ಸೋಮವಾರಪೇಟೆ, ಫೆ. ೧೯: ಇಲ್ಲಿನ ಪಟ್ಟಣ ಪಂಚಾಯಿತಿಯ ೨೦೨೬-೨೭ನೇ ಸಾಲಿನ ಆಯವ್ಯಯ ತಯಾರಿಸುವ ಬಗ್ಗೆ ಪೂರ್ವಭಾವಿ ಸಭೆ ಪಟ್ಟಣ ಪಂಚಾಯಿತಿ ಸಭಾಂಗಣದಲ್ಲಿ ಮುಖ್ಯಾಧಿಕಾರಿ ಕೃಷ್ಣಪ್ರಸಾದ್ ಅಧ್ಯಕ್ಷತೆಯಲ್ಲಿ ನಡೆಯಿತು.
ಸಭೆಯಲ್ಲಿ ರೂ. ೨೦ ಕೋಟಿ ಗಾತ್ರದ ಬಜೆಟ್ ರಚಿಸುವ ಬಗ್ಗೆ ತೀರ್ಮಾನಿಸಲಾಯಿತು. ಆಯವ್ಯಯದಲ್ಲಿ ರಸ್ತೆ, ಕುಡಿಯುವ ನೀರು, ಚರಂಡಿ, ಪಾರ್ಕ್ ಸೇರಿದಂತೆ ವಿವಿಧ ಸೌಲಭ್ಯಗಳು ಹಾಗೂ ಅಭಿವೃದ್ಧಿಗಾಗಿ ರೂ. ೨೦ ಕೋಟಿ ವೆಚ್ಚದ ವಿವಿಧ ಯೋಜನೆಗಳನ್ನು ಗುರುತಿಸಲಾಗಿದೆ. ಸರ್ಕಾರ ಮತ್ತು ಕಂದಾಯ ಸೇರಿದಂತೆ ವಿವಿಧ ಮೂಲಗಳಿಂದ ಹಣ ಸಂಗ್ರಹಿಸಲು ನಿರ್ಧರಿಸಲಾಗಿದೆ ಎಂದು ಮುಖ್ಯಾಧಿಕಾರಿಗಳು ತಿಳಿಸಿದರು.
ಜಿಲ್ಲೆಯಲ್ಲಿ ಮಳೆ ಹೆಚ್ಚಾಗಿದ್ದು, ಮುಂದಿನ ಸಾಲಿನ ಬಜೆಟ್ನಲ್ಲಿ ರಸ್ತೆ ಮತ್ತು ಕುಡಿಯುವ ನೀರಿನ ಯೋಜನೆಗಳಿಗೆ ಹೆಚ್ಚಿನ ನಿಧಿ ಮೀಸಲಿಡುವಂತೆ ಪಂಚಾಯಿತಿ ಮಾಜಿ ಅಧ್ಯಕ್ಷೆ ಲೀಲಾ ನಿರ್ವಾಣಿ ಸಲಹೆ ನೀಡಿದರು.
ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಎರಡು ಪಾರ್ಕ್ಗಳು ನಿರ್ವಹಣೆಯಿಲ್ಲದೆ ಪಾಳು ಬಿದ್ದಿವೆ. ಅವುಗಳ ನಿರ್ವಹಣೆಗೆ ಹೆಚ್ಚಿನ ಹಣ ಇಡುವಂತೆ ಮಾಜಿ ಸದಸ್ಯೆ ಶೀಲಾ ಡಿಸೋಜ ತಿಳಿಸಿದರು.
ಪಂಚಾಯಿತಿ ವ್ಯಾಪ್ತಿಯಲ್ಲಿ ಸಾಕಷ್ಟು ಕಟ್ಟಡಗಳನ್ನು ಬೇನಾಮಿಯಾಗಿ ನಿರ್ಮಿಸುತ್ತಿದ್ದು, ಪಂಚಾಯಿತಿಗೆ ನಷ್ಟವಾಗುತ್ತಿದೆ. ಅದನ್ನು ತಡೆಯಬೇಕೆಂದು ಸೋಮವಾರಪೇಟೆ ಸೂಡ ಅಧ್ಯಕ್ಷ ಕೆ.ಎ. ಆದಮ್ ಹೇಳಿದರು.
ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಆನೆಕೆರೆ ಮತ್ತು ಕಟ್ಟೆ ಬಸವೇಶ್ವರ ದೇವಾಲಯದ ಬಳಿಯ ಕೆರೆಗಳು ಸಾರ್ವಜನಿಕರಿಂದ ಒತ್ತುವರಿಯಾಗಿವೆ. ಅದನ್ನು ಸರ್ವೆ ಮಾಡಿಸಿ, ಅಭಿವೃದ್ಧಿ ಪಡಿಸಬೇಕೆಂದು ಮಹೇಶ್ ತಿಳಿಸಿದರು.
ಈಗಾಗಲೇ ತಾಲೂಕಿನ ೨೦ ಕೆರೆಗಳನ್ನು ಗುರುತಿಸಿ ಅವುಗಳ ಅಭಿವೃದ್ಧಿಗೆ ರೂ. ೨೦ ಕೋಟಿ ಅನುದಾನವನ್ನು ಸರ್ಕಾರದಿಂದ ಕೇಳಲಾಗಿದೆ. ಆನೆಕೆರೆ ಸರ್ವೆ ಮಾಡಿಸಿ, ಅಭಿವೃದ್ಧಿ ಪಡಿಸಲು ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು. ಹಾಗೆಯೇ ಕಟ್ಟೆ ಬಸವೇಶ್ವರ ದೇವಾಲಯ ಬಳಿಯ ಕೆರೆಯ ಒತ್ತುವರಿ ತೆರವುಗೊಳಿಸಿ ಅಭಿವೃದ್ಧಿಗೆ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಮುಖ್ಯಾಧಿಕಾರಿ ಸಭೆಗೆ ತಿಳಿಸಿದರು.
ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಅಂಬೇಡ್ಕರ್ ಭವನ ಯಾವುದೇ ನಿರ್ವಹಣೆಯಿಲ್ಲದೆ, ಪಾಳುಬಿದ್ದಂತಾಗಿದೆ. ಅದನ್ನು ಯಾರು ನಿರ್ವಹಣೆ ಮಾಡುತ್ತಿದ್ದಾರೆ ಎಂದು ತಿಳಿದಿಲ್ಲ. ಸಭೆ ಸಮಾರಂಭಗಳಿಗೆ ಭವನವನ್ನು ನೀಡಿದರೂ, ಅದರಿಂದ ಬರುವ ಲಾಭದ ವಿಷಯ ಯಾರಿಗೂ ತಿಳಿಯುತ್ತಿಲ್ಲ. ಆದ್ದರಿಂದ ಕೂಡಲೇ ಅಂಬೇಡ್ಕರ್ ಭವನಕ್ಕೆ ಸಮಿತಿಯೊಂದನ್ನು ಮಾಡಿ ಸರಿಯಾಗಿ ನಿರ್ವಹಣೆ ಮಾಡುವಂತೆ ಮೀನಾಕುಮಾರಿ ಮತ್ತು ಎಸ್.ಆರ್. ವಸಂತ್ ಒತ್ತಾಯಿಸಿದರು. ಮುಂದಿನ ದಿನಗಳಲ್ಲಿ ಸಮಿತಿ ರಚಿಸುವುದರೊಂದಿಗೆ ಅದರ ಅಭಿವೃದ್ಧಿಗೆ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಮುಖ್ಯಾಧಿಕಾರಿ ತಿಳಿಸಿದರು.
ಸಭೆಯಲ್ಲಿ ಪಂಚಾಯಿತಿ ಲೆಕ್ಕಾಧಿಕಾರಿ ಭಾವನ, ಆರೋಗ್ಯ ನಿರೀಕ್ಷಕ ಜಾಸೀಂ ಖಾನ್, ವಿವಿಧ ಸಂಘ-ಸAಸ್ಥೆಗಳ ಪ್ರತಿನಿಧಿಗಳು, ಸಾರ್ವಜನಿಕರು, ಮಾಜಿ ಜನಪ್ರತಿನಿಧಿಗಳು ಇದ್ದರು.