ಮಡಿಕೇರಿ, ಫೆ.೨೪: ಬ್ಯಾಂಕಿನಲ್ಲಿ ದೊರೆಯುವ ವಿಮೆ ಸೌಲಭ್ಯಗಳನ್ನು ಪ್ರತಿಯೊಬ್ಬ ಗ್ರಾಹಕರು ಸದುಪಯೋಗ ಮಾಡಿಕೊಳ್ಳಿ ಎಂದು ಕರ್ನಾಟಕ ಗ್ರಾಮೀಣ ಬ್ಯಾಂಕ್ ಮಡಿಕೇರಿ ಪ್ರಾದೇಶಿಕ ವಲಯದ ವ್ಯವಸ್ಥಾಪಕರಾದ ಉದಯ್ ಕುಮಾರ್ ಹೇಳಿದರು.

ಕುಶಾಲನಗರ ಸಮೀಪದ ಗುಡ್ಡೆಹೊಸೂರು ಗ್ರಾಮದಲ್ಲಿ ಮಂಗಳವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವಿಮೆ ಹಣ ಚೆಕ್ ಹಸ್ತಾಂತರ ಮಾಡಿ ಮಾತನಾಡಿದ ಅವರು, ಕಷ್ಟದಲ್ಲಿ ಇರುವಂತ ಕುಟುಂಬಗಳಿಗೆ ಕೊನೆಯಲ್ಲಿ ಆರ್ಥಿಕವಾಗಿ ಸಹಾಯ ಮಾಡುವುದು ವಿಮೆ ಯೋಜನೆಗಳು ಮಾತ್ರ. ಹಾಗಾಗಿ ಪ್ರತಿಯೊಬ್ಬರೂ ವಿಮೆ ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಳ್ಳಿ. ಕೇಂದ್ರ ಸರ್ಕಾರದ ಪ್ರಧಾನಮಂತ್ರಿ ಜೀವನ್ ಜ್ಯೋತಿ, ಪ್ರಧಾನಮಂತ್ರಿ ಸುರಕ್ಷಾ ಭೀಮಾ ವಿಮೆ ಸೌಲಭ್ಯಗಳು ಹಾಗೂ ಅಟಲ್ ಪಿಂಚಣಿ ಯೋಜನೆ ಎಂಬ ಹಲವಾರು ಯೋಜನೆಗಳನ್ನು ಸದುಪಯೋಗಪಡಿಸಿಕೊಳ್ಳಿ ಎಂದರು.

ಗುಡ್ಡೆಹೊಸರು ಶಾಖೆಯ ವ್ಯವಸ್ಥಾಪಕ ರಾಕೇಶ್ ಸಿ.ಎಂ ಮಾತನಾಡಿ, ಅತೀ ಕಡಿಮೆ ಮೊತ್ತದ ವಿಮೆ ಸೌಲಭ್ಯಗಳನ್ನು ಮಾಡಿಸಿಕೊಳ್ಳುವ ಮೂಲಕ ತಮ್ಮ ಆಧಾರಿತ ಕುಟುಂಬಕ್ಕೆ ಭರವಸೆಯಾಗಿರಬೇಕು. ಪಿ.ಎಂ.ಜೆ.ಜೆ.ಬಿ.ವೈ ಅಡಿಯಲ್ಲಿ ವರ್ಷಕ್ಕೆ ರೂ.೪೩೬ ಮತ್ತು ಪಿ.ಎಂ.ಎಸ್.ಬಿ.ವೈ ಮೂಲಕ ವರ್ಷಕ್ಕೆ ರೂ.೨೦ ಕಟ್ಟುವ ಮೂಲಕ ಸೌಲಭ್ಯವನ್ನು ಪಡೆದುಕೊಳ್ಳಬಹುದಾಗಿದೆ. ನಮ್ಮ ಶಾಖೆಯಲ್ಲಿ ವಿಮೆ ನೋಂದಣಿ ಮಾಡಿಸಿದಂತ ಇಬ್ಬರು ಗ್ರಾಹಕರು ಅಕಾಲಿಕ ಮೃತಪಟ್ಟ ಹಿನ್ನಲೆ ಅವರ ನಾಮನಿರ್ದೇಶಿತ ವ್ಯಕ್ತಿಗೆ ವಿಮೆ ಹಣವನ್ನು ಇಂದು ನೀಡಲಾಗಿದೆ ಎಂದರು.

ಶಾಖೆಯ ಗ್ರಾಹಕರರಾದ ಲೋಹಿತ್ ಮತ್ತು ಪಾರ್ವತಿ ಎಂಬುವರು ಅಕಾಲಿಕ ಮರಣ ಹೊಂದಿದ ಹಿನ್ನಲೆ ಅವರ ನಾಮನಿರ್ದೇಶಿತ ವ್ಯಕ್ತಿಗಳಿಗೆ ತಲಾ ಎರಡು ಲಕ್ಷ ರೂಪಾಯಿ ಚೆಕ್‌ಅನ್ನು ಹಸ್ತಾಂತರ ಮಾಡಲಾಯಿತು.

ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಕುಮಾರಸ್ವಾಮಿ, ಎಫ್.ಎಲ್.ಸಿ ಕೋ-ಆರ್ಡಿನೇಟರ್ ಮೊಹಮ್ಮದ್ ನಾಭಿ, ಹರೀಶ್, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪ್ರತಿನಿಧಿ ಯತೀಶ್, ಬ್ಯಾಂಕ್ ಸಿಬ್ಬಂದಿ ರುದ್ರೇಶ್ ಸೇರಿದಂತೆ ಇತರರು ಇದ್ದರು.