ಪಾಲಿಬೆಟ್ಟ, ಫೆ. ೨೦: ಪೊನ್ನಂಪೇಟೆ ತಾಲೂಕಿನ ಜೋಡುಬೀಟಿ ನಿವಾಸಿ ಸೋಮಶೇಖರ್ ಹಾಗೂ ವೇದಾವತಿ ಅವರ ಪುತ್ರನಾಗಿರುವ ಎಸ್. ಧನುಷ್ ಅವರು ಹುಟ್ಟಿನಿಂದಲೇ ಸಂಪೂರ್ಣವಾಗಿ ದೃಷ್ಠಿಯನ್ನು ಕಳೆದುಕೊಂಡಿದ್ದಾರೆ. ಧನುಷ್ಗೆ ೨೩ ವರ್ಷ ವಯಸ್ಸಾಗಿದ್ದು, ಇವರ ವಿದ್ಯಾಭ್ಯಾಸವನ್ನು ಪಾಲಿಬೆಟ್ಟ, ಚೆಶೈರ್ ಹೋಮ್ಸ್ ಇಂಡಿಯಾ ಕೂರ್ಗ್ ವಿಶೇಷ ಶಾಲೆಯಲ್ಲಿ ವಿಶೇಷ ಶಿಕ್ಷಕರಾದ ಶಿವರಾಜ್ರವರು ಬ್ರೆöÊಲ್ ಲಿಪಿ, ಚಲನ-ವಲನ ತರಬೇತಿ ಇತ್ಯಾದಿ ವಿಶೇಷ ಶಿಕ್ಷಣವನ್ನು ನೀಡಿದ್ದಾರೆ. ಜೊತೆಗೆ ಶಿಕ್ಷಕರಾದ ಗೀತಾ ನಾಯ್ಡು ಟಿ.ಸಿ. ಅವರ ಸಹಕಾರದಿಂದ ಶಿಕ್ಷಣವನ್ನು ಪಡೆದಿದ್ದಾರೆ. ನಂತರ ಮೈಸೂರಿನ ಸರ್ಕಾರಿ ಅಂಧ ಮಕ್ಕಳ ಪಾಠಶಾಲೆಯ ಅಧೀಕ್ಷಕ ಸತೀಶ್ ಕ್ಯಾತನಹಳ್ಳಿ ಅವರ ಮಾರ್ಗದರ್ಶನದಲ್ಲಿ ಉಚಿತ ಶಿಕ್ಷಣ, ವಸತಿಯನ್ನು ಕಲ್ಪಿಸಿ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಶೇ. ೬೩ರಷ್ಟು ಅಂಕವನ್ನು ಪಡೆದು ಉತ್ತೀರ್ಣರಾಗಿದ್ದಾರೆ. ನಂತರ ಇವರು ಮೈಸೂರಿನ ಜೆಎಸ್ಎಸ್ನಲ್ಲಿ ಡಿಪ್ಲೋಮಾ ಇನ್ ಕಂಪ್ಯೂಟರ್ ಅಪ್ಲಿಕೇಶನ್ (ಸಿಎ) ಮೂರು ವರ್ಷದ ತರಬೇತಿಯನ್ನು ಪಡೆದಿದ್ದಾರೆ.
ಧನುಷ್ ಅವರು ಒಬ್ಬ ವ್ಯಕ್ತಿಯನ್ನು ಮಾತನಾಡಿಸಿದ ಮತ್ತೊಂದು ತಿಂಗಳು ಕಳೆದರೂ ಆ ವ್ಯಕ್ತಿಯ ಕೈಯನ್ನು ಮುಟ್ಟಿ ಯಾರು ಎಂದು ಗುರುತಿಸುವಂತಹ ವಿಶೇಷ ಪ್ರತಿಭೆಯನ್ನು ಹೊಂದಿರುತ್ತಾರೆ. ಮೊಬೈಲ್ ಫೋನ್ ಹಾಗೂ ಲ್ಯಾಪ್ಟಾಪ್ನಲ್ಲಿ ಕೆಲಸ ಮಾಡುವಂತಹ ಬುದ್ಧಿವಂತಿಕೆ ಕೂಡ ಈ ವ್ಯಕ್ತಿ ತಿಳಿದುಕೊಂಡಿರುತ್ತಾರೆ. ಹಲವು ವಿಚಾರದ ಬಗ್ಗೆ ಕೆಲವು ಸಂದರ್ಭಗಳಲ್ಲಿ ಅರಿವು ಮೂಡಿಸುವಂತಹ ಕೆಲಸಗಳನ್ನು ಕೂಡ ಇವರು ಮಾಡಿಕೊಂಡು ಬಂದಿರುತ್ತಾರೆ.
ವಿಶೇಷ ವರದಿ: ಪುತ್ತಂ ಪ್ರದೀಪ್