ಸೋಮವಾರಪೇಟೆ, ಫೆ. ೧೯: ಸಮೀಪದ ನೇರುಗಳಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಿತ್ಲುಮಕ್ಕಿ ಗ್ರಾಮದಲ್ಲಿ ಕಳೆದ ೯ ವರ್ಷಗಳಿಂದ ಮುಚ್ಚಿರುವ ಕಲ್ಲುಕೋರೆಯನ್ನು ಪುನರ್ ಆರಂಭಿಸಲು ಪ್ರಯತ್ನ ಸಾಗಿದ್ದು, ಯಾವುದೇ ಕಾರಣಕ್ಕೂ ಕೋರೆ ಆರಂಭಕ್ಕೆ ಅವಕಾಶ ನೀಡಬಾರದು ಎಂದು ಗ್ರಾಮಸ್ಥರು ತಾಲೂಕು ತಹಶೀಲ್ದಾರ್ಗೆ ಮನವಿ ಸಲ್ಲಿಸಿದ್ದಾರೆ.
ಉದ್ದೇಶಿತ ಕೋರೆಯ ಅಕ್ಕಪಕ್ಕ ಮನೆಗಳಿದ್ದು, ಸಣ್ಣ ಪುಟ್ಟ ಮಕ್ಕಳು ಶಾಲೆಗೆ ಇದೇ ಕೋರೆಯ ರಸ್ತೆಯಲ್ಲಿ ಹೋಗಬೇಕಾಗಿದೆ. ಕೋರೆಯ ಸುತ್ತಮುತ್ತಲಲ್ಲಿ ವೃದ್ಧರು, ಮಹಿಳೆಯರು, ಗರ್ಭಿಣಿ, ಬಾಣಂತಿಯರು ವಾಸವಾಗಿದ್ದು, ಜೊತೆಗೆ ಪಕ್ಕದಲ್ಲಿಯೇ ಪೂರ್ವ ಪ್ರಾಥಮಿಕ, ಪ್ರಾಥಮಿಕ, ಪ್ರೌಢ ಶಾಲೆಯಿದೆ. ಗ್ರಾಮೀಣ ಭಾಗದ ಮಕ್ಕಳು ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದು, ಶಾಲಾ ಕೊಠಡಿಗಳು ಈಗಾಗಲೇ ಬಿರುಕು ಬಿಟ್ಟಿದೆ. ರಸ್ತೆಗಳು ನಡೆದಾಡಲು ಯೋಗ್ಯವಾಗಿಲ್ಲ. ಅಲ್ಲಲ್ಲಿ ಗುಂಡಿಗಳು ಬಿದ್ದಿದ್ದು, ಮಳೆಗಾಲದಲ್ಲಿ ಕೆಸರಿನ ಹೊಂಡಗಳಾಗುತ್ತವೆ. ಕೋರೆಯಲ್ಲಿ ಶಬ್ದಮಾಲಿನ್ಯ, ವಾಯುಮಾಲಿನ್ಯದೊಂದಿಗೆ ಪರಿಸರಕ್ಕೆ ಹಾನಿಯಾಗುತ್ತದೆ. ಈ ಹಿನ್ನೆಲೆ ಕೋರೆಯನ್ನು ಪುನಾರಾರಂಭ ಮಾಡಲು ಅನುಮತಿ ನೀಡಬಾರದೆಂದು ತಹಶೀಲ್ದಾರ್ ಕೃಷ್ಣಮೂರ್ತಿ ಅವರಿಗೆ ಮನವಿ ಸಲ್ಲಿಸಲಾಯಿ
ತು.
ಗ್ರಾಮಸ್ಥರಾದ ರಾಮಚಂದ್ರ, ಶಿವಣ್ಣ, ಮಹಮ್ಮದ್, ಅಪ್ಪಯ್ಯ, ಪದ್ಮಾವತಿ, ಮಮತಾ, ಶಾರದಾ, ಶಾಹೀನ, ಸ್ವಾತಿ, ಶ್ರುತಿ, ರಶ್ಮಿತಾ, ನಿಶಾ, ಲಲಿತಾ ಸೇರಿದಂತೆ ಇತರರು ಮನವಿ ಸಲ್ಲಿಸಿದ್ದು, ಒಂದು ವೇಳೆ ಸ್ಥಳೀಯರ ವಿರೋಧದ ನಡುವೆಯೂ ಕೋರೆಗೆ ಪರವಾನಗಿ ನೀಡಿದ್ದಲ್ಲಿ ಗ್ರಾಮಸ್ಥರೆಲ್ಲರೂ ಹೋರಾಟಕ್ಕಿಳಿಯ ಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.