ವೀರಾಜಪೇಟೆ, ಫೆ. ೧೮: ವೀರಾಜಪೇಟೆ ಕಾವೇರಿ ಕಾಲೇಜಿನ ದೈಹಿಕ ಶಿಕ್ಷಣ ವಿಭಾಗ ವತಿಯಿಂದ ಕೊಡಗಿನ ಇತಿಹಾಸದಲ್ಲಿ ಮೊದಲ ಬಾರಿಗೆ ರಿಂಕ್ ೫ ಎ ಸೈಡ್ ರಾಜ್ಯಮಟ್ಟದ ಅಂತರ ಕಾಲೇಜು ಹಾಕಿ ಪಂದ್ಯಾಟವನ್ನು ಆಯೋಜಿಸಲಾಗಿದೆ ಎಂದು ಕಾವೇರಿ ಕಾಲೇಜಿನ ಪ್ರಾಂಶುಪಾಲ ಬೆನೆಡಿಕ್ಟ್ ಆರ್ ಸಲ್ಡನ್ ಮಾಹಿತಿ ನೀಡಿದರು.
ಕಾವೇರಿ ಕಾಲೇಜಿನ ಕೌಸ್ತುಭ ಸಭಾಭವನದಲ್ಲಿ ಮಾತನಾಡಿದ ಅವರು; ಪದವಿ ಮಟ್ಟದ ವಿದ್ಯಾರ್ಥಿಗಳಿಗೆ ರಾಜ್ಯಮಟ್ಟದಲ್ಲಿಯೇ ಮೊದಲ ಬಾರಿಗೆ ಅಂತರ ಕಾಲೇಜು ೫ ಎ ಸೈಡ್ ರಿಂಕ್ ಹಾಕಿ ಪಂದ್ಯಾಟವನ್ನು ತಾ. ೨೦ ಮತ್ತು ೨೧ ರಂದು ಪೊನ್ನಂಪೇಟೆ ಟರ್ಫ್ ಮೈದಾನದಲ್ಲಿ ಆಯೋಜಿಸಲಾಗಿದೆ. ೨೦ ರಂದು ಕ್ರೀಡಾಕೂಟ ಆರಂಭವಾಗಲಿದ್ದು ತಾ. ೨೧ ರಂದು ಸಮಾರೋಪ ಸಮಾರಂಭ ನಡೆಯಲಿದೆ. ಎರಡು ದಿನಗಳ ಕಾಲ ನಡೆಯಲಿರುವ ಕ್ರೀಡಾಕೂಟಕ್ಕೆ ಎಲ್ಲರೂ ಸಹಕಾರ ನೀಡಿ ಕ್ರೀಡಾಪಟುಗಳನ್ನು ಪ್ರೋತ್ಸಾಹಿಸಬೇಕೆಂದರು.
ಕಾಲೇಜಿನ ದೈಹಿಕ ನಿರ್ದೇಶಕ ತಮ್ಮಯ್ಯ ಮಾತನಾಡಿ, ಸುಮಾರು ೨೦ ರಿಂದ ೨೫ ತಂಡಗಳು ಭಾಗವಹಿಸುವ ನಿರೀಕ್ಷೆಯಿದ್ದು ರಾಜ್ಯಮಟ್ಟದಲ್ಲಿ ಪದವಿ ವಿದ್ಯಾರ್ಥಿಗಳಿಗೆ ಇದೇ ಮೊದಲ ಬಾರಿ ರಿಂಕ್ ಹಾಕಿ ಪಂದ್ಯಾಟ ನಡೆಸಲಾಗುತ್ತಿದೆ. ಪ್ರಥಮ, ದ್ವಿತೀಯ, ತೃತೀಯ ಮತ್ತು ಚತುರ್ಥ ಸ್ಥಾನದಲ್ಲಿ ಬಂದ ತಂಡಗಳಿಗೆ ಆಕರ್ಷಕ ಪಾರಿತೋಷಕ ಹಾಗೂ ನಗದು ಬಹುಮಾನವನ್ನು ನೀಡಲಾಗುತ್ತದೆ. ಇದರೊಂದಿಗೆ ಶಿಸ್ತುಬದ್ಧ ತಂಡ, ವಿವಿಧ ವೈಯಕ್ತಿಕ ಬಹುಮಾನಗಳು ನೀಡಲಾಗುತ್ತದೆ ಎಂದರು.
ಈ ಸಂದರ್ಭ ಕಾಲೇಜಿನ ವಿದ್ಯಾರ್ಥಿ ಪರಿಷತ್ತಿನ ಉಪಾಧ್ಯಕ್ಷ ನಿರೂಪ್ ನಾಣಯ್ಯ, ಕ್ರೀಡಾ ಕಾರ್ಯದರ್ಶಿ ನಾಚಪ್ಪ ಉಪಸ್ಥಿತರಿದ್ದರು.