ಕಣಿವೆ, ಫೆ. ೨೪: ಕಾವೇರಿ ನದಿಯ ನೀರು ದಿನೇ ದಿನೇ ಕಲುಷಿತಗೊಳ್ಳುತ್ತಲೆ ಇದೆ. ಬೇಸಿಗೆಯ ಬಿಸಿಲ ಧಾಳಿ ಹೆಚ್ಚಾಗುತ್ತಿದ್ದಂತೆ ನದಿಯ ಹರಿಯುವ ನೀರು ಸ್ಥಗಿತಗೊಂಡAತಿದೆ.
ಕಾವೇರಿ ನದಿಯ ದಂಡೆಯ ನಂಜರಾಯಪಟ್ಟಣ ವ್ಯಾಪ್ತಿಯಿಂದ ಕೂಡಿಗೆಯವರೆಗೂ ನದಿಯ ಎರಡೂ ದಂಡೆಗಳ ಕೃಷಿಕರು ಕಾವೇರಿ ನೀರನ್ನು ಯಂತ್ರಗಳಿAದ ಯಥೇಚ್ಛವಾಗಿ ಮೇಲೆತ್ತಿ ಹೊಲ-ಗದ್ದೆಗಳು ಹಾಗೂ ಕಾಫಿ ತೋಟಗಳಿಗೆ ಹರಿಸುತ್ತಿದ್ದಾರೆ. ಮಳೆ ಬಾರದಿದ್ದಲ್ಲಿ ಹೆಚ್ಚೆಂದರೆ ಮಾರ್ಚ್ ಮೊದಲ ವಾರದ ಹೊತ್ತಿಗೆ ಕಾವೇರಿ ನೀರಿನ ಹರಿವು ಸ್ತಬ್ಧವಾಗುವ ಅಪಾಯವಿದೆ. ಕೂಡ್ಲೂರು ಕೈಗಾರಿಕಾ ಪ್ರದೇಶಕ್ಕೆ ಹೊಂದಿಕೊAಡಿರುವ ಕಾವೇರಿ ನದಿ ದಂಡೆಯಲ್ಲಿ ಪೂರ್ವಾಭಿಮುಖವಾಗಿ ಇರುವ ಮಲ್ಲಿಕಾರ್ಜುನ ಸ್ವಾಮಿ ದೇವಾಲಯದ ಬಳಿಯ ಕಾವೇರಿ ನೀರು ಪೂರ್ಣ ಪ್ರಮಾಣದಲ್ಲಿ ಸ್ಥಗಿತಗೊಂಡಿದೆ. ನಿಂತಿರುವ ನೀರು ಕಪ್ಪು ಬಣ್ಣಕ್ಕೆ ತಿರುಗಿದ್ದು ವಾಸನೆ ಬೀರುತ್ತಿದೆ. ಈ ನೀರನ್ನು ಜಾನುವಾರುಗಳು ಕೂಡ ಕುಡಿಯುತ್ತಿಲ್ಲ. ಇನ್ನು ಜನರ ಸ್ಥಿತಿ ಗತಿ ಏನಾಗಬೇಡ...?
ಕೈಗಾರಿಕಾ ಪ್ರದೇಶದ ನಲವತ್ತಕ್ಕೂ ಹೆಚ್ಚಿನ ಕೈಗಾರಿಕಾ ಘಟಕಗಳ ತ್ಯಾಜ್ಯ ನೀರು, ಅಲ್ಲಿ ಸಂಗ್ರಹವಾಗುವ ಕಸ, ತ್ಯಾಜ್ಯ, ಗಾಳಿಯಲ್ಲಿ ತೂರಿ ಬರುವ ಅವ್ಯಾಹತವಾದ ಕಾಫಿ ಹೊಟ್ಟು ಎಲ್ಲವೂ ಇಲ್ಲಿನ ಕಾವೇರಿ ನದಿಗೆ ಸೇರುತ್ತಿರುವ ಕಾರಣ ನದಿಯ ನೀರು ಕಲುಷಿತಗೊಂಡು ವಾಸನೆ ಬೀರುತ್ತಿದೆ ಎಂದು ಕೂಡ್ಲೂರು ಗ್ರಾಮದೇವತಾ ಸಮಿತಿ ಅಧ್ಯಕ್ಷ ಕೆ.ಎನ್. ಪವನ್ ಕುಮಾರ್ ಹೇಳುತ್ತಾರೆ. ಕೂಡ್ಲೂರು ಕೈಗಾರಿಕಾ ಪ್ರದೇಶದಿಂದ ಮುಂದಿನ ಒಂದು ಕಿಮೀ ದೂರದ ಹಳೆಕೂಡಿಗೆ ಬಳಿಯ ಕಾವೇರಿ ನದಿಗೆ ಹಾರಂಗಿ ಜಲಾಶಯದ ನೀರನ್ನು ಜನ-ಜಾನುವಾರುಗಳು ಕುಡಿಯಲು ಹರಿಸಲಾಗುತ್ತಿದೆ.
ಒಟ್ಟಾರೆ, ಕೂಡ್ಲೂರು ಬಳಿ ಕಾವೇರಿ ನದಿಯ ದಂಡೆ ಸ್ವಚ್ಛತೆ ಮಾಡುವ ಮೂಲಕ ಮಲಿನ ನೀರು ಹರಿಯದಂತೆ ಎಚ್ಚರವಹಿಸುವ ಮೂಲಕ ನದಿಯ ನೀರನ್ನು ಸಂರಕ್ಷಿಸುವ ಕೆಲಸ ತುರ್ತಾಗಿ ಆಗಬೇಕಿದೆ. -ಕೆ. ಎಸ್. ಮೂರ್ತಿ