ಸಿದ್ದಾಪುರ, ಫೆ. ೧೮: ಕಾಡಾನೆಗಳ ಹಿಂಡು ಚಲಿಸುತ್ತಿದ್ದ ಕಾರಿನ ಮೇಲೆ ದಾಳಿ ನಡೆಸಿದ್ದು, ಕಾರು ಚಾಲಕ ಪ್ರಾಣಾಪಾ ಯದಿಂದ ಪಾರಾಗಿರುವ ಘಟನೆ ಸಿದ್ದಾಪುರ-ಮೈಸೂರು ರಸ್ತೆಯಲ್ಲಿ ಬುಧವಾರ ರಾತ್ರಿ ಸಂಭವಿಸಿದೆ.

ಸಿದ್ದಾಪುರ ಸಮೀಪದ ಪುಲಿಯೇರಿ ಗ್ರಾಮದ ಪ್ರಜಿತ್ ಕೆಲಸದ ನಿಮಿತ್ತ ಮೈಸೂರಿಗೆ ತೆರಳಿ ಹಿಂತಿರುಗಿ ರಾತ್ರಿ ಸಿದ್ದಾಪುರದತ್ತ ಬರುತ್ತಿರುವ ಸಂದರ್ಭದಲ್ಲಿ ಸಿದ್ದಾಪುರ-ಮೈಸೂರು ರಸ್ತೆ ಟೀಕ್ ವುಡ್ ಕಾಫಿ ತೋಟದ ಸಮೀಪದಲ್ಲಿ ಮೊದಲಿಗೆ ರಸ್ತೆ ಮೂಲಕ ಕಾಡಾನೆಯೊಂದು ಬರುತ್ತಿರುವುದನ್ನು ಗಮನಿಸಿ ನಿಧಾನವಾಗಿ ಕಾರನ್ನು ಚಲಾಯಿಸುತ್ತಿರುವ ಸಂದರ್ಭ ಏಕಾಏಕಿ ೪ ಕಾಡಾನೆಗಳಿದ್ದ ಗುಂಪು ಕಾರಿನ ಮೇಲೆ ದಾಳಿ ನಡೆಸಿ ಕಾರು ಚಾಲನೆ ಮಾಡುತ್ತಿದ್ದ ಪ್ರಜಿತ್ ಭಯದಿಂದಲೇ ಕಾರಿ ನಲ್ಲಿ ಕುಳಿತುಕೊಂಡಿದ್ದಾರೆ. ಕಾಡಾನೆಗಳು ದಂತದಿAದ ಕಾರಿನ ಮೇಲೆ ದಾಳಿ ನಡೆಸಿದ ಪರಿಣಾಮ ಕಾರಿಗೆ ಹಾನಿಯಾಗಿದೆ. ಕಾರಿನ ಮೇಲೆ ದಾಳಿ ನಡೆಸಿದ ಶಬ್ದ ಕೇಳಿ ರಾತ್ರಿ ಸಮಯದಲ್ಲಿ ಟೀಕ್ ವುಡ್ ಕಾಫಿ ತೋಟದ ವ್ಯವಸ್ಥಾಪಕ ಅನಿಲ್ ಅವರು ಕೂಡಲೇ ಬಂದು ನೋಡಿದಾಗ ಕಾಡಾನೆಗಳು ಕಾರಿನ ಮೇಲೆ ದಾಳಿ ನಡೆಸಿರುವುದು ಗೋಚರಿಸಿದೆ. ಆತಂಕಕ್ಕೆ ಸಿಲುಕಿದ್ದ ಚಾಲಕನನ್ನು ವಿಚಾರಿಸಿ ಧೈರ್ಯ ತುಂಬಿದರು. ಕಾಡಾನೆಗಳು ಕಾಫಿ ತೋಟಕ್ಕೆ ತೆರಳಿದ ನಂತರ ಕಾರು ಚಾಲಕ ಕಾರನ್ನು ತೆಗೆದುಕೊಂಡು ಸಿದ್ದಾಪುರಕ್ಕೆ ತೆರಳಿದರು. ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.

- ವಾಸು