ನಾಪೋಕ್ಲು, ಫೆ. ೨೧: ಯವಕಪಾಡಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲಾ ವಾರ್ಷಿಕೋತ್ಸವ ಮತ್ತು ಕ್ರೀಡೋತ್ಸವ ಜರುಗಿತು.
ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಕುಶಾಲಪ್ಪ ಅಧ್ಯಕ್ಷತೆಯಲ್ಲಿ ಜರುಗಿದ ಸಮಾರಂಭವನ್ನು ಕ್ರೀಡಾಜ್ಯೋತಿ ಬೆಳಗುವುದರ ಮೂಲಕ ಪ್ರಾರಂಭಿಸಲಾಯಿತು. ನಂತರ ವಿದ್ಯಾರ್ಥಿಗಳಿಗೆ ವಿವಿಧ ಆಟೋಟ, ಪೋಷಕರು ಹಾಗೂ ಗ್ರಾಮಸ್ಥರಿಗೆ ವಾಲಿಬಾಲ್, ಹಗ್ಗಜಗ್ಗಾಟ ಸೇರಿದಂತೆ ವಿವಿಧ ರೀತಿಯ ಮನೋರಂಜನಾ ಆಟಗಳನ್ನು ಏರ್ಪಡಿಸಿ ಬಹುಮಾನ ವಿತರಿಸಲಾಯಿತು. ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ನಿವೃತ್ತ ಶಿಕ್ಷಕಿ ರೇಖಾಕುಮಾರಿ ಹಾಗೂ ಸ್ಥಳೀಯ ಆಂಗ್ಲ ಮಾಧ್ಯಮ ಶಾಲೆಯ ಶಿಕ್ಷಕಿ ಈರಮ್ಮ ಭಾಗವಹಿಸಿ ಮಾತನಾಡಿ, ಮಕ್ಕಳಿಗೆ ಉತ್ತಮ ಜೀವನ ಮೌಲ್ಯಗಳ ಬಗ್ಗೆ ಮಾಹಿತಿಯಿತ್ತರು.
ಕಾರ್ಯಕ್ರಮದಲ್ಲಿ ಶಾಲೆಯ ಅಡುಗೆ ಸಿಬ್ಬಂದಿ ಕಾತ್ಯಾಯಿನಿ ಅವರನ್ನು ಸನ್ಮಾನಿಸಿ, ಗೌರವಿಸಲಾಯಿತು. ಕುಂಜಿಲ - ಕಕ್ಕಬ್ಬೆ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಭರತ್ ಚಂದ್ರ ದೇವಯ್ಯ, ಶಾಲೆಯ ಮಾಜಿ ಎಸ್ಡಿಎಂಸಿ ಅಧ್ಯಕ್ಷ ತಮ್ಮಯ್ಯ, ಎಸ್ಡಿಎಂಸಿ ಉಪಾಧ್ಯಕ್ಷೆ ಮೀನಾ, ಯವಕಪಾಡಿ ಅಂಗನವಾಡಿ ಕಾರ್ಯಕರ್ತೆ ಪೊನ್ನು, ನಿವೃತ್ತ ಅಂಗನವಾಡಿ ಸಹಾಯಕಿ ಶಾಂತಿ ಕೆ.ಕೆ., ಹಿರಿಯ ಜಾನಪದ ಕಲಾವಿದೆ ಕುಡಿಯರ ದೇವಕ್ಕಿ, ಧನು, ಸುಬ್ರಮಣಿ, ಕಾರ್ಯಪ್ಪ, ಸುಂದರ, ದೇವಯ್ಯ ಉಪಸ್ಥಿತರಿದ್ದರು.
ಶಾಲೆಯ ಮುಖ್ಯ ಶಿಕ್ಷಕಿ ಪವಿತ್ರ ನಿರೂಪಿಸಿ, ವರದಿಯನ್ನು ಶಿಕ್ಷಕಿ ಮುತ್ತಮ್ಮ ವಾಚಿಸಿದರು. ಶಿಕ್ಷಕಿ ಅಶ್ವಿನಿ ಸ್ವಾಗತಿಸಿ, ವಂದಿಸಿದರು.