ಚೆಟ್ಟಳ್ಳಿ, ಫೆ.೨೦: ಚೆಟ್ಟಳ್ಳಿಯ ಚೇರಳ ಗ್ರಾಮದಲ್ಲಿ ಕಾಡಾನೆಗಳು ಮಿತಿಮೀರಿದ್ದು ತೋಟಗಳಲ್ಲಿನ ಅಡಿಕೆ ಗಿಡಗಳನ್ನು ಸಂಪೂರ್ಣವಾಗಿ ನಾಶಪಡಿಸಿವೆ.
ಚೆಟ್ಟಳ್ಳಿ-ಸುಂಠಿಕೊಪ್ಪ ಮುಖ್ಯರಸ್ತೆ ಬದಿಯ ಮೀನುಕೊಲ್ಲಿ ಅರಣ್ಯದ ಅಂಚಿನಲ್ಲಿ ಕಾಡಾನೆ ಹಾವಳಿ ನಿಯಂತ್ರಣಕ್ಕೆ ಗೇಟ್ ನಿರ್ಮಿಸಲಾಗಿದ್ದು, ನಿತ್ಯವೂ ಗೇಟ್ ತೆರೆದಿರುವುದರಿಂದ ರಾತ್ರಿಯಾದ ತಕ್ಷಣವೇ ಕಾಡಾನೆಗಳು ಪಕ್ಕದ ಕಾಫಿ ತೋಟಗಳು ಹಾಗೂ ಗದ್ದೆಗಳಿಗೆ ದಾಳಿ ಮಾಡಿ ಬೆಳೆ ನಾಶಪಡಿಸುತ್ತಿವೆ.
ಹಿಂದೆ ಗದ್ದೆಗಳಲ್ಲಿ ಭತ್ತವನ್ನು ಬೆಳೆಯಲಾಗುತ್ತಿತ್ತು. ಆದರೆ ನಿರಂತರ ಕಾಡಾನೆಗಳ ಉಪಟಳದಿಂದ ಭತ್ತ ಬೆಳೆ ಕೈಬಿಟ್ಟು, ಆದಾಯದ ಮೂಲವಾಗಿ ಅಡಿಕೆ ಗಿಡಗಳನ್ನು ನೆಡಲಾಗಿತ್ತು. ಇದೀಗ ಹಲವು ಅಡಿಕೆ ಗಿಡಗಳನ್ನು ಕಾಡಾನೆಗಳು ಸಂಪೂರ್ಣವಾಗಿ ನಾಶಪಡಿಸಿರುವುದರಿಂದ ರೈತರಿಗೆ ಭಾರೀ ನಷ್ಟ ಉಂಟಾಗಿದೆ.
ಈ ಕುರಿತು ಅರಣ್ಯ ಇಲಾಖೆಗೆ ದೂರು ಸಲ್ಲಿಸಲಾಗಿದ್ದು, ಭರವಸೆ ನೀಡಿದರೂ ಯಾವುದೇ ಪರಿಣಾಮಕಾರಿಯಾದ ಕ್ರಮ ಕೈಗೊಳ್ಳಲಾಗಿಲ್ಲ ಎಂದು ಬೆಳೆಗಾರರಾದ ಡಾ.ಕೊಂಗೇಟಿರ ದೀಪಕ್ ಆರೋಪಿಸಿ ದ್ದಾರೆ.