ಕೂಡಿಗೆ, ಫೆ. ೨೦: ಕೊಡಗು ವಿಶ್ವವಿದ್ಯಾಲಯದ ದ್ವಿತೀಯ ಮತ್ತು ಚತುರ್ಥ ಸೆಮಿಸ್ಟರ್ ಬಿ.ಎಡ್ ಪದವಿ ಮತ್ತು ಸ್ನಾತಕ ಪದವಿ ಪರೀಕ್ಷಾ ಫಲಿತಾಂಶವನ್ನು ಕೊಡಗು ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ. ಅಶೋಕ ಸಂಗಪ್ಪ ಆಲೂರ ಅವರು ವಿಶ್ವವಿದ್ಯಾಲಯದ ವೆಬ್‌ಸೈಟ್‌ನಲ್ಲಿ ಅಧಿಕೃತವಾಗಿ ಪ್ರಕಟಿಸಿದರು.

ಕೊಡಗು ವಿಶ್ವವಿದ್ಯಾಲಯದ ಘಟಕ ಮತ್ತು ಸಂಯೋಜಿತ ಮಹಾವಿದ್ಯಾಲಯಗಳ ೨೦೨೫-೨೬ನೇ ಶೈಕ್ಷಣಿಕ ಸಾಲಿನ ಬಿಕಾಂ, ಬಿಬಿಎ ಮತ್ತು ಬಿಎಸ್ಸಿ ಪದವಿಗಳ ಪ್ರಥಮ/ತೃತೀಯ/ ಪಂಚಮ ಸೆಮಿಸ್ಟರ್‌ನ (ಆವರ್ತನ ಮತ್ತು ಪುನರಾವರ್ತನ) ಪರೀಕ್ಷೆಗಳು ಮುಗಿದ ನಾಲ್ಕು ದಿನಗಳಲ್ಲಿ ಫಲಿತಾಂಶವನ್ನು ಪ್ರಕಟಿಸುವ ಮೂಲಕ ಅತೀ ಕಡಿಮೆ ಅವಧಿಯಲ್ಲಿ ಪರೀಕ್ಷೆಗಳನ್ನು ನಡೆಸಿ ಫಲಿತಾಂಶವನ್ನು ಪ್ರಕಟಿಸಿದ ಕೀರ್ತಿಗೆ ಕೊಡಗು ವಿಶ್ವವಿದ್ಯಾಲಯ ಭಾಜನವಾಗಿದೆ.

ವಿಶ್ವವಿದ್ಯಾಲಯವು ಸ್ನಾತಕ ಪದವಿ ಪರೀಕ್ಷೆಗಳು ಮುಗಿದ ೨೦ ದಿನಗಳೊಳಗೆ ಫಲಿತಾಂಶವನ್ನು ಪ್ರಕಟಿಸಬೇಕು ಎಂದು ಯುಜಿಸಿ ನಿರ್ದೇಶನವಿದೆ. ಆದರೆ ಕೇವಲ ನಾಲ್ಕು ದಿನಗಳಲ್ಲಿ ಫಲಿತಾಂಶವನ್ನು ಪ್ರಕಟಿಸುವ ಮೂಲಕ ಕೊಡಗು ವಿಶ್ವವಿದ್ಯಾಲಯವು ಈ ಹಿಂದೆಯೂ ಸಾರ್ವಜನಿಕ ಮೆಚ್ಚುಗೆಗೆ ಪಾತ್ರವಾಗಿತ್ತು.

ಜನವರಿ ಮತ್ತು ಫೆಬ್ರವರಿ ತಿಂಗಳಲ್ಲಿ ನಡೆದ ಪರೀಕ್ಷೆಯಲ್ಲಿ ಕೊಡಗಿನ ೨೨ ಕಾಲೇಜುಗಳ ಸುಮಾರು ೬೦೦೦ ವಿದ್ಯಾರ್ಥಿಗಳು ಹಾಜರಾಗಿದ್ದರು. ಹಾಗೆಯೇ ಫೆಬ್ರವರಿ ತಿಂಗಳಲ್ಲಿ ನಡೆದ ಪರೀಕ್ಷೆಯಲ್ಲಿ ವೀರಾಜಪೇಟೆಯ ಸರ್ವೋದಯ ಬಿ.ಎಡ್ ಕಾಲೇಜು ಮತ್ತು ಪೊನ್ನಂಪೇಟೆಯ ಸಾಯಿ ಶಂಕರ್ ಕಾಲೇಜುಗಳ ಒಟ್ಟು ೯೫ ವಿದ್ಯಾರ್ಥಿಗಳು ಹಾಜರಾಗಿದ್ದರು.

ಫಲಿತಾಂಶವನ್ನು UUಅಒS ಅಥವಾ ಕೊಡಗು ವಿಶ್ವವಿದ್ಯಾಲಯದ ವೆಬ್‌ಸೈಟ್ ಏUಏ.ಏಚಿಡಿಟಿಚಿಣಚಿಞಚಿ.gov.iಟಿ ಮುಖಾಂತರ ವಿದ್ಯಾರ್ಥಿಗಳ ನೋಂದಣಿ ಸಂಖ್ಯೆ ಮೂಲಕ ನೋಡಲು ಲಭ್ಯವಿದೆ.

ಈ ಸಂದರ್ಭ ಕೊಡಗು ವಿಶ್ವವಿದ್ಯಾಲಯದ ಕುಲಸಚಿವ (ಮೌಲ್ಯಮಾಪನ) ಡಾ. ಸುರೇಶ್ ಎಂ., ಕೊಡಗು ವಿವಿ ಪರೀಕ್ಷಾಂಗದ ವಿಶೇಷಾಧಿಕಾರಿ ದ ಪ್ರೊ. ರವಿಶಂಕರ್ ಎಂ ಎನ್, ಸಿಬ್ಬಂದಿಗಳು ಮತ್ತು ಉಪನ್ಯಾಸಕರುಗಳು ಉಪಸ್ಥಿತರಿದ್ದರು.