನವಾಗಿ ಆಯ್ಕೆಯಾದ ಪ್ರತಿಯೊಬ್ಬರು ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಸಂಘಟನೆಯನ್ನು ಬಲಪಡಿಸಬೇಕು ಎಂದರು.

ವನಿತಾ ಯೂನಿಯನ್ ಜಿಲ್ಲಾ ಅಧ್ಯಕ್ಷೆ ರೀಶಾ ಸುರೇಂದ್ರ ಮಾತನಾಡಿ, ಮುಂದಿನ ದಿನಗಳಲ್ಲಿ ವನಿತಾ ಸಂಘಗಳು ಸಕ್ರಿಯವಾಗಿ ಕಾರ್ಯನಿರ್ವಹಿಸುವ ನಿಟ್ಟಿನಲ್ಲಿ ಚಟುವಟಿಕೆ ಆರಂಭಿಸಲಾಗುವುದು. ಸಮುದಾಯವನ್ನು ಒಂದುಗೂಡಿಸುವ ಕೆಲಸವನ್ನು ಮಾಡಲಾಗುವುದು ಎಂದರು.

ಸಭಾ ಕಾರ್ಯಕ್ರಮಕ್ಕೂ ಮುನ್ನ ಸಂಸದ ಯದುವೀರ್ ಒಡೆಯರ್ ಅವರನ್ನು ಸಿದ್ದಾಪುರದ ಪಟ್ಟಣದ ಮುಖ್ಯರಸ್ತೆಯಿಂದ ಚಂಡೆಯೊAದಿಗೆ ಮೆರವಣಿಗೆ ಮೂಲಕ ಸಭಾಂಗಣಕ್ಕೆ ಕರೆತರಲಾಯಿತು. ಕಾರ್ಯಕ್ರಮದಲ್ಲಿ ಎಸ್.ಎನ್.ಡಿ.ಪಿ. ಸಂಘಟನೆ ಪದಾಧಿಕಾರಿಗಳಾದ ಮೋಹನ್ ದಾಸ್, ಶಂಕರ್, ಸಿ.ವಿ. ನಾರಾಯಣ, ರಾಜಶೇಖರ್, ಗಿರೀಶ್ ಮಟ್ಟಂ, ಟಿ.ಆರ್. ಪಾಪಯ್ಯ, ಟಿ.ಸಿ. ನಾರಾಯಣ ಇನ್ನಿತರರು ಹಾಜರಿದ್ದರು. ರತ್ನ ಅನೀಸ್ ಸ್ವಾಗತಿಸಿ, ಅನಿತಾ ರಾಜು ವಂದಿಸಿ, ಅನಿತಾ ಮಣಿಲಾಲ್ ಕಾರ್ಯಕ್ರಮ ನಿರೂಪಿಸಿದರು.