ಪಾಲಿಬೆಟ್ಟ, ಫೆ. ೨೪: ಹಿಂದೂಗಳು ನಿದ್ರೆಬಿಟ್ಟು ಎದ್ದು ಹಿಂದೂಪರ ಕೆಲಸ ಮಾಡಿದಲ್ಲಿ ಹಿಂದೂ ಸಮಾಜ ಉಳಿಯುವುದು ಎಂದು ಕುಶಾಲನಗರದ ಭರತ್ ಮಾಚಯ್ಯ ಅವರು ಅಭಿಪ್ರಾಯಪಟ್ಟರು.
ಪಾಲಿಬೆಟ್ಟದಲ್ಲಿ ನಡೆದ ಹಿಂದೂ ಸಂಗಮವನ್ನು ಉದ್ದೇಶಿಸಿ ಮಾತನಾಡಿದ ಅವರು, ಭಾರತದಲ್ಲಿ ವಿವಿಧ ಜನಾಂಗದವರು ತಮ್ಮ-ತಮ್ಮಲ್ಲೇ ತಾನು ಮೇಲು ಎಂದು ಬಡಿದಾಡುವ ಬದಲು ಹಿಂದೂಗಳು ಒಗ್ಗಟ್ಟಾಗಿ ಇರಬೇಕು. ತಾನು ಒಬ್ಬ ಹಿಂದೂ ಎಂಬ ಭಾವನೆ ಇದ್ದಾಗ ಮಾತ್ರ ಹಿಂದೂ ಸಮಾಜ ಉಳಿಯಲು ಸಾಧ್ಯ ಎಂದರು.
ಪ್ರಮುಖರಾದ ಪ್ರಿನ್ಸ್ ಗಣಪತಿ ಮಾತನಾಡಿ, ಭಾರತೀಯ ಸಂಸ್ಕೃತಿ, ನಮ್ಮ ಪರಿಸರ ಉಳಿಯ ಬೇಕೆಂದರೆ ನಾವುಗಳೆಲ್ಲರೂ ಒಗ್ಗಟ್ಟಾಗಬೇಕು. ಹಿಂದೂಗಳು ಸಂಘಟಿತರಾಗಬೇಕು ಎಂದು ಹೇಳಿದರು.
ಪ್ರಮುಖರಾದ ಕೂತಂಡ ಬೋಜಮ್ಮ ಅವರು ಸಭೆಯನ್ನುದ್ದೇಶಿಸಿ ಮಾತನಾಡಿ, ಮಹಿಳೆಯರು ಹೆಚ್ಚಾಗಿ ಶೋಭಾಯಾತ್ರೆಯಲ್ಲಿ ಪಾಲ್ಗೊಂಡಿ ರುವುದರ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದರು. ಕಾರ್ಯಕ್ರಮ ಆಯೋಜನೆ ಮಾಡಿದ ಕುಟ್ಟಂಡ ಅಜಿತ್ ಕರುಂಬಯ್ಯ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಗ್ರಾಮ - ಗ್ರಾಮದಲ್ಲೂ ಹಿಂದೂಗಳನ್ನು ಒಗ್ಗೂಡಿಸು ವಂತಹ ಕಾರ್ಯಕ್ರಮ ನಡೆಯುತ್ತಿದ್ದು, ಪಾಲಿಬೆಟ್ಟದಲ್ಲೂ ಕೂಡ ಹಿಂದೂ ಸಂಗಮ ಕಾರ್ಯಕ್ರಮ ಆಯೋಜಿಸುವ ಮೂಲಕ ಉತ್ತಮ ಪ್ರತಿಕ್ರೆಯೆ ಸಿಕ್ಕಿರುವುದು ಸಂತೋಷದ ವಿಷಯ. ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕುಟ್ಟಂಡ ಮದನ್ ಮಾದಯ್ಯ ಅವರು ವಹಿಸಿದ್ದರು. ವೇದಿಕೆಯಲ್ಲಿ ಕೂತಂಡ ಬೋಜಮ್ಮ, ಸೋಮಪ್ಪ, ಬಿ.ಬಿ ಶಂಕರ ಪೂಜಾರಿ, ಮಂಜುಳಾ ರಾಜೇಶ್, ಕೃಷ್ಣ ಅವರು ಇದ್ದರು.
ಶೋಭಾಯಾತ್ರೆಯು ಗಣಪತಿ ದೇವಸ್ಥಾನದಿಂದ ಪಾಲಿಬೆಟ್ಟ ಪಟ್ಟಣದಿಂದ ಮಹಿಳಾ ಸಮಾಜದವರೆಗೆ ಜರುಗಿತು. ಶೋಭಾಯಾತ್ರೆಯಲ್ಲಿ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರಾದ ಮೂಕೊಂಡ ವಿಜು ಸುಬ್ರಮಣಿ, ಪ್ರಮುಖರುಗಳಾದ ಕಿಶೋರ್ ಕಾರ್ಯಪ್ಪ, ಕುಟ್ಟಂಡ ವಸಂತ್, ಬಿದ್ದಂಡ ಗಣಪತಿ, ಮಾಳೇಟಿರ ಅಯ್ಯಪ್ಪ, ಮಾಳೇಟಿರ ಪವಿತ್ರ, ಕುಪ್ಪಂಡ ಚಿಣ್ಣಪ್ಪ, ಕುಟ್ಟಂಡ ಶರಿನ್ ಕುಟ್ಟಪ್ಪ, ವಿಮಲಾ ರಾಮದಾಸ್ ಹಾಗೂ ಇತರ ಪ್ರಮುಖರು ಭಾಗವಹಿಸಿದ್ದರು.