ಶಾಸಕ ಡಾ. ಮಂತರ್ ಗೌಡÀ
ನಾಪೋಕ್ಲು, ಫೆ. ೨೦: ನಿವೇಶನಗಳನ್ನು ಸರ್ಕಾರದ ಯೋಜನೆ ಅನುಸಾರ ಉಚಿತವಾಗಿ ನೀಡಲಾಗಿದ್ದು ಯಾರಿಗೂ ಕೂಡ ಒಂದು ರೂಪಾಯಿಯನ್ನು ನೀಡಬಾರದು. ಅಧಿಕಾರಿಗಳು ಅಥವಾ ಯಾವುದೇ ವ್ಯಕ್ತಿಯಾಗಲಿ ಹಣಕ್ಕೆ ಬೇಡಿಕೆ ಇಟ್ಟಲ್ಲಿ ನೇರವಾಗಿ ಜಿಲ್ಲಾಧಿಕಾರಿಗಳಿಗೆ ದೂರು ನೀಡುವಂತೆ ಮಡಿಕೇರಿ ಶಾಸಕರಾದ ಡಾ. ಮಂತರ್ ಗೌಡ ಹೇಳಿದರು.
ಜಿಲ್ಲಾಡಳಿತ ಹಾಗೂ ಹೊದ್ದೂರು ಗ್ರಾಮ ಪಂಚಾಯಿತಿ ಸಹಯೋಗದಲ್ಲಿ ಕಡಬಗೇರಿಯಲ್ಲಿ ನಡೆದ ಹಕ್ಕು ಪತ್ರ ವಿತರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಒಟ್ಟು ೬೦ ಅರ್ಹ ಮತ್ತು ಆಯ್ದ ಫಲಾನುಭವಿಗಳನ್ನು ಗುರುತಿಸಿ ನಿವೇಶನ ನೀಡಲಾಗಿದ್ದು ಸದ್ಯದಲ್ಲಿ ಮನೆ ನಿರ್ಮಿಸಿಕೊಡುವುದಾಗಿ ಭರವಸೆ ನೀಡಿದರು.
ಯಾರು ಕೂಡ ನಿವೇಶನವನ್ನು ಇತರರಿಗೆ ಮಾರಾಟ ಮಾಡಬಾರದು. ಮಾರಾಟ ಮಾಡಿದಲ್ಲಿ ಕಾನೂನು ರೀತಿ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದರು.
ನೂತನ ಬಡಾವಣೆಗೆ ಡಾ. ಮಂತರ್ ಗೌಡ ಬಡಾವಣೆ ಎಂಬ ನಾಮಕರಣ ಮಾಡಲು ಫಲಾನುಭವಿಗಳು ಕೋರಿಕೆಯನ್ನು ನಯವಾಗಿ ನಿರಾಕರಿಸಿ ಬದಲಿಗೆ ಬಾಬಾ ಸಾಹೇಬ್ ಡಾ ಬಿ.ಆರ್. ಅಂಬೇಡ್ಕರ್ ಬಡಾವಣೆ ಎಂದು ನಾಮಕರಣ ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಭಾರತ ರತ್ನ ಬಿ.ಆರ್. ಅಂಬೇಡ್ಕರ್ ಅವರು ನಾವೆಲ್ಲ ಹತ್ತು ಜನ್ಮ ಎತ್ತಿದರೂ ಸಾಧಿಸಲು ಸಾಧ್ಯವಾಗದಂತಹ ಮಹಾನ್ ಸಾಧನೆಯನ್ನು ಈ ದೇಶದ ಜನತೆಗಾಗಿ ಮಾಡಿದ್ದಾರೆ. ಅಂತಹ ಮಹಾನ್ ವ್ಯಕ್ತಿಯ ಹೆಸರನ್ನು ಬಡಾವಣೆಗೆ ನಾಮಕರಣ ಮಾಡುವುದು ಒಳಿತು ಎಂದು ಡಾ ಮಂತರ್ ವಿವರಿಸಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಜಿಲ್ಲಾಧಿಕಾರಿ ಎಸ್.ಜೆ. ಸೋಮಶೇಖರ್, ಶಾಸಕ ಮಂತರ್ ಗೌಡ ಅವರ ಪ್ರಯತ್ನ ಹಾಗೂ ಹೊದ್ದೂರು ಗ್ರಾಮ ಪಂಚಾಯಿತಿ ಸರ್ವ ಸದಸ್ಯರು, ಕಂದಾಯ ಹಾಗೂ ಗ್ರಾಮೀಣಾಭಿವೃದ್ಧಿ ಇಲಾಖೆಯ ಅಧಿಕಾರಿಗಳ ಪರಿಶ್ರಮದಿಂದ ಉತ್ತಮ ಕೆಲಸ ಆಗಿದ್ದು ಶ್ರಮಿಸಿದ ಪ್ರತಿಯೊಬ್ಬರೂ ಅಭಿನಂದನಾರ್ಹರು ಎಂದು ಶ್ಲಾಘಿಸಿದರು.
ಹೊದ್ದೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಹೆಚ್.ಎ.ಹಂಸ ಮಂತರ್ ಗೌಡ ಅವರು ಶಾಸಕರಾಗಿ ಆಯ್ಕೆಗೊಂಡ ಎರಡೂವರೆ ವರ್ಷದಲ್ಲಿ ೯ ಕೋಟಿ ರೂಗಳಿಗೂ ಹೆಚ್ಚಿನ ಅನುದಾನವನ್ನು ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳ ಅಭಿವೃದ್ಧಿಗೆ ನೀಡಿದನ್ನು ವಿವರಿಸಿದರು. ಪಂಚಾಯಿತಿ ವ್ಯಾಪ್ತಿಯಲ್ಲಿ ಒಟ್ಟು ೩೦೦ ಹಕ್ಕು ಪತ್ರಗಳನ್ನು ಡಾ. ಮಂತರ್ ಗೌಡ ರವರ ಅವಧಿಯಲ್ಲಿ ವಿತರಿಸಿದ್ದು ಇದೊಂದು ಐತಿಹಾಸಿಕ ದಾಖಲೆ ಎಂದು ಬಣ್ಣಿಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಗ್ರಾಮ ಪಂಚಾಯಿತಿ ಸದಸ್ಯ ಮೊಣ್ಣಪ್ಪ; ಚುನಾವಣೆ ಸಂದರ್ಭದಲ್ಲಿ ಹಕ್ಕುಪತ್ರ ನೀಡುವ ಭರವಸೆಯನ್ನು ಡಾ ಮಂತರ್ ಗೌಡ ಈಡೇರಿಸುವ
ಮೂಲಕ ನುಡಿದಂತೆ ನಡೆದಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಮಡಿಕೇರಿ ತಹಶೀಲ್ದಾರ್ ಶ್ರೀಧರ್, ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಶೇಖರ್, ಗ್ಯಾರಂಟಿ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ಮಂದ್ರಿರ ಮೋಹನ್ ದಾಸ್, ಅಲ್ಪಸಂಖ್ಯಾತ ಘಟಕದ ಜಿಲ್ಲಾಧ್ಯಕ್ಷರಾದ ಹನೀಫ್, ಹೊದ್ದೂರು ಗ್ರಾಮ ಪಂಚಾಯಿತಿ ಪಿ.ಡಿ.ಓ. ವತ್ಸಲಾ ಕುಮಾರಿ, ಹೊಸ್ಕೇರಿ ಪಿ.ಡಿ.ಓ. ಅಬ್ದುಲ್ಲಾ, ಪ್ರಮುಖರಾದ ತೆನ್ನಿರ ಮೈನಾ, ವಿ.ಜಿ. ಮೋಹನ್, ಅಪ್ರು ರವೀಂದ್ರ, ಕೊಳುಮಂಡ ರಫೀಕ್, ಗ್ರಾಮ ಪಂಚಾಯಿತಿ ಸದಸ್ಯರಾದ ಚೌರೀರ ಅನಿತಾ, ಹಮೀದ್, ಕುಸುಮಾವತಿ, ಲಕ್ಷಿö್ಮÃ, ಅನುರಾಧ , ಕಡ್ಲೆರ ಟೈನಿ , ಮೊಯ್ದು, ಕೆ.ಆರ್. ಅನಿತಾ ಸೇರಿದಂತೆ ಕಂದಾಯ ಅಧಿಕಾರಿಗಳು, ಪಂಚಾಯಿತಿ ಸಿಬ್ಬಂದಿಗಳು, ಫಲಾನುಭವಿ ಕುಟುಂಬದವರು ಮತ್ತು ಗ್ರಾಮಸ್ಥರು ಇದ್ದರು.