ಕುಶಾಲನಗರ, ಫೆ. ೨೦: ಕುಶಾಲನಗರ ಸಮೀಪ ಬೈಲುಕುಪ್ಪೆ ಬಳಿ ಹೆದ್ದಾರಿ ಅಂಚಿನಲ್ಲಿ ಮೀಸಲು ಅರಣ್ಯಕ್ಕೆ ಬೆಂಕಿ ತಗುಲಿ ಭಾರಿ ಪ್ರಮಾಣದ ಅರಣ್ಯ ಪ್ರದೇಶ ಹೊತ್ತಿ ಉರಿದ ಘಟನೆ ಶುಕ್ರವಾರ ಸಂಜೆ ನಡೆದಿದೆ. ಬೈಲುಕುಪ್ಪೆಯಿಂದ ಪಿರಿಯಾಪಟ್ಟಣ ಕಡೆಗೆ ತೆರಳುವ ಮಾರ್ಗದಲ್ಲಿ ಸುಮಾರು ಒಂದು ಕಿಲೋಮೀಟರ್ ಉದ್ದಕ್ಕೂ ಬೆಂಕಿ ಹಬ್ಬಿದ್ದು ಕುಶಾಲನಗರ ಮತ್ತು ಪಿರಿಯಾಪಟ್ಟಣದ ಅಗ್ನಿಶಾಮಕ ತಂಡಗಳು ಬೆಂಕಿ ನಂದಿಸುವ ಕಾರ್ಯಾಚರಣೆಯಲ್ಲಿ ತೊಡಗಿದೆ. ಘಟನೆಯಿಂದ ಆತಂಕದ ವಾತಾವರಣ ಸೃಷ್ಟಿಯಾಗಿದೆ.