ಪೊನ್ನಂಪೇಟೆ, ಫೆ. ೧೭: ಎಲ್ಲಾ ಸಮುದಾಯಗಳನ್ನು ಒಟ್ಟಿಗೆ ಸೇರಿಸಿಕೊಂಡು ಸಾಮರಸ್ಯ ಕಾಪಾಡುವ ವ್ಯವಸ್ಥೆ ದೇವರಕಾಡಿಗೆ ಇದೆ ಎಂದು ಕೊಡಗು ಮಾಡೆಲ್ ಫಾರೆಸ್ಟ್ ಅಧ್ಯಕ್ಷ ಡಾ ಸಿ.ಜಿ ಕುಶಾಲಪ್ಪ ಹೇಳಿದರು.
ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಹಾಗೂ ಕೊಡಗು ಮಾಡೆಲ್ ಫಾರೆಸ್ಟ್ ವತಿಯಿಂದ ಸುಲೋಚನಾ ಎಂ.ಜಿ ನಾಗರಾಜು ದತ್ತಿ ಕಾರ್ಯಕ್ರಮದಲ್ಲಿ ಕೊಡಗಿನ ದೇವರಕಾಡುಗಳ ಸಂರಕ್ಷಣೆ ಕುರಿತು ಮಾತನಾಡಿದ ಅವರು ಕೊಡಗಿನಲ್ಲಿ ೧,೨೧೫ ದೇವರಕಾಡುಗಳಿವೆ. ಇವುಗಳಲ್ಲಿ ೧೬೫ ಕ್ಕೂ ಹೆಚ್ಚು ದೇವರುಗಳಿವೆ. ಇವು ಒಂದು ಜನಾಂಗಕ್ಕೆ ಸೇರಿದವಲ್ಲ. ಕಾಡುಗಳಲ್ಲಿ ಇರುವ ಅಯ್ಯಪ್ಪ, ಭದ್ರಕಾಳಿ ಮೊದಲಾದ ದೇವರುಗಳಿಗೆ ಗುಡಿಗಳಿಲ್ಲ. ಅವು ತೆರೆದ ಬಯಲಿನಲ್ಲಿ ಇದ್ದು ಆಕಾಶಕ್ಕೆ ಮುಖ ಮಾಡಿಕೊಂಡು ಮಳೆ ಕರೆಯುತ್ತಿವೆ. ಇವುಗಳ ಜತೆಯಲ್ಲಿಯೇ ಬೇಟೆ ನಾಯಿಗಳು ಇವೆ ಎಂದು ಹೇಳಿದರು.
ದೇವರ ಕಾಡು ಸಮುದಾಯ, ಭಕ್ತಿ, ಸಂಸ್ಕೃತಿ, ಸಂಪ್ರದಾಯ ಉಳಿಸುವ ಜತೆಗೆ ಊರಿನ ನ್ಯಾಯ ಪಂಚಾಯಿತಿಯನ್ನು ಮಾಡುವ ಜಾಗಗಳಾಗಿವೆ. ನಮ್ಮ ಹಿರಿಯರು ದೇವರ ಕಾಡಿಗೆ ಚಪ್ಪಲಿ ಹಾಕಿ ಹೋಗುತ್ತಿರಲಿಲ್ಲ. ಅದೊಂದು ದೈವಿಕ ನೆಲೆಯಾಗಿತ್ತು. ಈ ಕಾರಣದಿಂದಲೇ ಇಡೀ ದೇಶದಲ್ಲಿಯೇ ಒಂದು ವಿಶಿಷ್ಟ ಮಾದರಿಯಾಗಿ ಕೊಡಗಿನಲ್ಲಿ ದೇವರ ಕಾಡುಗಳು ಉಳಿದಿವೆ ಎಂದು ಹೇಳಿದರು. ಇಂಥ ದೇವರಕಾಡು ಇಂದು ಕ್ಷೀಣಿಸುವ ಆತಂಕ ಎದುರಾಗಿದೆ. ನಮ್ಮ ಮಕ್ಕಳಿಗೆ ದೇವರ ಕಾಡುಗಳ ಬಗ್ಗೆ ಇರುವ ಹಾಡುಗಳು, ಕಥೆಗಳನ್ನು ಹೇಳುವ ಮೂಲಕ ದೇವರ ಕಾಡಿನ ಮಹತ್ವವನ್ನು ಹೇಳಿಕೊಡಬೇಕು. ಕಾನೂನಿನ ಮೂಲಕ ದೇವರ ಕಾಡುಗಳನ್ನು ಉಳಿಸಲು ಸಾಧ್ಯವಿಲ್ಲ. ಸಂಸ್ಕೃತಿ-ಸAಪ್ರದಾಯಗಳ ಮೂಲಕ ವಿಶ್ವಕ್ಕೆ ಮಾದರಿಯಾಗಿರುವ ದೇವರ ಕಾಡುಗಳನ್ನು ಉಳಿಸಬೇಕು ಎಂದು ಹೇಳಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅರಣ್ಯ ಮಹಾವಿದ್ಯಾಲಯದ ಪ್ರಭಾರ ಡೀನ್ ಡಾ.ಶಿವಕುಮಾರ್ ಅವರು, ಕೇವಲ ಅರಣ್ಯ ಮಾತ್ರವಲ್ಲ, ಪ್ರಾಣಿ ಸಂಕುಲವು ನಶಿಸಿ ಹೋಗುತ್ತಿವೆ. ಮಾನವನ ದುರಾಸೆಯಿಂದ ಪರಿಸರ ಅಸಮತೋಲನ ಉಂಟಾಗುತ್ತಿದೆ. ಪರಿಸರವನ್ನು ಕಾಪಾಡುತ್ತಿದ್ದ ದೇವರನ್ನೇ ಇಂದು ನಾವು ರಕ್ಷಿಸಬೇಕಾದ ಪರಿಸ್ಥಿತಿ ಬಂದಿದೆ ಎಂದು ಬೇಸರ ವ್ಯಕ್ತಪಡಿಸಿದರು.
೨೦ ವರ್ಷಗಳ ಹಿಂದೆ ಗೋಣಿಕೊಪ್ಪಲಿಗೆ ಬಂದಾಗ ಕೊಡಗಿನ ಕಿತ್ತಳೆ ಹಣ್ಣಿನ ಪರಿಮಳ ನಮ್ಮನ್ನು ಸ್ವಾಗತಿಸುತ್ತಿತ್ತು. ಇಂದು ಅದು ಇಲ್ಲದಾಗಿದೆ ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಇರುವ ಪರಿಸರವನ್ನು ನಾವು ಉಳಿಸಿಕೊಳ್ಳಬೇಕಾಗಿದೆ. ಎಂದರು.
ಸಮಾರೋಪ ಭಾಷಣ ಮಾಡಿದ ಸಂಶೋಧಕ ಎಂ.ಜಿ ನಾಗರಾಜು, ದೇವರಕಾಡುಗಳ ಚಿತ್ರಣವನ್ನು ಪ್ರಾತ್ಯಕ್ಷಿಕೆ ಮೂಲಕ ವಿವರಿಸುತ್ತಾ, ಕೊಡಗಿನ ದೇವರಕಾಡುಗಳು ಕೇವಲ ಹಿಂದೂ ಸಂಸ್ಕೃತಿಯಿAದ ಕೂಡಿಲ್ಲ. ಇಲ್ಲಿ ಬೌದ್ಧ , ಜೈನ ಸಂಸ್ಕೃತಿಗಳೂ ಇವೆ. ತೇರದಾಳ, ಮಂಚಳ್ಳಿ ಮೊದಲಾದ ಹೆಸರುಗಳು ಬೌದ್ಧ ನೆಲೆಯಲ್ಲಿವೆ ಎಂದು ಹೇಳಿದರು.
ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಟಿ.ಪಿ ರಮೇಶ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಪರಿಸರ ಪ್ರೇಮಿಗಳಾದ ಕೊಕ್ಕಂಡ ಗಿಣಿ ಗಣಪತಿ, ಕೋಡಿರ ಲೋಕೇಶ್, ಡಾ.ಜೆ ಸೋಮಣ್ಣ, ಸಹನಾ ಕಾಂತಬೈಲು ಹಾಗೂ ಚಂದನ್ ಕಾಮತ್ ಸಂವಾದದಲ್ಲಿ ಪಾಲ್ಗೊಂಡು ಮಾತನಾಡಿದರು. ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಂ.ಪಿ. ಕೇಶವ ಕಾಮತ್ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಂಶೋಧಕ ಡಾ ಎಂ.ಜಿ ನಾಗರಾಜ್, ಡಾ ಸಿ.ಜಿ. ಕುಶಾಲಪ್ಪ ಅವರನ್ನು ಸನ್ಮಾನಿಸಲಾಯಿತು.
ಈ ಸಂದರ್ಭ ಪೊನ್ನಂಪೇಟೆ ತಾಲೂಕು ಕ.ಸಾ.ಪ ಅಧ್ಯಕ್ಷ ಕೋಳೆರ ದಯಾ ಚಂಗಪ್ಪ, ಹೋಬಳಿ ಕ.ಸಾ.ಪ ಅಧ್ಯಕ್ಷ ಕುಲ್ಲಚಂಡ ಪ್ರಮೋದ್ ಗಣಪತಿ, ಸಂಶೋಧಕ ಡಾ ಎಂ.ಜಿ ಚಂದ್ರಕಾAತ್, ಕೊಡವ ತಕ್ಕ್ ಜನಾಂಗಕಾರಡ ಒಕ್ಕೂಟದ ಅಧ್ಯಕ್ಷ ಪಿ.ಜಿ ಅಯ್ಯಪ್ಪ, ಕೆ.ಪಿ.ಎಸ್ ಶಾಲೆ ಪ್ರಾಥಮಿಕ ವಿಭಾಗ ಮುಖ್ಯ ಶಿಕ್ಷಕ ಬಿ.ಎಂ ವಿಜಯ್, ಕ.ಸಾ.ಪ ಸದಸ್ಯ ರಾಮಕೃಷ್ಣ, ಹಿರಿಯ ಪತ್ರಕರ್ತ ಟಿ.ಎಲ್ ಶ್ರೀನಿವಾಸ್, ಕೊಡಗಿನ ದೇವರಕಾಡುಗಳ ಪ್ರತಿನಿಧಿಗಳು, ಸಮುದಾಯಗಳ ಪ್ರಮುಖರು, ಕ.ಸಾ.ಪ ಸದಸ್ಯರು, ಉಪನ್ಯಾಸಕರು, ಅರಣ್ಯ ಕಾಲೇಜು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು. ಪುತ್ತಾಮನೆ ವಿದ್ಯಾ ಜಗದೀಶ್ ಪ್ರಾರ್ಥಿಸಿ, ಟಿ.ಆರ್ ವಿನೋದ್ ಸ್ವಾಗತಿಸಿ, ವಂದಿಸಿದರು. ಶೀಲಾ ಬೋಪಣ್ಣ ನಿರೂಪಿಸಿದರು.