ಬೆಂಗಳೂರು, ಫೆ. ೧೯: ಸಂಪುಟ ದರ್ಜೆಯ ಸಚಿವರ ಸ್ಥಾನಮಾನ ಹಾಗೂ ಸೌಲಭ್ಯಗಳೊಂದಿಗೆ ೩೪ ಮಂದಿ ಶಾಸಕರನ್ನು ರಾಜ್ಯದ ವಿವಿಧ ನಿಗಮ ಮಂಡಳಿಗಳಿಗೆ ಅಧ್ಯಕ್ಷರನ್ನಾಗಿ ಹಾಗೂ ದೆಹಲಿ ವಿಶೇಷ ಪ್ರತಿನಿಧಿ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ, ಮಾಧ್ಯಮ ಹಾಗೂ ಕಾನೂನು ಸಲಹೆಗಾರರೂ ಸೇರಿದಂತೆ ಎಂಟು ಮಂದಿ ಶಾಸಕರನ್ನು ನಿಯಮ ಮೀರಿ ವಿವಿಧ ಹುದ್ದೆಗಳಿಗೆ ನೇಮಕ ಮಾಡಿರುವುದು ಸಂವಿಧಾನಬಾಹಿರ ಎಂದು ಆಕ್ಷೇಪಿಸಿ ಸಲ್ಲಿಸಲಾಗಿರುವ ಅರ್ಜಿಯ ಕುರಿತು ತನ್ನ ನಿಲುವನ್ನು ತಿಳಿಸಲು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಸೂಚನೆ ನೀಡಿದೆ. ಈ ಸಂಬAಧ ಬೆಂಗಳೂರು ನಿವಾಸಿ ಸೂರಿ ಪಾಯಲ ಎಂಬವರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಹಾಗೂ ನ್ಯಾಯಮೂರ್ತಿ ಸಿ.ಎಂ. ಪೂಣಚ್ಚ ಅವರಿದ್ದ ವಿಭಾಗೀಯ ಪೀಠ ಈ ಸೂಚನೆ ನೀಡಿ ಅರ್ಜಿಯ ವಿಚಾರಣೆಯನ್ನು ಮಾರ್ಚ್ ೪ಕ್ಕೆ ಮುಂದೂಡಿದೆ.

ಕರ್ನಾಟಕ ವಿಧಾನಸಭೆಯ ಒಟ್ಟು ಸಂಖ್ಯಾಬಲದ ಶೇ.೧೫ರಷ್ಟು ಸದಸ್ಯರು ಸಚಿವರಾಗಲು ಅವಕಾಶವಿದೆ. ಅದರಂತೆ ೩೪ ಮಂದಿ ಸಚಿವರಾಗಬೇಕು. ಈಗ ಮುಖ್ಯ ಮಂತ್ರಿ ಸೇರಿ ೩೩ ಮಂದಿ ಸಚಿವರಿದ್ದಾರೆ. ಇದರ ಜೊತೆಗೆ ೩೪ ಮಂದಿ ಶಾಸಕರನ್ನು ನಿಗಮ-ಮಂಡಳಿಗಳ ಅಧ್ಯಕ್ಷರನ್ನಾಗಿ ನೇಮಿಸಿ ಅವರಿಗೆ ಸಂಪುಟದ ದರ್ಜೆ ಸ್ಥಾನಮಾನ, ಸೌಲಭ್ಯ, ವೇತನ, ಭತ್ಯೆಗಳನ್ನು ನೀಡಲಾಗಿದೆ. ಅಲ್ಲದೆ ಮುಖ್ಯಮಂತ್ರಿಗಳಿಗೆ ಇಬ್ಬರು ರಾಜಕೀಯ ಕಾರ್ಯದರ್ಶಿಗಳು, ಮುಖ್ಯ ಸಲಹೆಗಾರರು, ಮಾಧ್ಯಮ, ಕಾನೂನು ಸಲಹೆಗಾರರು, ವೈದ್ಯಕೀಯ ಹಾಗೂ ಆರ್ಥಿಕ ಸಲಹೆಗಾರರೂ ಸೇರಿದಂತೆ ಸುಮಾರು ೧೦ ಜನರಿಗೆ ಸಂಪುಟ ದರ್ಜೆಯ ಸ್ಥಾನಮಾನವನ್ನೂ ನೀಡಲಾಗಿದೆ ಎಂದು ಅರ್ಜಿಯಲ್ಲಿ ದೂಡಿದ್ದಾರೆ. ಇದು ಕಾನೂನು ಉಲ್ಲಂಘನೆಯಾಗಿದೆ. ಸರ್ಕಾರ ರಾಜಕೀಯ ಕಾರಣಗಳಿಂದಾಗಿ ಶಾಸಕರನ್ನು ವಿವಿಧ ಮಂಡಳಿಗಳು ಮತ್ತು ನಿಗಮಗಳ ಅಧ್ಯಕ್ಷರನ್ನಾಗಿ ನೇಮಕ ಮಾಡಿದೆ. ಅವರಿಗೆ ಕ್ಯಾಬಿನೆಟ್ ದರ್ಜೆ ಸ್ಥಾನ ಮಾನ ನೀಡಿರುವುದರಿಂದ ಅವರಿಗೆ ಹೆಚ್ಚಿನ ವೇತನ, ಹೊಸ ಕಾರು, ಅದಕ್ಕೆ ಇಂಧನ, ಚಾಲಕ, ಮನೆ ಬಾಡಿಗೆ ಭತ್ಯೆ, ವೈದ್ಯಕೀಯ ವೆಚ್ಚಗಳ ಮರುಪಾವತಿಯಂತಹ ಸೌಲಭ್ಯಗಳು ಲಭ್ಯವಾಗಲಿದ್ದು, ಸಾರ್ವಜನಿಕರ ತೆರಿಗೆ ಹಣದಿಂದ ಪಾವತಿ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ.

ಹೀಗಾಗಿ ೩೪ ಮಂದಿ ಶಾಸಕರಿಗೆ ನಿಗಮ - ಮಂಡಳಿ ಅಧ್ಯಕ್ಷ ಹುದ್ದೆ ನೀಡಿ ೨೦೨೪ರ ಜ.೨೬ರಂದು ಸರ್ಕಾರ ಹೊರಡಿಸಿರುವ ಹಾಗೂ ಎಂಟು ಮಂದಿ ಶಾಸಕರಿಗೆ ಸಂಪುಟ ದರ್ಜೆ ಸ್ಥಾನಮಾನದೊಂದಿಗೆ ವಿವಿಧ ಹುದ್ದೆಗಳಿಗೆ ನೇಮಕ ಮಾಡಿ ವಿವಿಧ ದಿನಾಂಕಗಳAದು ಹೊರಡಿಸಿರುವ ಅಧಿಸೂಚನೆಗಳನ್ನು ರದ್ದುಪಡಿಸಬೇಕು. ನೇಮಕಾತಿಯನ್ನು ಸಂವಿಧಾನಬಾಹಿರವೆAದು ಘೋಷಿಸಬೇಕು ಎಂದು ಅರ್ಜಿಯಲ್ಲಿ ಮನವಿ ಮಾಡಲಾಗಿದೆ. ಕೋವರ್ ಕೊಲ್ಲಿ ಇಂದ್ರೇಶ್