ಬೆಂಗಳೂರು, ಫೆ. ೧೭: ಕದ್ದ ಆಸ್ತಿಯನ್ನು ಹೊಂದಿರುವ ಯಾವುದೇ ವ್ಯಕ್ತಿ ಅಥವಾ ಸಂಸ್ಥೆಯು ಪೊಲೀಸರು ಕೇಳಿದಾಗ ಅದನ್ನು ಹಸ್ತಾಂತರ ಮಾಡಲು ವಿಳಂಬಗೊಳಿಸುವ ಅಥವಾ ನಿರಾಕರಿಸುವ ಯಾವುದೇ ಕಾನೂನುಬದ್ಧ ಹಕ್ಕನ್ನು ಹೊಂದಿರುವುದಿಲ್ಲ ಎಂದು ಹೈಕೋರ್ಟ್ ಆದೇಶಿಸಿದೆ.

ಅಲ್ಲದೆ, ಕದ್ದ ಆಸ್ತಿ ವಿಷಯದಲ್ಲಿ ಅದು ಚಿನ್ನದ ಸಾಲ ಕಂಪೆನಿಯಾಗಿದ್ದರೂ ಸಹ ಕದ್ದ ಆಸ್ತಿಯನ್ನು ಹೊಂದುವುದು ರಕ್ಷಾ ಕವಚವಾಗಿ ಬದಲಾಗುವುದಿಲ್ಲ. ಅಲ್ಲದೇ, ಬಡ್ಡಿ ಮತ್ತು ಭದ್ರತೆಯ ಕಾರಣ ನೀಡಿ ಕದ್ದ ವಸ್ತುಗಳನ್ನು ತನ್ನ ಬಳಿಯೇ ಇಟ್ಟುಕೊಳ್ಳುವುದಕ್ಕೆ ಅವಕಾಶವಿಲ್ಲ ಎಂದು ಆದೇಶಿಸಿದೆ.

ಕೆಂಗೇರಿಯ ಬ್ಯಾಂಕ್ ಶಾಖೆಯಿಂದ ಸಿಬ್ಬಂದಿಯೊಬ್ಬರು ಕಳವು ಮಾಡಿದ್ದ ಚಿನ್ನಾಭರಣಗಳನ್ನು ಅಡವಿಟ್ಟುಕೊಂಡು ಸಾಲ ಮಂಜೂರು ಮಾಡಿದ್ದ ಆರೋಪದಲ್ಲಿ ಕದ್ದ ಚಿನ್ನಾಭರಣಗಳನ್ನು ಒಪ್ಪಿಸುವಂತೆ ಕೆಂಗೇರಿ ಪೊಲೀಸರು ನೋಟಿಸ್ ಜಾರಿ ಮಾಡಿದ್ದ ಕ್ರಮ ಪ್ರಶ್ನಿಸಿ ಐಐಎಫ್‌ಎಲ್ ಫೈನಾನ್ಸ್ ಕಂಪೆನಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಏಕ ಸದಸ್ಯಪೀಠ ಈ ಆದೇಶ ನೀಡಿದ್ದು, ಅರ್ಜಿಯನ್ನು ವಜಾಗೊಳಿಸಿ ಆದೇಶಿಸಿದೆ.

ಅಲ್ಲದೇ, ಕದ್ದ ಚಿನ್ನಾಭರಣ ಗಳಿಂದ ಹಿಂದಿರುಗಿಸಿದಲ್ಲಿ ತನೆಗೆ ಆರ್ಥಿಕವಾಗಿ ನಷ್ಟವಾಗಲಿದೆ ಎಂಬ ಕಾರಣ ನೀಡಿ ಅಂತಹ ವಸ್ತುಗಳನ್ನು ತನಿಖಾಧಿಕಾರಿಗಳು ಪಡೆಯುವಾಗ ವಿರೋಧ ವ್ಯಕ್ತಪಡಿಸುವುದಕ್ಕೆ ಅವಕಾಶ ಇರುವುದಿಲ್ಲ. ಕದ್ದ ಒಡವೆಗಳನ್ನು ಅಡವಿಟ್ಟುಕೊಂಡು ಸಾಲ ಮಂಜೂರು ಮಾಡಿದ್ದಲ್ಲಿ ತಮಗೆ ಆರ್ಥಿಕ ಸಂಕಷ್ಟ ಎದುರಾಗಲಿದೆ ಎಂಬ ಕಾರಣವನ್ನು ಒಪ್ಪಿಕೊಂಡಲ್ಲಿ ಅಪಾಯಕಾರಿ ಪೂರ್ವನಿರ್ದೇಶನ ನೀಡಿದಂತಾಗಲಿದೆ. ಈ ರೀತಿಯ ವಾದಗಳು ತನಿಖೆಗೆ ಅಡ್ಡಿಯಾಗಲಿದೆ. ಆರ್ಥಿಕ ಅಪರಾಧಿಗಳಿಗೆ ಧೈರ್ಯ ನೀಡಿದಂತಾಗಲಿದೆ, ಕ್ರಿಮಿನಲ್ ನ್ಯಾಯ ವ್ಯವಸ್ಥೆಯಲ್ಲಿ ವಿಶ್ವಾಸವನ್ನು ಕುಗ್ಗಿಸಿದಂತಾಗಲಿದೆ ಎಂದು ಪೀಠ ಹೇಳಿದೆ.

ಅಲ್ಲದೇ, ಅರ್ಜಿದಾರರ ಕೋರಿರುವ ಮನವಿಯನ್ನು ಪುರಸ್ಕರಿಸುವುದಕ್ಕೆ ಯಾವುದೇ ಬಲವಾದ ಕಾರಣಗಳು ಇಲ್ಲವಾಗಿವೆ. ಆದ್ದರಿಂದ ಕದ್ದ ಜಿನ್ನದ ಆಭರಣಗಳನ್ನು ತನಿಖಾಧಿಕಾರಿಗಳಿಗೆ ಒಪ್ಪಿಸಬೇಕು.

ಈ ಚಿನ್ನಾಭರಣಗಳು ಕೆಂಗೇರಿಯ ಬ್ಯಾಂಕ್ ಶಾಖೆಯಿಂದ ಕಳವು ಮಾಡಲಾಗಿದೆ ಎಂಬುದನ್ನು ತನಿಖಾಧಿಕಾರಿಗಳು ಪತ್ತೆ ಹಚ್ಚಿ, ಅದು ಸಾಬೀತಾದಲ್ಲಿ ಕಾನೂನು ರೀತಿಯಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಪೀಠ ಹೇಳಿದೆ.

ಅಲ್ಲದೆ, ಫೈನಾನ್ಸ್ ಕಂಪೆನಿಯವರು ಯಾವುದೇ ಭದ್ರತಾ ಹಿತಾಸಕ್ತಿಯ ಒಪ್ಪಂದದ ಪ್ರಕಾರ ಮಾನ್ಯವಾಗಿದ್ದರೂ ಸಹ ಕದ್ದ ಆಸ್ತಿಯ ನಿಜವಾದ ಮಾಲೀಕರ ಉನ್ನತ ಹಕ್ಕುಗಳನ್ನು ಅತಿಕ್ರಮಿಸಲು ಅಥವಾ ತನಿಖೆಗೆ ಅಡ್ಡಿಪಡಿಸಲು ಸಾಧ್ಯವಿಲ್ಲ. ಭಾರತೀಯ ನಾಗರಿಕ ಸುರಕ್ಷಾ ಸಂಹಿತಾ, ೨೦೨೩ರ ಸೆಕ್ಷನ್ ೯೪(೧) ರ ಅಡಿ ಚಿನ್ನದ ವಸ್ತುಗಳು "ಇತರ ವಿಷಯ"ದ ವ್ಯಾಪ್ತಿಗೆ ಬರುತ್ತವೆ ಎಂದು ನ್ಯಾಯಾಲಯ ಹೇಳಿದೆ. ತನಿಖಾ ಅಧಿಕಾರಿಗಳು ತಮ್ಮ ಬಳಿ ಇದ್ದಾರೆಂದು ನಂಬಲಾದ ಯಾವುದೇ ವ್ಯಕ್ತಿಗಳಿಂದ ಅಂತಹ ಒಡವೆಗಳನ್ನು ಒಪ್ಪಿಸಲು ಒತ್ತಾಯಿಸಿ ನೋಟಿಸ್‌ಗಳನ್ನು ಹೊರಡಿಸುವ ಅಧಿಕಾರ ಹೊಂದಿದ್ದಾರೆ ಎಂದು ಆದೇಶಿಸಿದೆ.

೨೦೨೨ರಿಂದ ಬ್ಯಾಂಕ್ ಒಂದರ ಕೆಂಗೇರಿ ಶಾಖೆಯಲ್ಲಿ ಸಹಾಯಕ ವ್ಯವಸ್ಥಾಪಕಿಯಾಗಿ ಮಹಿಳಾ ಸಿಬ್ಬಂದಿಯೊಬ್ಬರು ಸೇವೆ ಸಲ್ಲಿಸುತ್ತಿದ್ದರು. ೨೦೨೫ರ ಅಕ್ಟೋಬರ್ ತಿಂಗಳಲ್ಲಿ ನಡೆದ ಅನಿರೀಕ್ಷಿತ ಮರು ಮೌಲ್ಯ ಮಾಪನದ ಸಮಯದಲ್ಲಿ ಸಹಾಯಕ ವ್ಯವಸ್ಥಾಪಕಿ ನಿರ್ವಹಿಸುವ ಚಿನ್ನದ ಸಾಲ ಖಾತೆಗಳ ಸಂಬAಧ ಗಂಭೀರ ಅಕ್ರಮಗಳು ಪತ್ತೆಯಾಗಿದ್ದವಲ್ಲದೆ ಸುಮಾರು ಎರಡು ಕೆಜಿಗಳಷ್ಟು ಚಿನ್ನ ನಾಪತ್ತೆ ಆಗಿತ್ತು.

ಪರಿಶೀಲನೆ ವೇಳೆ, ಗ್ರಾಹಕರು ಅಡವಿಟ್ಟಿದ್ದ ನಿಜವಾದ ಚಿನ್ನಾಭರಣಗಳನ್ನು ರಹಸ್ಯವಾಗಿ ತೆಗೆದು ನಕಲಿ ವಸ್ತುಗಳೊಂದಿಗೆ ಬದಲಾಯಿಸುವ ಮೂಲಕ ಕಳ್ಳತನ ಮತ್ತು ಕ್ರಿಮಿನಲ್ ನಂಬಿಕೆ ದ್ರೋಹಕ್ಕೆ ಸಮನಾದ ಕೃತ್ಯಗಳಲ್ಲಿ ಅವರು ಭಾಗಿಯಾಗಿರುವ ಅಂಶ ಗೊತ್ತಾಗಿತ್ತು. ಕದ್ದ ವಸ್ತುಗಳನ್ನು ಐಐಎಫ್‌ಎಲ್ ಫೈನಾನ್ಸ್ ಕಂಪೆನಿ ಸೇರಿ ವಿವಿಧೆಡೆಗಳಲ್ಲಿ ಅಡವಿಟ್ಟು ಸಾಲ ಪಡೆದುಕೊಂಡಿದ್ದ ಆರೋಪವಿತ್ತು. ಈ ಆರೋಪ ಸಂಬAಧ ಬ್ಯಾಂಕ್ ದೂರು ನೀಡಿದ್ದು, ಪೊಲೀಸರು ಫೆನಾನ್ಸ್ ಕಂಪನಿಗೆ ನೋಟಿಸ್ ಜಾರಿ ಮಾಡಿದ್ದರು. ಇದನ್ನು ಪ್ರಶ್ನಿಸಿ ಕಂಪೆನಿ ಹೈಕೋರ್ಟ್ ಮೆಟ್ಟಿಲೇರಿತ್ತು.

ವಿಚಾರಣೆ ವೇಳೆ ಐಐಎಫ್‌ಎಲ್ ಫೈನಾನ್ಸ್ ಕಂಪೆನಿ ಪರ ವಕೀಲರು, ಚಿನ್ನವನ್ನು ಉತ್ತಮ ನಂಬಿಕೆಯಿAದ ಸ್ವೀಕರಿಸಲಾಗಿದೆ. ಸೂಕ್ತ ಕಾರ್ಯವಿಧಾನಗಳನ್ನು ಅನುಸರಿಸಿದ ನಂತರ ಸಾಲಗಳನ್ನು ವಿತರಿಸಲಾಗಿದೆ. ಒಪ್ಪಂದದ ಷರತ್ತುಗಳ ಪ್ರಕಾರ ಅಡವಿಟ್ಟ ಚಿನ್ನವನ್ನು ನೀಡಲು ಸಾಧ್ಯವಿಲ್ಲ. ಅಲ್ಲದೇ, ಚಿನ್ನವನ್ನು ವಶಪಡಿಸಿಕೊಳ್ಳದೇ ತನಿಖೆಗೆ ಸಹಕರಿಸಲು ಸಾಧ್ಯವಿದೆ ಎಂದು ತಿಳಿಸಿದ್ದರು.

ಅದಕ್ಕೆ ಆಕ್ಷೇಪಿಸಿದ್ದ ಬ್ಯಾಂಕ್ ಪರ ವಕೀಲರು, ಕಳುವಾದ ಚಿನ್ನವನ್ನು ತನ್ನ ಗ್ರಾಹಕರಿಗೆ ಹಿಂದಿರುಗಿಸುವುದು ತನ್ನ ಕಾನೂನು ಬದ್ಧ ಕರ್ತವ್ಯವಾಗಿದೆ ಎಂದು ವಾದಿಸಿದ್ದರು. ಸರ್ಕಾರದ ಪರ ವಕೀಲರು, ಐಐಎಫ್‌ಎಲ್ ಕಂಪೆÀನಿಯಲ್ಲಿ ಅಡವಿಟ್ಟ ಚಿನ್ನವನ್ನು ಆರೋಪಿ ಅಧಿಕಾರಿಯೇ ಕದ್ದಿದ್ದಾರೆಂದು ತನಿಖೆಯಲ್ಲಿ ಪತ್ತೆ ಆಗಿದ್ದು ತನಿಖೆ ಮುಂದುವರೆಯಬೇಕು ಎಂದು ವಾದಿಸಿದ್ದರು.

- ಕೋವರ್‌ಕೊಲ್ಲಿ ಇಂದ್ರೇಶ್