ಮಡಿಕೇರಿ, ಫೆ. ೨೩: ಹೃದಯ ಸ್ತಂಭನದAತಹ ಸಂದರ್ಭದಲ್ಲಿ ತುರ್ತು ಚಿಕಿತ್ಸೆ ನೀಡಿದ್ದಲ್ಲಿ ಜೀವ ಉಳಿಸಬಹುದಾಗಿದ್ದು, ಇಂತಹ ಪ್ರಥಮ ಚಿಕಿತ್ಸೆಯ ಬಗ್ಗೆ ಪ್ರತಿಯೊಬ್ಬರು ಅರಿವು ಹೊಂದಿರಬೇಕೆAದು ಮೈಸೂರು ಮಣಿಪಾಲ್ ಆಸ್ಪತ್ರೆಯ ತುರ್ತು ಚಿಕಿತ್ಸಾ ವಿಭಾಗದ ತಜ್ಞರಾದ ಡಾ. ಅರುಣ್ ಕರೆ ನೀಡಿದರು.
ಕೊಡಗು ಪ್ರೆಸ್‌ಕ್ಲಬ್ ವತಿಯಿಂದ ಮೈಸೂರಿನ ಮಣಿಪಾಲ್ ಆಸ್ಪತ್ರೆಯ ಸಹಯೋಗದಲ್ಲಿ ನಗರದ ಪತ್ರಿಕಾಭವನದಲ್ಲಿ ಪತ್ರಕರ್ತರಿಗೆ ಆಯೋಜಿಸಲಾಗಿದ್ದ ಜೀವ ರಕ್ಷಕ ಕೌಶಲ್ಯ ಕಾರ್ಯಾಗಾರ ಹಾಗೂ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಎಲ್ಲರೂ ಜೀವ ರಕ್ಷಣೆಯ ಅರಿವು ಹೊಂದಿಕೊಳ್ಳಬೇಕೆನ್ನುವ ಉದ್ದೇಶದೊಂದಿಗೆ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಜೀವ ಉಳಿಸಲು ಪ್ರತಿ ಘಳಿಗೆಯೂ ಮುಖ್ಯವಾಗಿರುತ್ತದೆ. ಸಾರ್ವಜನಿಕ ಸ್ಥಳಗಳಲ್ಲಿ ಹೃದಯ ಸ್ತಂಭನ ಆದಲ್ಲಿ ಸಾರ್ವಜನಿಕರು ಏನು ಮಾಡಬೇಕೆಂದು ಅರಿತುಕೊಂಡರೆ ಜೀವ ಉಳಿಸಬಹುದಾಗಿದೆ. ಈ ಸಂಬAಧ ವಿದೇಶದಲ್ಲಿ ಸಾರ್ವಜಕರಿಗೆ ತರಬೇತಿ ನೀಡಲಾಗುತ್ತಿದೆ. ನಮ್ಮ ದೇಶದಲ್ಲಿ ಅರಿವು ಮೂಡಿಸುವುದು ಬಹಳ ಕಷ್ಟವಾಗಿದ್ದರೂ ಪ್ರಯತ್ನ ಮುಂದುವರೆಸಿದ್ದೇವೆ. ಸಾರ್ವಜನಿಕರು ತುರ್ತು ಚಿಕಿತ್ಸೆಯ ಬಗ್ಗೆ ಅರಿತುಕೊಂಡು ಜೀವ ಉಳಿಸಲು ಪ್ರಯತ್ನಿಸಬೇಕೆಂದು ಕರೆ ನೀಡಿದರು.
ಮೈಸೂರು ಮಣಿಪಾಲ್ ಆಸ್ಪತ್ರೆಯ ಕಾರ್ಪೋರೇಟ್ ವಿಭಾಗದ ಎಕ್ಸ್ಕ್ಯೂಟೀವ್ ಉಮರ್ ಬೇಗ್ ಮಾತನಾಡಿ, ಕಾಯಿಲೆ ಬಂದ ಬಳಿಕ ಚಿಕಿತ್ಸೆ ಪಡೆಯುವುದಕ್ಕಿಂತಲೂ ಮೊದಲೇ ಮುನ್ನೆಚ್ಚರಿಕೆ ವಹಿಸುವುದು ಸೂಕ್ತ. ಆದ್ದರಿಂದ ಸೂಕ್ತ ಕಾಲದಲ್ಲಿ ಪ್ರತಿಯೊಬ್ಬರು ತಮ್ಮ ಆರೋಗ್ಯ ತಪಾಸಣೆ ಮಾಡಿಕೊಳ್ಳಬೇಕೆಂದು ಕಿವಿಮಾತು ಹೇಳಿದರು.
ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಾಚರಣಿಯಂಡ ಅನು ಕಾರ್ಯಪ್ಪ ಮಾತನಾಡಿ, ಪ್ರಸ್ತುತ ಕಾಲಘಟ್ಟದಲ್ಲಿ ಕಾಯಿಲೆಗಳು ಹೆಚ್ಚಾಗುತ್ತಿವೆ. ಇದರಿಂದ ಆಹಾರ ಕ್ರಮಗಳು ಕೂಡ ಕಾರಣವಾಗಿದ್ದು, ಆರೋಗ್ಯದ ಮೇಲೆ ಹೆಚ್ಚಿನ ನಿಗಾವಹಿಸಬೇಕೆಂದು ತಿಳಿಸಿದರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ನಿರ್ದೇಶಕಿ ಬಿ.ಆರ್. ಸವಿತಾ ರೈ ಮಾತನಾಡಿ, ಪತ್ರಕರ್ತರ ಆರೋಗ್ಯ ವಿಚಾರಿಸುವವರ ಸಂಖ್ಯೆ ವಿರಳ. ಸದಾ ಒತ್ತಡದ ಜೀವನ ಸಾಗಿಸುವ ಪತ್ರಕರ್ತರು ದಿಢೀರ್ ಅನಾರೋಗ್ಯಕ್ಕೊಳಗಾಗುತ್ತಿದ್ದಾರೆ. ಎಚ್ಚರಿಕೆ ತೆಗೆದುಕೊಳ್ಳುವಲ್ಲಿ ಎಡವುತ್ತಿರುವುದು ಕೂಡ ಇದಕ್ಕೆ ಕಾರಣ. ವೈದ್ಯರ ಸಲಹೆಗಳನ್ನು ಪಾಲಿಸಿ ಪತ್ರಕರ್ತರು ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕೆಂದು ಕರೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕೊಡಗು ಪ್ರೆಸ್ ಕ್ಲಬ್ ಅಧ್ಯಕ್ಷ ಬೊಳ್ಳಜಿರ ಬಿ. ಅಯ್ಯಪ್ಪ, ಯುವ ಜನತೆಯಲ್ಲಿ ಆರೋಗ್ಯದ ಸಮಸ್ಯೆ ಹೆಚ್ಚು ಕಂಡುಬರುತ್ತಿರುವುದು ಕಳವಳಕಾರಿ. ವರ್ಷಕ್ಕೆ ಒಮ್ಮೆಯಾದರೂ ಆರೋಗ್ಯ ತಪಾಸಣೆ ಮಾಡಿಕೊಳ್ಳಬೇಕಿದೆ. ಆ ನಿಟ್ಟಿನಲ್ಲಿ ಮಣಿಪಾಲ್ ಆಸ್ಪತ್ರೆಯ ಸಹಯೋಗದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ. ಪತ್ರಕರ್ತರು ಆರೋಗ್ಯದ ಬಗ್ಗೆ ಎಚ್ಚರಿಕೆ ವಹಿಸಬೇಕಾಗಿದ್ದು, ನಿರ್ಲಕ್ಷö್ಯ ಮಾಡಿದರೆ ಗುಣಪಡಿಸಲಾಗದ ಪರಿಸ್ಥಿತಿ ನಿರ್ಮಾಣವಾಗಲಿದೆ. ಆದ್ದರಿಂದ ಕಾಯಿಲೆ ಆರಂಭದಲ್ಲಿಯೇ ಚಿಕಿತ್ಸೆ ಪಡೆಯುವಂತಾಗಬೇಕು ಎಂದರು.
ಕೊಡಗು ಪ್ರೆಸ್ ಕ್ಲಬ್ ಹಿರಿಯ ಉಪಾಧ್ಯಕ್ಷ ನವೀನ್ ಡಿಸೋಜ ಸ್ವಾಗತಿಸಿದರು. ಸದಸ್ಯ ಹೆಚ್.ಜೆ. ರಾಕೇಶ್ ನಿರೂಪಿಸಿ, ವಂದಿಸಿದರು.
ಇದೇ ಸಂದರ್ಭ ಮೈಸೂರು ಮಣಿಪಾಲ್ ಆಸ್ಪತ್ರೆಯ ತುರ್ತು ಚಿಕಿತ್ಸಾ ವಿಭಾಗದ ತಜ್ಞರಾದ ಡಾ. ಅರುಣ್ ತುರ್ತು ಸಂದರ್ಭದಲ್ಲಿ ಜೀವ ಉಳಿಸಲು ಮಾಡಬೇಕಾದ ಕಾರ್ಯದ ಕುರಿತು ಸವಿವರವಾಗಿ ವಿವರಿಸಿದರು. ಬಳಿಕ ಪತ್ರಕರ್ತರ ಉಚಿತ ಆರೋಗ್ಯ ತಪಾಸಣೆ ನಡೆಯಿತು. ವಿವಿಧೆಡೆಯಿಂದ ಆಗಮಿಸಿದ್ದ ಪತ್ರಕರ್ತರು ಆರೋಗ್ಯ ತಪಾಸಣೆ ಮಾಡಿಕೊಂಡರು.