ಗೋಣಿಕೊಪ್ಪಲು, ಫೆ. ೨೦: ವನಸಿರಿಯ ನಡುವೆ ನೆಲೆ ನಿಂತಿರುವ ಮಹಾದೇವ ದೇವಸ್ಥಾನ ಅಭಿವೃದ್ಧಿ ಕಾರ್ಯ ಭರದಿಂದ ಸಾಗುತ್ತಿದ್ದು, ದೇವನೆಲೆಯಲ್ಲಿ ತಾ. ೨೨ ರಿಂದ ೨೫ ರವರೆಗೆ ದೇವಸ್ಥಾನ ಆಡಳಿತ ಮಂಡಳಿ ವತಿಯಿಂದ ಪ್ರತಿಷ್ಠಾ ಬ್ರಹ್ಮಕಲಶ ಮಹೋತ್ಸವವು ವಿವಿಧ ಪೂಜಾ ಕೈಂಕರ್ಯಗಳೊAದಿಗೆ ನಡೆಯಲಿದೆ.

ಈಗಾಗಲೇ ಆಡಳಿತ ಮಂಡಳಿ ಅಂತಿಮ ಸಿದ್ಧತೆಯನ್ನು ಕೈಗೊಂಡಿದ್ದು ದೇವಾಲಯದ ಆವರಣದ ಸುತ್ತಲೂ ನಡೆಯಬೇಕಾದ ಕಾಮಗಾರಿಗೆ ಚಾಲನೆ ನೀಡಿದೆ.

ದಕ್ಷಿಣ ಕೊಡಗಿನ ಬಾಳೆಲೆ ಹೋಬಳಿಯ ಬಾಳೆಲೆ ಪಟ್ಟಣದ ಅನತಿ ದೂರದಲ್ಲಿರುವ ದೇವನೂರು ಬಳಿ ಮಾದೇಶ್ವರ ದೇವಾಲಯ ನಿರ್ಮಾಣವಾಗಿದ್ದು ಈ ದೇವಾಲಯವು ಮುಂದೆ ಧಾರ್ಮಿಕ ಕೇಂದ್ರವಾಗಲಿದೆ. ಸುಂದರ ಪರಿಸರದ ನಡುವೆ ಎರಡೂವರೆ ಎಕರೆ ವಿಸ್ತೀರ್ಣದ ಮಧ್ಯಭಾಗದಲ್ಲಿ ಈ ದೇವಾಲಯವು ನಿರ್ಮಾಣವಾಗುತ್ತಿದೆ. ಈಗಾಗಲೇ ದೇವಸ್ಥಾನದ ಪ್ರಗತಿ ಕಾರ್ಯಗಳು ಮುಕ್ತಾಯದ ಹಂತ ತಲುಪಿವೆ. ವನಸಿರಿಯ ನಡುವೆ ಸುಂದರ ಸ್ಥಳದಲ್ಲಿ ಕಳೆದ ೪೦೦ ವರ್ಷಗಳ ಹಿಂದೆಯೇ ಇದ್ದಂತಹ ಈಶ್ವರನ ವಿಗ್ರಹಕ್ಕೆ ಪೂಜಾಕಾರ್ಯ ನಡೆಯುತ್ತಿದ್ದ ಕುರುಹುಗಳು ಕಂಡು ಬಂದ ಹಿನ್ನಲೆಯಲ್ಲಿ ಗ್ರಾಮಸ್ಥರು ಈ ದೇವಸ್ಥಾನವನ್ನು ಜೀರ್ಣೋದ್ಧಾರ ಮಾಡುವ ಸಲುವಾಗಿ ಯೋಜನೆ ರೂಪಿಸಿದ್ದರು. ಈ ಜಾಗದಲ್ಲಿ ಉತ್ತಮ ದೇವಾಸ್ಥಾನದ ನಿರ್ಮಾಣ ಮಾಡುವ ಸಲುವಾಗಿ ಗ್ರಾಮಸ್ಥರು ಒಟ್ಟುಗೂಡಿ ಹಲವು ಸುತ್ತಿನ ಸಭೆಗಳನ್ನು ನಡೆಸುತ್ತಲೇ ಬಂದಿದ್ದರು. ಗ್ರಾಮೀಣ ಭಾಗದಲ್ಲಿ ಧಾರ್ಮಿಕ ಕೇಂದ್ರವೊAದನ್ನು ಆರಂಭಿಸುವ ಸಲುವಾಗಿ ಯೋಜನೆ ಆರಂಭಿಸಿದ್ದರು.

ಭಕ್ತ ದಾನಿಗಳು ನೀಡಿದ ಹಣದ ಸಹಾಯದಿಂದ ಸುಂದರ ಪರಿಸರದ ನಡುವೆ ದೇವಾಲಯ ಸ್ಥಾಪನಾ ಕಾರ್ಯ ಯಶಸ್ವಿಯಾಗಿ ಆರಂಭಗೊAಡಿದ್ದು, ಇದೀಗ ತಾ.೨೨ರ ಮುಂಜಾನೆಯ ವೇಳೆ ದೇವಾಲಯವನ್ನು ಲೋಕಾರ್ಪಣೆ ಮಾಡಲು ಸಮಿತಿಯು ಅಂತಿಮ ಸಿದ್ಧತೆಯನ್ನು ಕೈಗೊಂಡಿದೆ.

ಪ್ರಸ್ತುತ ದೇವಾಲಯ ನಿರ್ಮಾಣದ ಉಸ್ತುವಾರಿಯನ್ನು ಆದೇಂಗಡ ವಾಸು ಬೆಳ್ಳಿಯಪ್ಪ ವಹಿಸಿದ್ದು, ದೇವಾಲಯ ಅಭಿವೃದ್ಧಿಗಾಗಿ ಹಗಲಿರುಳೆನ್ನದೆ ದುಡಿಯುತ್ತಿದ್ದಾರೆ. ಇವರಿಗೆ ದೇವಾಲಯ ಆಡಳಿತ ಮಂಡಳಿಯ ೧೨ ಮಂದಿ ಸಹಕಾರ ನೀಡುತ್ತಲೆ ಬಂದಿದ್ದಾರೆ. ಈಶ್ವರನಿಗೆ ನೆಲೆ ನೀಡುವ ಸಲುವಾಗಿ ದೇವನೂರಿನಲ್ಲಿ ಮಾದೇಶ್ವರ ದೇವಾಲಯ ಸ್ಥಾಪಿಸುವ ಮೂಲಕ ಸುತ್ತಮುತ್ತಲಿನ ಗ್ರಾಮಗಳಿಗೆ ಉತ್ತಮ ಧಾರ್ಮಿಕ ಕೇಂದ್ರವನ್ನಾಗಿ ಮಾಡಲು ಪ್ರಯತ್ನಗಳು ಶರವೇಗದಲ್ಲಿ ನಡೆಯುತ್ತಿವೆ.

ಮಹಾದೇವ ದೇವಾಲಯವು ವನಸಿರಿಯ ನಡುವೆ ಸುಂದರವಾದ ಪ್ರದೇಶದಲ್ಲಿ ನಿರ್ಮಾಣಗೊಂಡಿದೆ. ದೇವಾಲಯಕ್ಕೆ ತೆರಳಲು ಮುಖ್ಯ ರಸ್ತೆಯಿಂದ ಉತ್ತಮ ಕಾಂಕ್ರೀಟ್ ರಸ್ತೆಯನ್ನು ೪ಏಳನೇ ಪುಟಕ್ಕೆ

(ಮೊದಲ ಪುಟದಿಂದ) ನಿರ್ಮಾಣ ಮಾಡಲಾಗಿದೆ. ಬಾಳೆಲೆ, ಕೈನಾಟಿ ಸಮೀಪದಿಂದ ಭಕ್ತಾದಿಗಳು ಕಾಲ್ನಡಿಗೆಯ ಮೂಲಕ ಆಗಮಿಸಿ ದೇವಾಲಯವನ್ನು ಪ್ರವೇಶಿಸಬಹುದಾಗಿದೆ.

ಸುಂದರ ವನಸಿರಿಯ ನಡುವೆ ಮಾದೇಶ್ವರ ದೇವಾಲಯವು ನಿರ್ಮಾಣವಾಗುತ್ತಿರುವುದರಿಂದ ಸಹಜವಾಗಿಯೇ ಈ ದೇವಾಲಯಕ್ಕೆ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ಮಾಡುವ ಸಾಧ್ಯತೆ ಇದೆ.

ಬಾಳೆಲೆ-ಪೊನ್ನಪ್ಪಸಂತೆ ಮುಖ್ಯ ರಸ್ತೆಯ ಅನತಿ ದೂರದ ದೇವನೂರು ಗ್ರಾಮದಲ್ಲಿ ದೇವಾಲಯ ನಿರ್ಮಾಣವಾಗುತ್ತಿದೆ. ಬಾಳೆಲೆ, ದೇವನೂರು ಹಾಗೂ ಸುಳುಗೋಡು ಗ್ರಾಮದ ಸುತ್ತಮುತ್ತಲಿನಲ್ಲಿ ಕಾಫಿ ಬೆಳೆಗಾರರು, ರೈತರು ಸೇರಿದಂತೆ ಕಾರ್ಮಿಕರು ಹೆಚ್ಚಾಗಿ ವಾಸಿಸುತ್ತಿದ್ದಾರೆ.

೪೦೦ ವರ್ಷ ಇತಿಹಾಸವಿರುವ ಈ ಭಾಗದಲ್ಲಿ ಇಲ್ಲಿಯ ತನಕ ಧಾರ್ಮಿಕ ಕೇಂದ್ರ ಆರಂಭವಾಗಿರಲಿಲ್ಲ. ಇದೀಗ ಈ ಭಾಗದ ಗ್ರಾಮಸ್ಥರು ದೇವಾಲಯ ಸ್ಥಾಪನೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

ಕಳೆದ ೪೦೦ ವರ್ಷಗಳ ಹಿಂದೆ ಗ್ರಾಮದ ಹಿರಿಯರು ವನ ಸಿರಿಯ ನಡುವೆ ಇರುವ ಸುಂದರ ಜಾಗದಲ್ಲಿ ದೇವಾಲಯ ನಿರ್ಮಾಣ ಮಾಡಿದ್ದರು. ಇದಕ್ಕೆ ಪುರವೆಯಾಗಿ ಬೃಹತ್ತಾದ ಶಿವಲಿಂಗವು ಈ ಭಾಗದಲ್ಲಿ ಗೋಚರಿಸಿತ್ತು. ಆದರೆ ದೇವಾಲಯದ ನಿರ್ವಹಣೆ ಇಲ್ಲದೆ ಹಾಗೂ ನಾನಾ ಕಾರಣಗಳಿಂದ ಶಿವಲಿಂಗವು ಭಗ್ನಗೊಂಡಿತ್ತು. ಈ ಬಗ್ಗೆ ಗ್ರಾಮಸ್ಥರು ತಂತ್ರಿಗಳ ಬಳಿ ವಿಚಾರಿಸಿದ ವೇಳೆ ದೇವಾಲಯದ ನಿರ್ಮಾಣದ ಬಳಿಕ ಗ್ರಾಮಕ್ಕೆ ಒಳಿತಾಗುವ ಸೂಚನೆ ನೀಡಿದ್ದರು. ದೇವಾಲಯದ ಜಾಗವು ದೇವಾಲಯಕ್ಕೆ ಸಂಬAಧಿಸಿದ್ದಾಗಿದ್ದು ಸ್ವಂತ ದಾಖಲಾತಿಯನ್ನು ಹೊಂದಿದೆ.

ಕಳೆದ ೧ ವರ್ಷಗಳ ಹಿಂದೆ ದೇವಾಲಯ ಸಮಿತಿಯು ಗ್ರಾಮಸ್ಥರ ಅಭಿಪ್ರಾಯದಂತೆ ಅನುಷ್ಠಾನಕ್ಕೆ ಬಂದಿದೆ. ಸಮಿತಿಯು ಸರ್ವ ಸದಸ್ಯರ ತೀರ್ಮಾನದಂತೆ ದೇವಾಲಯ ಕೆಲಸ ಮುಂದುವರೆಯುತ್ತಿದೆ. ರೂ.೧.೨೫ ಕೋಟಿ ವೆಚ್ಚದಲ್ಲಿ ದೇವಾಲಯವು ನಿರ್ಮಾಣವಾಗುತ್ತಿದೆ.

ನೂತನ ದೇವಾಲಯದಲ್ಲಿ ವಾರ್ಷಿಕ ಉತ್ಸವ ಸೇರಿದಂತೆ ಚಂದ್ರಮಾನ ಯುಗಾದಿ, ಕಾರ್ತಿಕ ಪೂಜೆ, ಶಿವರಾತ್ರಿ ಉತ್ಸವ ನಡೆಯಲಿದೆ. ಅಲ್ಲದೆ ಪ್ರತಿನಿತ್ಯ ಪೂಜಾ ಕಾರ್ಯಗಳು ನಡೆಯಲಿವೆ. ದೇವಾಲಯಕ್ಕೆ ಪ್ರವೇಶಿಸುವ ಮುಖ್ಯದ್ವಾರ, ಉಗ್ರಾಣ ಕೊಠಡಿ, ಅಡುಗೆ ಶಾಲೆ, ನೈವೇದ್ಯ ಕೋಣೆ, ಅರ್ಚಕರ ಕೊಠಡಿ, ಶೌಚಾಲಯಗಳ ಕಾಮಗಾರಿಗಳು ಕೊನೆ ಹಂತದಲ್ಲಿವೆ.

ಆಡಳಿತ ಮಂಡಳಿಯ ನಿರ್ಮಾಣ ಸಮಿತಿಯ ಆದೇಂಗಡ ವಾಸು ಬೆಳ್ಳಿಯಪ್ಪ, ಆದೇಂಗಡ ವಿನು ಉತ್ತಪ್ಪ, ಆದೇಂಗಡ ದಿನೇಶ್, ಆದೇಂಗಡ ರಮೇಶ್ ಚಿಟ್ಟಿಯಪ್ಪ ಹಾಗೂ ಇತರೆ ಸದಸ್ಯರು ಬ್ರಹ್ಮಕಲಶ ಮಹೋತ್ಸವದ ಯಶಸ್ವಿಗೆ ಅಂತಿಮ ಸಿದ್ಧತೆಯಲ್ಲಿ ತೊಡಗಿಸಿಕೊಂಡಿದ್ದಾರೆ.

ತಾ. ೨೫ ರಂದು ಮಹಾದೇವರ ಪ್ರತಿಷ್ಠೆ-ಅಷ್ಟಬಂಧ ಬ್ರಹ್ಮಕಲಶೋತ್ಸವ ಕಾರ್ಯಕ್ರಮಕ್ಕೆ ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ, ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಎ.ಎಸ್ ಪೊನ್ನಣ್ಣ, ಕೊಡಗು ಉಸ್ತುವಾರಿ ಸಚಿವರಾದ ಭೋಸರಾಜ್, ಮುಜರಾಯಿ ಸಚಿವರಾದ ರಾಮಲಿಂಗಾ ರೆಡ್ಡಿ, ಜಿಲ್ಲಾ ಗ್ಯಾರೆಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ತೀತಿರ ಧರ್ಮಜ ಉತ್ತಪ್ಪ, ಮಾಜಿ ಜಿ.ಪಂ. ಸದಸ್ಯ ಬಾನಂಡ ಪ್ರಥ್ವಿ ಆಗಮಿಸಲಿದ್ದಾರೆ ಎಂದು ದೇವಸ್ಥಾನದ ನಿರ್ವಾಣ ಸಮಿತಿಯ ಪ್ರಮುಖರು ತಿಳಿಸಿದ್ದಾರೆ.

೪ ದಿನಗಳ ಪೂಜಾ ಕಾರ್ಯಗಳು

ತಾ. ೨೨ ರಿಂದ ೨೫ ರವರೆಗೆ ಅಷ್ಟಬಂಧ ಬ್ರಹ್ಮಕಲಶೋತ್ಸವದ ಪ್ರಯುಕ್ತ ವಿವಿಧ ರೀತಿಯ ಪೂಜಾ ಕೈಂಕರ್ಯಗಳು ನಡೆಯಲಿದ್ದು, ಮುಂಜಾನೆ ೫ ಗಂಟೆಗೆ ತಂತ್ರಿಗಳಿಗೆ, ವೈದಿಕರಿಗೆ ಸ್ವಾಗತದಿಂದ ಕಾರ್ಯಕ್ರಮವು ಆರಂಭಗೊಳ್ಳಲಿದೆ. ದೇವತಾ ಪ್ರಾರ್ಥನೆ, ವಾಸ್ತು ಹೋಮ, ವಾಸ್ತು ಬಲಿ, ಪಂಚಗವ್ಯ ಪುಣ್ಯಾಹ, ೧೦೮ ತೆಂಗಿನಕಾಯಿ ಮಹಾಗಣಪತಿ ಹೋಮ, ನವಗ್ರಹ ಶಾಂತಿ, ಆಶ್ಲೇಷ ಬಲಿ, ದುರ್ಗಾಪೂಜೆ, ಮೃತ್ಯುಂಜಯ ಹೋಮ, ಅನುಜ್ಞಾ ಪ್ರಾರ್ಥನೆ, ಜೀವೋದ್ವಾಸನ ವಿಧಿ, ಕುಂಬೇಶ ಕರ್ಕರಿ ಪೂಜೆ, ಅದ್ದಿವಾಸ ಹೋಮ, ಬ್ರಹ್ಮ ಕುಂಭ ಪೊರಣ, ಶಯ್ಯಾಪೂಜೆ, ಭದ್ರಕ ಪೂಜೆ, ಪ್ರತಿಷ್ಠಾ ಹೋಮ, ಶ್ರೀ ಮಹಾದೇವರ ಪ್ರತಿಷ್ಠೆ, ಜೀವ ಕಲಶಾಭಿಷೇಕ, ಅಷ್ಟಬಂಧಕ್ರಿಯೆ, ಶಿಖಿರ ಪ್ರತಿಷ್ಠೆ, ವಾಹನ ಪ್ರತಿಷ್ಠೆ, ಪಂಚಾಮೃತ ಅಭಿಷೇಕ ಸಹಿತ ರುದ್ರಾಭಿಷೇಕ, ಬ್ರಹ್ಮ ಕಲಶಾಭಿಷೇಕ, ಮಹಾಪೂಜೆ, ಕ್ಷೇತ್ರ ಅನುಷ್ಠಾನ ನಿಶ್ವಯ, ಮಂತ್ರಾಕ್ಷತೆ, ಶ್ರೀ ದೇವರ ಉತ್ಸವ ಬಲಿ, ಬಟ್ಟಲು ಕಾಣಿಕೆ, ಪ್ರಸಾದ ವಿತರಣೆ ಸೇರಿದಂತೆ ಪ್ರತಿ ದಿನವೂ ಅನ್ನ ಸಂತರ್ಪಣೆಯನ್ನು ಹಮ್ಮಿಕೊಳ್ಳಲಾಗಿದೆ.