ಸೋಮವಾರಪೇಟೆ, ಫೆ. ೨೦: ಸಮೀಪದ ಗೌಡಳ್ಳಿ ಗ್ರಾಮದ ಓಂ ಶ್ರೀ ನವದುರ್ಗಾ ಪರಮೇಶ್ವರಿ ದೇವಾಲಯ ಸಮಿತಿ ವತಿಯಿಂದ ಜಾತ್ರೋತ್ಸವ ಅಂಗವಾಗಿ ಬಿಜಿಎಸ್ ಶಾಲಾ ಮೈದಾನದಲ್ಲಿ ಮುಕ್ತ ಫುಟ್ಬಾಲ್ ಹಾಗೂ ಮಹಿಳೆಯರ ಥ್ರೋಬಾಲ್ ಪಂದ್ಯಾವಳಿ ನಡೆಯಿತು.

ರೋಚಕತೆಯಿಂದ ಕೂಡಿದ್ದ ಮುಕ್ತ ಫುಟ್ಬಾಲ್ ಪಂದ್ಯಾವಳಿಯ ಫೈನಲ್ ಪಂದ್ಯದಲ್ಲಿ ಬೀಟಿಕಟ್ಟೆ ನೀಲ್ ಶಾಂತ್‌ಬಾಯ್ಸ್ ತಂಡ ೨-೦ ಗೋಲುಗಳ ಅಂತರದಲ್ಲಿ ಗೆಲುವು ಸಾಧಿಸಿ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು. ಗೌಡಳ್ಳಿ ಫುಟ್ಬಾಲ್ ಕ್ಲಬ್ ತಂಡ ದ್ವಿತೀಯ ಸ್ಥಾನ ಪಡೆಯಿತು.

ಪ್ರಥಮ ಸ್ಥಾನ ಪಡೆದ ತಂಡಕ್ಕೆ ರೂ. ೧,೧೧,೧೧೧ ನಗದು ಹಾಗೂ ಆಕರ್ಷಕ ಟ್ರೋಫಿ, ದ್ವಿತೀಯ ಸ್ಥಾನ ಪಡೆದ ತಂಡಕ್ಕೆ ರೂ. ೫೫,೫೫೫ ನಗದು ಹಾಗೂ ಆಕರ್ಷಕ ಟ್ರೋಫಿ ನೀಡಲಾಯಿತು.

ಮಹಿಳೆಯರ ಥ್ರೋಬಾಲ್ ಪಂದ್ಯಾಟವೂ ಪ್ರೇಕ್ಷಕರಿಂದ ಮೆಚ್ಚುಗೆ ಪಡೆಯಿತು. ಅಗ್ನಿ ನೇತ್ರ ಫ್ರೆಂಡ್ಸ್ ತಂಡ ಪ್ರಥಮ ಸ್ಥಾನ ಗಳಿಸಿದರೆ, ದುರ್ಗಾಂಬಾ ಫ್ರೆಂಡ್ಸ್ ತಂಡ ದ್ವಿತೀಯ ಸ್ಥಾನಕ್ಕೆ ತೃಪ್ತಿಪಟ್ಟಿತು. ಸಮಾರೋಪ ಸಮಾರಂಭದಲ್ಲಿ ಶಾಸಕ ಡಾ. ಮಂತರ್ ಗೌಡ ಬಹುಮಾನ ವಿತರಿಸಿ ಮಾತನಾಡಿ, ಗ್ರಾಮೀಣ ಪ್ರದೇಶಗಳಲ್ಲಿರುವ ಕ್ರೀಡಾ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುವುದು ನಮ್ಮೆಲ್ಲರ ಜವಾಬ್ದಾರಿ ಎಂದರು.

ಇದೇ ಸಂದರ್ಭ ರೈತ ಸಂಘದ ಉಪಾಧ್ಯಕ್ಷ ಜಿ.ಎಂ. ಹೂವಯ್ಯ, ಕ್ರೀಡಾಪಟು ಬಿ.ಎಸ್. ಅನೀಸ್, ದೇವಾಲಯ ಸಮಿತಿ ಉಪಾಧ್ಯಕ್ಷ ಹೆಚ್.ಎನ್. ಚಂದ್ರಶೇಖರ್ ಅವರನ್ನು ಸನ್ಮಾನಿಸಲಾಯಿತು.

ವೇದಿಕೆಯಲ್ಲಿ ಸಕಲೇಶಪುರ ಶಾಸಕ ಸಿಮೆಂಟ್ ಮಂಜು, ರಾಜ್ಯ ಒಕ್ಕಲಿಗರ ಸಂಘದ ಜಿಲ್ಲಾ ಪ್ರತಿನಿಧಿ ಹರಪಳ್ಳಿ ರವೀಂದ್ರ, ಗೌಡಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಮಂಜುನಾಥ್, ದೊಡ್ಡಮಳ್ತೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಗೋಪಾಲಕೃಷ್ಣ, ದೇವಾಲಯ ಸಮಿತಿ ಅಧ್ಯಕ್ಷ ಬಿ.ಪಿ. ಮೊಗಪ್ಪ, ಕ್ರೀಡಾ ಸಮಿತಿ ಅಧ್ಯಕ್ಷ ಎಸ್.ಬಿ. ಗುರುಪ್ರಸಾದ್, ಪ್ರಮುಖರಾದ ಎಸ್.ಬಿ. ಭರತ್ ಕುಮಾರ್, ಹೆಚ್.ಆರ್. ಸುರೇಶ್, ಪಿ.ಕೆ. ರವಿ ಮತ್ತಿತರರು ಇದ್ದರು. ಎಂ.ಪಿ. ರವಿ ಕಾರ್ಯಕ್ರಮ ನಿರ್ವಹಿಸಿದರು.