ಸಿದ್ದಾಪುರ, ಫೆ.೨೪: ಮಾನವ - ವನ್ಯ ಪ್ರಾಣಿಗಳ ಸಂಘರ್ಷವನ್ನು ತಡೆಗಟ್ಟುವ ನಿಟ್ಟಿನಲ್ಲಿ ಜನಜಾಗೃತಿ ಮೂಡಿಸುವ ನಾಟಕವನ್ನು ಪ್ರದರ್ಶನ ಮಾಡಲಾಯಿತು.
ಕೊಡಗು ಜಿಲ್ಲಾ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಸೊನಾಲಿ ಅವರ ನಿರ್ದೇಶನದ ಮೇರೆಗೆ ವೀರಾಜಪೇಟೆ ವಿಭಾಗದ ತಿತಿಮತಿ ವಲಯ ವತಿಯಿಂದ ‘ಹ್ಯೂಮನ್ ವರ್ಲ್ಡ್ ಫಾರ್ ಅನಿಮಲ್ಸ್ ಸಂಸ್ಥೆ’ ಮತ್ತು ಟಾಟಾ ಕಾಫಿ ಸಂಸ್ಥೆ ಪಾಲಿಬಟ್ಟ ಇವರ ಸಹಯೋಗದಲ್ಲಿ ಟಾಟಾ ಸಂಸ್ಥೆಗೆ ಸೇರಿದ ಎಮ್ಮೆಗುಂಡಿ, ಹೊಸಹಳ್ಳಿ ಹಾಗೂ ಮಾರಗುಂಡಿ ಕಾಫಿ ತೋಟಗಳಲ್ಲಿ ನಾಟಕವನ್ನು ಪ್ರದರ್ಶನ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ವೀರಾಜಪೇಟೆ ತಾಲೂಕು ಉಪ ಅರಣ್ಯ ಸಂರಕ್ಷಣಾಧಿಕಾರಿ ಜಗನ್ನಾಥ್, ಕಾಫಿ ತೋಟಗಳಲ್ಲಿ ಕಾರ್ಮಿಕ ವರ್ಗದವರಿಗೆ ವನ್ಯಪ್ರಾಣಿಗಳ ದಾಳಿಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಅರಿವು ಮೂಡಿಸುವ ಸಲುವಾಗಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದರು. ಜನರು ಪ್ರತಿ ದಿನ ಎಚ್ಚರಿಕೆಯಿಂದ ಇರಬೇಕು ಎಂದು ಮನವಿ ಮಾಡಿದರು. ಕಾಡಾನೆಗಳು ಕಂಡ ಕೂಡಲೇ ಅರಣ್ಯ ಇಲಾಖೆಗೆ ಅಥವಾ ಆಯಾ ತೋಟದ ಮುಖ್ಯಸ್ಥರಿಗೆ ಮಾಹಿತಿಯನ್ನು ನೀಡುವಂತೆ ಸೂಚನೆ ನೀಡಿದರು. ದಿನದಿಂದ ದಿನಕ್ಕೆ ಮಾನವ ವನ್ಯಪ್ರಾಣಿಗಳ ಸಂಘರ್ಷ ಹೆÀÀಚ್ಚುತ್ತಿದೆ ಎಂದು ವಿಷಾದ ವ್ಯಕ್ತಪಡಿಸಿದರು. ಅರಣ್ಯಗಳ ನಾಶ, ಕಾಡು ಪ್ರಾಣಿಗಳ ಆವಾಸಸ್ಥಾನ ನಾಶ, ಅಲ್ಲದೆ ಆನೆ ಕಾರಿಡಾರ್ ಕೂಡ ನಾಶವಾಗುತ್ತಿದ್ದು ಆನೆ ಮಾನವ ಸಂಘರ್ಷ ಏರಿಕೆಗೆ ಕಾರಣ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಕೆಲವು ಸ್ಥಳಗಳಲ್ಲಿ ಕಿಡಿಗೇಡಿಗಳು ಅರಣ್ಯದ ಅಂಚಿನಲ್ಲಿ ಬೆಂಕಿ ಹಚ್ಚಿ ಕಾಡ್ಗಿಚ್ಚು ಹಬ್ಬಿಸಿ ಅರಣ್ಯ ಪ್ರದೇಶದಲ್ಲಿ ಗಿಡಮರ ಬಳ್ಳಿಗಳು ಬಿದಿರುಗಳು ನಾಶವಾಗುತ್ತಿವೆ. ಈ ಹಿನ್ನಲೆಯಲ್ಲಿ ಆಹಾರವನ್ನು ಅರಿಸಿಕೊಂಡು ಕಾಡಿನಿಂದ ನಾಡಿಗೆ ಕಾಡುಪ್ರಾಣಿಗಳು ಬರುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ತಿಳಿಸಿದರು. ಇದರಿಂದಾಗಿ ಜನರು ಸುರಕ್ಷತೆಯಿಂದ ಇದ್ದು ನಮ್ಮ ರಕ್ಷಣೆಯನ್ನು ಮಾಡಿಕೊಳ್ಳಲು ಸಾಧ್ಯವಾಗುತ್ತದೆ ಹಾಗೂ ಆನೆ ಮಾನವ ಸಂಘರ್ಷವನ್ನು ತಡೆಗಟ್ಟಲು ಅರಣ್ಯ ಇಲಾಖೆಯೊಂದಿಗೆ ಸಹಕರಿಸಬೇಕೆಂದು ಜಗನ್ನಾಥ್ ಅವರು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ತಿತಿಮತಿ ಉಪ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಗೋಪಾಲ್, ವಲಯ ಅರಣ್ಯ ಅಧಿಕಾರಿ ಗಂಗಾಧರ್, ಉಪವಲಯ ಅರಣ್ಯ ಅಧಿಕಾರಿ ಶಶಿ ಪಿ.ಟಿ, ಟಾಟಾ ಕಾಫಿ ಸಂಸ್ಥೆಯ ಅಧಿಕಾರಿಗಳಾದ ಸಿ.ಎ ಬೋಪಯ್ಯ ಮತ್ತು ದಿಲೀಪ್ ಕುಮಾರ್ ಸಿಂಗ್, ಎಂ.ಎನ್ ತಮ್ಮಯ್ಯ, ಟಾಟಾ ಕಾಫಿ ಸಂಸ್ಥೆಯ ಸುರಕ್ಷತೆ ಮತ್ತು ವನ್ಯಜೀವಿ ವಿಭಾಗದ ವ್ಯವಸ್ಥಾಪಕ ಕಾರ್ತಿಕ್ ಕೃಷ್ಣ, ಹ್ಯೂಮನ್ ವರ್ಲ್ಡ್ ಫಾರ್ ಅನಿಮಲ್ಸ್ ಸಂಸ್ಥೆಯ ತಮ್ಮಯ್ಯ ಮತ್ತು ವಿನೋದ್ ಹಾಗೂ ಟಾಟಾ ಕಾಫಿ ಸಂಸ್ಥೆಯ ವಿವಿಧ ವಿಭಾಗದ ವ್ಯವಸ್ಥಾಪಕರುಗಳು, ಸಿಬ್ಬಂದಿಗಳು, ಕಾರ್ಮಿಕರು ಭಾಗವಹಿಸಿದ್ದರು.
ಉಪವಲಯ ಅರಣ್ಯ ಅಧಿಕಾರಿ ಶಶಿ ಪಿ.ಟಿ ನೇತೃತ್ವದಲ್ಲಿ ಮೈಸೂರಿನ ಯೋಗಾನಂದ ನಾಯಕತ್ವದ ಪೃಥ್ವಿ ಕಲಾತಂಡದ ಕಲಾವಿದರು ಟಾಟಾ ಸಂಸ್ಥೆಯ ಏಳು ವಿಭಾಗಗಳಲ್ಲಿ ೨ ದಿನಗಳ ಕಾಲ ನಾಟಕ ಪ್ರದರ್ಶನ ಮಾಡಿದರು.