ಮಡಿಕೇರಿ, ಫೆ. ೧೯: ಬಹು ಕಾಲದಿಂದ ದುರಸ್ತಿ ಕಾಣದೆ ಇದ್ದ ಮಡಿಕೇರಿ ತಾಲೂಕಿನ ಕ್ಯಾಮಾಟ್ - ಕುಂಬಳದಾಳು - ಮೂರ್ನಾಡು ರಸ್ತೆ ನವೀಕರಣದ ರೂ. ೧.೫ ಕೋಟಿ ವೆಚ್ಚದ ಕಾಮಗಾರಿಗೆ ಮಡಿಕೇರಿ ಕ್ಷೇತ್ರದ ಶಾಸಕ ಡಾ. ಮಂತರ್ ಗೌಡ ಭೂಮಿಪೂಜೆ ನೆರವೇರಿಸುವ ಮೂಲಕ ಚಾಲನೆ ನೀಡಿದರು.

ಮುಖ್ಯಮಂತ್ರಿಗಳು ಶಾಸಕರ ವಿಶೇಷ ಅನುದಾನವಾಗಿ ನೀಡಿದ ರೂ. ೫೦ ಕೋಟಿ ಅನುದಾನದಲ್ಲಿ ಕಾಮಗಾರಿ ನಡೆಯುತ್ತಿದ್ದು, ಕಾಮಗಾರಿ ಗುಣಮಟ್ಟದ ವಿಚಾರದಲ್ಲಿ ಯಾವುದೇ ರಾಜಿಗೆ ತಾವು ಸಿದ್ದರಿಲ್ಲ.ಕಾಮಗಾರಿ ಉತ್ತಮವಾಗಿದ್ದರೆ ಮಾತ್ರ ಬಿಲ್ ಪಾವತಿ ಮಾಡಲಾಗುವುದು ಎಂದು ಮಂತರ್ ಗೌಡ ಸ್ಪಷ್ಟಪಡಿಸಿದರು. ಮಡಿಕೇರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹೆಚ್.ಎ. ಹಂಸ ಮಾತನಾಡಿ, ಈ ಭಾಗದ ಜನರ ಬಹುಕಾಲದ ಬೇಡಿಕೆ ಈ ರಸ್ತೆ ಅಭಿವೃದ್ಧಿ ಆಗಿದ್ದು, ಶಾಸಕರು ವಿಶೇಷ ಕಾಳಜಿ ವಹಿಸಿ ಜನರ ಕೋರಿಕೆಯನ್ನು ಈಡೇರಿಸಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು. ಕೊಡಗು ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಹನೀಫ್, ಜಿಲ್ಲಾ ಕಾಂಗ್ರೆಸ್ ವಕ್ತಾರ ತೆನ್ನಿರ ಮೈನಾ, ಪ್ರಚಾರ ಸಮಿತಿ ಅಧ್ಯಕ್ಷ ವಿ.ಜಿ. ಮೋಹನ್, ಯುವ ಕಾಂಗ್ರೆಸ್ ಉಪಾಧ್ಯಕ್ಷ ಮೈಸಿ ಕತ್ತಣಿರ, ಸಾಮಾಜಿಕ ಜಾಲತಾಣದ ಪ್ರಮುಖರಾದ ಶಾಫಿ ಕೊಟ್ಟಮುಡಿ, ವಲಯ ಕಾಂಗ್ರೆಸ್ ಅಧ್ಯಕ್ಷ ಇಬ್ರಾಹಿಂ, ಗ್ರಾಮ ಪಂಚಾಯಿತಿ ಸದಸ್ಯರಾದ ಕಡ್ಲೆರ ಟೈನಿ, ಚೌರಿರ ಅನಿತಾ, ಚೌರಿರ ನವೀನ್, ಮೊಯ್ದು, ಪ್ರಮುಖರಾದ ಅಪ್ರು ರವೀಂದ್ರ, ಕಲಿಯಂಡ ಸಂಪತ್, ಕೊಳುಮಂಡ ರಫೀಕ್, ಕವನ್ ಕೊತ್ತೋಳಿ ಸೇರಿದಂತೆ ಇನ್ನಿತರರು ಇದ್ದರು.