ಮಡಿಕೇರಿ, ಫೆ. ೨೫: ‘ಬೇಟಿ ಬಚಾವೋ ಬೇಟಿ ಪಡಾವೋ‘ ಯೋಜನೆಯಡಿ ಅರಿವು ಕಾರ್ಯಕ್ರಮವನ್ನು ಬಸವನಹಳ್ಳಿಯ ವಾಲ್ಮೀಕಿ ಆಶ್ರಮ ಶಾಲೆಯಲ್ಲಿ ಹಮ್ಮಿಕೊಳ್ಳಲಾಯಿತು.

ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯರಾದ ವೆಂಕಟೇಶ್ ಮಾತನಾಡಿ, ಮಕ್ಕಳು ಶಿಕ್ಷಣ ಪಡೆಯಬೇಕು, ಮಕ್ಕಳಿಗೆ ಸಮಾಜದಲ್ಲಿ ಆಗುವ ವಿಷಯಗಳ ಬಗ್ಗೆ ಅರಿವಿರಬೇಕು, ಮಕ್ಕಳ ಪೋಷಕರು ತಮ್ಮ ಮಕ್ಕಳ ಶಿಕ್ಷಣದ ಬಗ್ಗೆ ಗಮನ ಹರಿಸಬೇಕೆಂದರು.

ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕರಾದ ಪ್ರಸನ್ನ ಕುಮಾರ್ ಮಾತನಾಡಿ, ಹೆಣ್ಣುಮಕ್ಕಳು ಶಿಕ್ಷಣವಂತರಾಗಬೇಕು, ಅಲ್ಲದೆ ಹೆಣ್ಣು ಮಕ್ಕಳ ಜನನವನ್ನು ಉತ್ತೇಜಿಸಬೇಕು, ಹೆಣ್ಣು ಮಕ್ಕಳ ಸ್ವಾವಲಂಬಿ ಬದುಕಿಗೆ ಸಹಕರಿಸಲು ಇಲಾಖೆ ಮತ್ತು ಸಮುದಾಯ ಒಂದಾಗಿ ಶ್ರಮಿಸಬೇಕೆಂದು ಕರೆ ನೀಡಿದರು. ಸಖಿ ಓನ್ ಸ್ಟಾಪ್ ಸೆಂಟರ್ ಕುರಿತು ಮಾಹಿತಿ ನೀಡಿದ ಅವರು, ಸಖಿ ಕೇಂದ್ರವು ದೌರ್ಜನ್ಯಕ್ಕೆ ಒಳಗಾದ ಮಹಿಳೆಯರಿಗೆ ಒಂದೇ ಸೂರಿನಡಿ ಐದು ಸೇವೆಗಳಾದ ವೈದ್ಯಕೀಯ ನೆರವು, ಕಾನೂನು ನೆರವು, ಆಪ್ತ ಸಮಾಲೋಚನೆ, ತಾತ್ಕಾಲಿಕ ಆಶ್ರಯ ಹಾಗೂ ಪೊಲೀಸ್ ನೆರವು ನೀಡುತ್ತದೆ. ಮಕ್ಕಳ ಸಹಾಯವಾಣಿ ೧೦೯೮, ಮಹಿಳಾ ಸಹಾಯವಾಣಿ ೧೮೧ರ ಸಹಕಾರದೊಂದಿಗೆ ಇಲಾಖೆಯನ್ನು ಮಹಿಳೆಯರು ಮತ್ತು ಮಕ್ಕಳು ದಿನದ ೨೪ ಗಂಟೆಗಳು, ವಾರದ ಏಳು ದಿನಗಳು ಉಚಿತವಾಗಿ ಸಂಪರ್ಕಿಸಬಹುದಾಗಿದೆ ಎಂದು ತಿಳಿಸಿದರು.

ಜಿಲ್ಲಾ ಮಹಿಳಾ ಸಬಲೀಕರಣ ಘಟಕದ ಜಿಲ್ಲಾ ಮಿಷನ್ ಸಂಯೋಜಕರಾದ ಮಮತಾ ಮಾತನಾಡಿ, ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಹಾಗೂ ರಾಜಕೀಯವಾಗಿ ಮಹಿಳೆಯರು ಸಮಾಜದ ಮುಖ್ಯವಾಹಿನಿಗೆ ಬರಬೇಕು. ಎಲ್ಲಾ ಕ್ಷೇತ್ರಗಳಲ್ಲೂ ಸಾಧನೆ ಮಾಡಬೇಕು ಎಂದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಮಕ್ಕಳ ರಕ್ಷಣಾ ಅಧಿಕಾರಿ ಹೊನ್ನೆಗೌಡ, ಸೋಮವಾರಪೇಟೆ ಶಿಶು ಅಭಿವೃದ್ಧಿ ಯೋಜನಾಧಿಕಾರಿ ದೇವಿ ಮುಧೋಳ್, ಮಕ್ಕಳ ವಿಶೇಷ ಪೊಲೀಸ್ ಘಟಕದ ಸುಮತಿ, ಅಕ್ಕ ಪಡೆ ಸಿಬ್ಬಂದಿಗಳು, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಿಬ್ಬಂದಿಗಳು, ಶಾಲಾ ಶಿಕ್ಷಕರು, ಹಾಡಿಯ ಜನರು ಮತ್ತು ಮಕ್ಕಳು ಹಾಜರಿದ್ದರು.