ಮಡಿಕೇರಿ, ಫೆ. ೨೩: ಕನ್ನಡ ಪುಸ್ತಕಗಳನ್ನು ಕೊಳ್ಳುವವರಿಲ್ಲ, ಓದುವವರಿಲ್ಲ ಎಂಬ ಕೊರಗು ಸಾಹಿತಿಗಳಲ್ಲಿ ಹಾಗೂ ಪ್ರಕಾಶಕರಲ್ಲಿ ದಿನೇ ದಿನೇ ಹೆಚ್ಚಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಪುಸ್ತಕ ಎಂಬುದು ಕೇವಲ ಸರಕಾಗದೆ ಅದೊಂದು ಸಂಸ್ಕೃತಿಯಾಗಿ ಮನೆಮನೆಯ ಜ್ಞಾನದ ಸಂಪತ್ತಾಗಿ ತನ್ನ ಅಸ್ತಿತ್ವವನ್ನು ತಾನೇ ಕಾಪಾಡಿಕೊಳ್ಳಬೇಕು ಎಂಬ ವೈಜ್ಞಾನಿಕ ಆಶಯದ ತಳಹದಿಯ ಮೇಲೆ ಕನ್ನಡ ಪುಸ್ತಕ ಪ್ರಾಧಿಕಾರ ‘ಮನೆಗೊಂದು ಗ್ರಂಥಾಲಯ’ ಎಂಬ ಮಹತ್ವಾಕಾಂಕ್ಷೆ ಯೋಜನೆಯನ್ನು ಜಾರಿಗೊಳಿಸಿದೆ ಎಂದು ಪ್ರಾಧಿಕಾರದ ಅಧ್ಯಕ್ಷ ಡಾ. ಮಾನಸ ಹೇಳಿದರು.
ಕನ್ನಡ ಪುಸ್ತಕ ಪ್ರಾಧಿಕಾರ ಬೆಂಗಳೂರು, ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಸಂಯುಕ್ತಾಶ್ರಯದಲ್ಲಿ ನಗರದ ಪತ್ರಿಕಾ ಭವನದಲ್ಲಿ ನಡೆದ ಮನೆಗೊಂದು ಗ್ರಂಥಾಲಯ ಯೋಜನೆಯ ಕರಪತ್ರ ಬಿಡುಗಡೆ ಹಾಗೂ ಕನ್ನಡ ಪುಸ್ತಕ ಪ್ರಾಧಿಕಾರದ ಜಿಲ್ಲಾ ಜಾಗೃತಿ ಸಮಿತಿ ಸದಸ್ಯರಿಗೆ ನೇಮಕಾತಿ ಪತ್ರ ವಿತರಣಾ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಯುವಜನರಲ್ಲಿ ಪುಸ್ತಕ ಸಂಸ್ಕೃತಿ ಬಿತ್ತಬೇಕು ಎಂಬ ಉದ್ದೇಶದಿಂದ ಮನೆಗೊಂದು ಗ್ರಂಥಾಲಯ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಜ್ಞಾನಪೀಠ ಪ್ರಶಸ್ತಿ ಪಡೆದವರು ಸೇರಿದಂತೆ ಹಲವು ಸಾಹಿತಿ ಹಾಗೂ ಕವಿಗಳ ಹೆಸರಿನಲ್ಲಿ ವಿಶೇಷ ದಿನದಂದು ಕಾರ್ಯಕ್ರಮ ಆಯೋಜಿಸಿ ಕನ್ನಡ ಸಾಹಿತ್ಯ ಲೋಕಕ್ಕೆ ಸಾಹಿತಿಗಳು ನೀಡಿರುವ ಕೊಡುಗೆಯನ್ನು ಸ್ಮರಿಸಲಾಗುತ್ತದೆ ಎಂದರು. ಪ್ರತೀ ಮನೆಯಲ್ಲೂ ಪೂಜಾ ಕೊಠಡಿ ಇರುವಂತೆ ಗ್ರಂಥಾಲಯ ಸಹ ಇದ್ದಲ್ಲಿ, ಇಡೀ ಕುಟುಂಬದ ಎಲ್ಲರ ಜ್ಞಾನಾರ್ಜನೆ ಹೆಚ್ಚಲಿದೆ. ರಾಜ್ಯದಲ್ಲಿ ಒಂದು ಲಕ್ಷ ಮನೆಗಳಲ್ಲಿ ಗ್ರಂಥಾಲಯ ಸ್ಥಾಪಿಸಲಾಗುತ್ತದೆ. ಜನಪ್ರತಿನಿಧಿಗಳು, ಚಲನಚಿತ್ರ ನಟ ನಟಿಯರು ಸೇರಿದಂತೆ ಎಲ್ಲರ ಮನೆಯಲ್ಲೂ ಸಹ ಪುಸ್ತಕ ಭಂಡಾರ ಇರಬೇಕು ಎಂಬ ಉದ್ದೇಶದಿಂದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.
ಪ್ರತೀ ಜಿಲ್ಲೆಯಲ್ಲಿ ೧೦ ಜನರನ್ನು ಜಾಗೃತಿ ಸದಸ್ಯರನ್ನಾಗಿ ನೇಮಿಸಲಾಗುತ್ತಿದೆ. ರಾಜ್ಯದ ನಾಲ್ಕು ಕಂದಾಯ ವಿಭಾಗದಲ್ಲಿ ನಾಲ್ಕು ಜನ ವಿದ್ವಾಂಸರ ಹೆಸರಿನಲ್ಲಿ ನಾಲ್ಕು ಪ್ರಶಸ್ತಿಯನ್ನು ಸ್ಥಾಪಿಸಲು ಉದ್ದೇಶಿಸಲಾಗಿದ್ದು, ಈ ವಾರ್ಷಿಕ ಪ್ರಶಸ್ತಿಗಳನ್ನು ಮುಖ್ಯಮಂತ್ರಿ ಅವರಿಂದ ಪ್ರದಾನ ಮಾಡಿಸುವ ಯೋಜನೆ ಇದೆ. ಕನ್ನಡದ ಮೊಟ್ಟ ಮೊದಲ ಮಹಿಳಾ ಪ್ರಕಾಶಕಿ, ನಂಜನಗೂಡು ತಿರುಮಲಾಂಬ ಪ್ರಶಸ್ತಿ, ಕನ್ನಡದ ಅಪ್ರತಿಮ ಪುಸ್ತಕ ಪ್ರೇಮಿ, ಹಾ.ಮಾ.ನಾಯಕ ಪ್ರಶಸ್ತಿ, ಲಲಿತಾ ಕಲಾ ಅಕಾಡೆಮಿ ಅಧ್ಯಕ್ಷರಾಗಿದ್ದ ಪುಸ್ತಕ ಪ್ರೇಮಿ ಮತ್ತು ಕಲಾಯೋಗಿ ಪಿ.ಆರ್.ತಿಪ್ಪೇಸ್ವಾಮಿ ಪ್ರಶಸ್ತಿ ಹಾಗೂ ಮಹಾನ್ ಪುಸ್ತಕ ಪ್ರೇಮಿ ಗಳಗನಾಥ ಪ್ರಶಸ್ತಿ ನೀಡಲು ಉದ್ದೇಶಿಸಲಾಗಿದೆ ಎಂದರು.
ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಟಿ.ಪಿ.ರಮೇಶ್ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಿಂದ ಪುಸ್ತಕ ಓದುವವರ ಸಂಖ್ಯೆ ಕಡಿಮೆಯಾಗಿದೆ. ಮುಂದಿನ ಪೀಳಿಗೆಗೆ ಪುಸ್ತಕ ಓದುವ ಸಂಸ್ಕೃತಿಯನ್ನು ಕಲಿಸಬೇಕೆಂದರು.
ಕೊಡಗು ಪತ್ರಕರ್ತರ ಸಂಘದ ಅಧ್ಯಕ್ಷÀ ಎಚ್.ಟಿ.ಅನಿಲ್ ಮಾತನಾಡಿ, ಕೊಡಗು ಜಿಲ್ಲೆಯಲ್ಲಿ ಪುಸ್ತಕ ಮಳಿಗೆ ಇಲ್ಲ. ಆದ್ದರಿಂದ ಪುಸ್ತಕ ಪ್ರಾಧಿಕಾರದವರು ಪುಸ್ತಕ ಮಳಿಗೆ ಸ್ಥಾಪನೆಗೆ ಮುಂದಾಗಬೇಕು. ಹಾಗೆಯೇ ಪುಸ್ತಕ ಪ್ರಾಧಿಕಾರದಿಂದ ಪುಸ್ತಕ ಮೇಳಗಳನ್ನು ಆಯೋಜಿಸುವಂತಾಗಬೇಕು. ಆ ನಿಟ್ಟಿನಲ್ಲಿ ಅಗತ್ಯ ಸಹಕಾರ ನೀಡಲಾಗುವುದು ಎಂದರು.
ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಅಧ್ಯಕ್ಷ ಎಂ.ಪಿ.ಕೇಶವ ಕಾಮತ್ ಮಾತನಾಡಿ, ಮನೆಗೊಂದು ಗ್ರಂಥಾಲಯ ಸ್ಥಾಪನೆಗೆ ಎಲ್ಲಾ ರೀತಿಯ ಸಹಕಾರ ನೀಡಲಾಗುವುದು. ಮುಂದಿನ ದಿನಗಳಲ್ಲಿ ಮಕ್ಕಳಲ್ಲಿ ಸಾಹಿತ್ಯ ಅಭಿರುಚಿ ಬೆಳೆಸಲು ಮಕ್ಕಳ ಕವಿಗೋಷ್ಠಿ ಆಯೋಜಿಸಲಾಗುವುದು ಎಂದರು. ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ನಡೆಯುವ ಎಲ್ಲಾ ಕಾರ್ಯಕ್ರಮಗಳಲ್ಲಿ ಕನ್ನಡ ಪುಸ್ತಕವನ್ನು ನೆನಪಿನ ಕಾಣಿಕೆಯಾಗಿ ನೀಡಲಾಗುತ್ತಿದೆ ಎಂದು ಹೇಳಿದರು.
ಅರ್ಹತಾ ಪತ್ರವನ್ನು ಬಿ.ಎನ್.ಪ್ರಕಾಶ್, ಸುಬ್ರಾಯ ಸಂಪಾಜೆ, ಎಚ್.ಎಲ್.ದಿವಾಕರ, ರಂಜಿತ್ ಕವಲಪಾರ, ಮುರಳಿಧರ, ಕೆ.ವಿ.ಉಮೇಶ್, ಕೆ.ಜಯಲಕ್ಷಿö್ಮ, ಕೇಶವ ಕಾಮತ್, ಟಿ.ಪಿ.ರಮೇಶ್, ಪ್ರತಿಮಾ ರೈ ಅವರಿಗೆ ವಿತರಿಸಲಾಯಿತು. ಶ್ರೀನಿವಾಸ್ ಸ್ವಾಗತಿಸಿದರು, ಕೆ.ಜಯಲಕ್ಷಿö್ಮ ನಿರೂಪಿಸಿದರು.