ಹೆಚ್.ಕೆ.ಜಗದೀಶ್

ಗೋಣಿಕೊಪ್ಪಲು, ಫೆ. ೨೧: ಚಳಿಗಾಲ ಮರೆಯಾಗಿ ಬೇಸಿಗೆ ಕಾಲಿಡುತ್ತಿದೆ. ಉರಿಬಿಸಿಲು ಜನರಿಗೆ ಬೆವರಿಳಿಸುತ್ತದೆ. ನೀರಿನ ಹಾಹಾಕಾರವನ್ನು ಸೃಷ್ಟಿಸುತ್ತದೆ. ಅದೇ ರೀತಿ ಅರಣ್ಯ ಪ್ರದೇಶದಲ್ಲಿ ಕಾಡ್ಗಿಚ್ಚು ಭಯವೂ ಆವರಿಸುತ್ತದೆ. ಅದರಲ್ಲೂ ರಸ್ತೆ ಬದಿಗಳಲ್ಲಿರುವ ಮೀಸಲು ಅರಣ್ಯ ಪ್ರದೇಶಗಳಲ್ಲಿ ಹೆಚ್ಚಿನ ಮುಂಜಾಗ್ರತೆಯ ಅವಶ್ಯಕತೆ ಬೇಕಾಗಿದೆ. ಈ ನಿಟ್ಟಿನಲ್ಲಿ ಅರಣ್ಯ ಇಲಾಖೆ ಕಾರ್ಯತಂತ್ರ ಕೈಗೊಂಡಿದ್ದು, ಕೊಡಗು-ಮೈಸೂರು ಗಡಿ ಭಾಗವಾದ ಆನೆಚೌಕೂರುವಿನಲ್ಲಿ ಭಾಗದಲ್ಲಿ ಅನಾಹುತ ಆಗದಂತೆ ಹೆಚ್ಚಿನ ನಿಗಾವಹಿಸಿದೆ.

ಕೆಲ ವರ್ಷಗಳ ಹಿಂದೆ ಆನೆಚೌಕೂರು ಮೀಸಲು ಅರಣ್ಯ ಪ್ರದೇಶದಲ್ಲಿ ಬೆಂಕಿ ಕಾಣಿಸಿಕೊಂಡು ದೊಡ್ಡ ಮಟ್ಟದ ಅನಾಹುತ ಸಂಭವಿಸಿತ್ತು. ಹಲವು ಜೀವಿಗಳ ಮಾರಣ ಹೋಮವಾಗಿತ್ತು. ನೈಸರ್ಗಿಕ ಪರಿಸರ ಸುಟ್ಟು ಕರಕಲಾಗಿತ್ತು. ಈ ರೀತಿ ಅನಾಹುತಗಳು ಮರುಕಳಿಸಬಾರದೆಂದು ಪ್ರತಿವರ್ಷ ಅರಣ್ಯ ಇಲಾಖೆ ಕಾಡ್ಗಿಚ್ಚು ತಡೆಗೆ ವಿಶೇಷ ಯೋಜನೆ ಕೈಗೊಳ್ಳುತ್ತದೆ. ಈ ಬಾರಿಯೂ ವಿಶೇಷ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ.

ಅರಣ್ಯ ಪ್ರದೇಶ ಹಾದುಹೋಗುವ ರಾಜ್ಯ, ಅಂತರರಾಜ್ಯ ಹೆದ್ದಾರಿಗಳಲ್ಲಿ ಪ್ರವಾಸಿಗರು, ನಾಗರಿಕರು ತಮ್ಮ ವಾಹನಗಳನ್ನು ನಿಲುಗಡೆಗೊಳಿಸಿ ಧೂಮಪಾನ ಮಾಡುವುದು ನಂತರ ಬೀಡಿ, ಸಿಗರೇಟ್ ತುಂಡುಗಳನ್ನು ಅಲ್ಲಿಯೇ ಎಸೆದು ತೆರಳುತ್ತಿರುವುದು ಇತ್ತೀಚಿನ ದಿನದಲ್ಲಿ ಹೆಚ್ಚಾಗಿ ಕಂಡುಬರುತ್ತಿವೆ. ಅಲ್ಲದೆ ರಸ್ತೆ ಬದಿಯಲ್ಲಿರುವ ಮಂಗಗಳಿಗೆ ಆಹಾರ ಹಾಕುತ್ತ ಪ್ಲಾಸ್ಟಿಕ್ ಚೀಲ ಹಾಗೂ ಇತರ ವಸ್ತುಗಳನ್ನು ಅರಣ್ಯಕ್ಕೆ ಹೊಂದಿಕೊAಡಿರುವ ಪ್ರದೇಶದಲ್ಲಿ ಎಸೆದು ತೆರಳುತ್ತಿರುವುದು ನಡೆಯುತ್ತಿದೆ. ಇದರಿಂದ ಅರಣ್ಯದ ವನ್ಯಪ್ರಾಣಿಗಳಿಗೆ ಸಮಸ್ಯೆ ಎದುರಾಗುತ್ತಿದೆ. ಬೀಡಿ ಸಿಗರೇಟ್‌ಗಳನ್ನು ಸೇದಿ ರಸ್ತೆ ಬದಿಯಲ್ಲೇ ಎಸೆದು ತೆರಳುತ್ತಿರುವುದರಿಂದ ಅರಣ್ಯಕ್ಕೆ ಕಾಡ್ಗಿಚ್ಚು ತಗುಲುವ ಸಂಭವವೂ ಹೆಚ್ಚಾಗಿದೆ.

ಬೆಂಕಿ ಕಾವಲುಗಾರರ ನೇಮಕ

ಈ ನಿಟ್ಟಿನಲ್ಲಿ ಅರಣ್ಯ ಇಲಾಖೆಯು ೪ಐದನೇ ಪುಟಕ್ಕೆ

(ಮೊದಲ ಪುಟದಿಂದ) ತಿತಿಮತಿ-ಆನೆಚೌಕೂರು-ಹುಣಸೂರು ಮಾರ್ಗದ ಅರಣ್ಯ ಪ್ರದೇಶದ ಬದಿಯಲ್ಲಿ ಇಂತಹ ಸನ್ನಿವೇಶಗಳು ಎದುರಾದಲ್ಲಿ ಇದನ್ನು ತಕ್ಷಣವೇ ತಡೆಗಟ್ಟುವ ನಿಟ್ಟಿನಲ್ಲಿ ಹಾಗೂ ಕಾಡ್ಗಿಚ್ಚು ಹರಡದಂತೆ ಮುಂಜಾಗ್ರತಾ ಕ್ರಮವಾಗಿ ರಸ್ತೆಯ ಬದಿಯಲ್ಲಿ ೨೦೦ಮೀ ದೂರಕ್ಕೆ ಓರ್ವ ಬೆಂಕಿ ಕಾವಲುಗಾರನನ್ನು ನೇಮಿಸಿದೆ. ಹತ್ತಾರು ಬೆಂಕಿ ಕಾವಲುಗಾರರು ಪ್ರತಿನಿತ್ಯ ಕೆಲಸ ನಿರ್ವಹಿಸುತ್ತಿದ್ದಾರೆ. ಬೆಂಕಿ ಕಾವಲುಗಾರರ ನಿರ್ವಹಣೆಗೆ ಓರ್ವ ಹಿರಿಯ ಅಧಿಕಾರಿಯನ್ನು ನಿಯೋಜಿಸಲಾಗಿದೆ. ರಾಜ್ಯ ಹೆದ್ದಾರಿಯ ಅರಣ್ಯ ಪ್ರದೇಶದ ಎರಡು ಬದಿಯ ವ್ಯಾಪ್ತಿಯಲ್ಲಿ ಯಾವುದೇ ವಾಹನಗಳು ನಿಲುಗಡೆಗೊಳ್ಳದಂತೆ ಬೆಂಕಿ ಕಾವಲುಗಾರರು ಅತ್ಯಂತ ಎಚ್ಚರಿಕೆ ವಹಿಸುತ್ತಿದ್ದಾರೆ.

ಹಲವು ಭಾಗದಲ್ಲಿ ಹೊರ ರಾಜ್ಯದ ವಾಹನಗಳು ಈ ಭಾಗದಲ್ಲಿ ಸಂಚರಿಸುವ ಸಂದರ್ಭ ಅರಣ್ಯ ಪ್ರದೇಶದಲ್ಲಿ ಕಂಡು ಬರುವ ಕಾಡು ಪ್ರಾಣಿಗಳನ್ನು ವೀಕ್ಷಿಸಲು ಹಾಗೂ ಮೊಬೈಲ್‌ನಲ್ಲಿ ಚಿತ್ರ ಸೆರೆ ಹಿಡಿಯಲು ತಮ್ಮ ವಾಹನಗಳನ್ನು ನಿಲುಗಡೆಗೊಳಿಸುತ್ತಿದ್ದಾರೆ. ಯಾವುದೇ ವಾಹನಗಳು ರಸ್ತೆ ಬದಿಯಲ್ಲಿ ನಿಲುಗಡೆಗೊಳ್ಳದಂತೆ ಹಾಗೂ ವಾಹನಗಳಿಂದ ಪ್ರಯಾಣಿಕರು ಹೊರಗೆ ಇಳಿಯದಂತೆ ಎಚ್ಚರಿಕೆಯಿಂದ ಗಮನಿಸುತ್ತಿದ್ದಾರೆ. ಒಂದು ವೇಳೆ ವಾಹನಗಳು ನಿಲುಗಡೆಯಾಗುವುದು ಕಂಡು ಬಂದರೆ ಇಲಾಖೆ ವತಿಯಿಂದ ನೇಮಕಗೊಂಡಿರುವ ಬೆಂಕಿ ಕಾವಲುಗಾರರು ಕೂಡಲೇ ವಾಹನ ನಿಲುಗಡೆಗೊಳಿಸಿದ ಸ್ಥಳಕ್ಕೆ ತೆರಳಿ ವಾಹನವನ್ನು ಅಲ್ಲಿಂದ ಕಳುಹಿಸುತ್ತಿದ್ದಾರೆ.

ಅಗ್ನಿಶಾಮಕ ವಾಹನ ವ್ಯವಸ್ಥೆ

ಆಕಸ್ಮಿಕವಾಗಿ ಅರಣ್ಯ ಪ್ರದೇಶದಲ್ಲಿ ಬೆಂಕಿ ಕಾಣಿಸಿಕೊಂಡಲ್ಲಿ ಇವುಗಳನ್ನು ನಿಯಂತ್ರಿಸಲು ಗೋಣಿಕೊಪ್ಪ ನಗರದಿಂದ ಅಗ್ನಿಶಾಮಕ ದಳದ ವಾಹನ ಹಾಗೂ ಸಿಬ್ಬಂದಿಗಳು ಸ್ಥಳಕ್ಕೆ ತೆರಳಲು ತಡವಾಗುವ ಹಿನ್ನೆಲೆಯಲ್ಲಿ ಮುಂಜಾಗ್ರತ ಕ್ರಮವಾಗಿ ಮತ್ತಿಗೋಡು ಅರಣ್ಯ ಕಚೇರಿ ಮುಂಭಾಗದಲ್ಲಿ ಮುಂಜಾನೆಯಿAದ ಸಂಜೆಯವರೆಗೆ ಅಗ್ನಿಶಾಮಕ ವಾಹನದೊಂದಿಗೆ ಫೈಯರ್ ಫೈರ‍್ಸ್ ತಯಾರಾಗಿರುತ್ತಾರೆ. ಪ್ಲಾಸ್ಟಿಕ್ ವಸ್ತುಗಳನ್ನು ಅರಣ್ಯ ಪ್ರದೇಶದಲ್ಲಿ ಎಸೆಯುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ನಿಯಮ ಮೀರಿ ನಿರ್ಬಂಧಿತ ಸ್ಥಳಗಳಲ್ಲಿ ವಾಹನಗಳನ್ನು ನಿಲ್ಲಿಸುವುದು ರಸ್ತೆ ಬದಿಯಲ್ಲಿ ಪ್ಲಾಸ್ಟಿಕ್ ವಸ್ತುಗಳನ್ನು ಬಿಸಾಡುವುದು ಕಂಡುಬAದಲ್ಲಿ ಗಸ್ತಿನಲ್ಲಿರುವ ಅರಣ್ಯ ಸಿಬ್ಬಂದಿಗಳು ಅಂತವರಿಗೆ ಇಲಾಖೆಯ ವತಿಯಿಂದ ದಂಡ ವಿಧಿಸಲಾಗುತ್ತದೆ.

ಸ್ಥಾವರಗಗಳ ನಿರ್ಮಾಣ

ಮತ್ತಿಗೋಡು ಅರಣ್ಯ ವ್ಯಾಪ್ತಿಯಲ್ಲಿ ಹಾಗೂ ಚೆನ್ನಂಗಿ ಭಾಗದಲ್ಲಿ ಅರಣ್ಯ ಪ್ರದೇಶಗಳು ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಹೆಚ್ಚುವರಿಯಾಗಿ ೬೫ ಬೆಂಕಿ ಕಾವಲುಗಾರರು ಹಾಗೂ ಮತ್ತಿಗೋಡು, ಗಣಗೂರು, ಬಸಿರಿಪಾರೆ, ಚೆನ್ನಂಗಿ ಮತ್ತು ಗದಿಗೆಬೆಟ್ಟ ಅರಣ್ಯ ಪ್ರದೇಶದಲ್ಲಿ ೫ ವಾಚ್ ಟವರ್ (ಸ್ಥಾವರ) ಗಳನ್ನು ನಿರ್ಮಿಸಿ ಆ ಮೂಲಕ ಸುತ್ತಲಿನ ಪರಿಸರವನ್ನು ವೀಕ್ಷಣೆ ಮಾಡಲಾಗುತ್ತಿವೆ. ಮುಂಜಾಗ್ರತಾ ಕ್ರಮವಾಗಿ ಹಿರಿಯ ಅಧಿಕಾರಿಗಳು ಆಗಿಂದ್ದಾಗಿಯೇ ಅರಣ್ಯ ಪ್ರದೇಶದಲ್ಲಿ ಬೀಟ್ ಕಾರ್ಯ ನಡೆಸುತ್ತಿದ್ದಾರೆ. ಬೆಂಕಿಯ ಸಂಭವ ಕಂಡುಬAದಲ್ಲಿ ನಾಗರಿಕರು ಅರಣ್ಯ ಇಲಾಖೆಗೆ ಕೂಡಲೇ ಖಚಿತ ಮಾಹಿತಿ ನೀಡಬೇಕು ಎಂದು ಮತ್ತಿಗೋಡು ವನ್ಯಜೀವಿ ವಿಭಾಗದ ಆರ್‌ಎಫ್‌ಓ ದೇವರಾಜ್ ತಿಳಿಸಿದ್ದಾರೆ.