ಮಡಿಕೇರಿ, ಫೆ. ೧೭: ಜಂಬೂರು ಗ್ರಾಮದ ಶ್ರೀ ಬಸವೇಶ್ವರ ದೇವಾಲಯದ ೧೨ನೇ ವರ್ಷದ ಪುನರ್ ಪ್ರತಿಷ್ಠಾಪನಾ ಕಾರ್ಯಕ್ರಮ ತಾ. ೧೯ ಹಾಗೂ ೨೦ ರಂದು ನಡೆಯಲಿದೆ.

ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮಿತಿ ಸಲಹೆಗಾರ ಸ್ವಾಮಿ ಸೋಮನಾಥ ನಂದಪುರಿ, ಎಫ್.ಸಿ. ಹೀರೆಮಠ ಅವರ ನೇತೃತ್ವದಲ್ಲಿ ತಾ. ೧೯ ರ ಸಂಜೆ ೫.೩೦ ರಿಂದ ಧಾರ್ಮಿಕ ಕಾರ್ಯ ಆರಂಭವಾಗಲಿದೆ. ಮೊದಲ ದಿನ ಆಚಾರ್ಯವರಣಂ, ಗುರುಗಣಪತಿ ಪೂಜೆ, ಪುಣ್ಯಾಹ ಸ್ವಸ್ತಿವಾಚನ, ನಾಂದಿ ಸಮಾರಾಧನೆ, ಮಹಾಸಂಕಲ್ಪ, ಮಂಟಪ ದೇವರ ಪ್ರತಿಷ್ಠಾಪನೆ, ನವಗ್ರಹ ಶಾಂತಿ, ಮೃತ್ಯುಂಜಯ ಶಾಂತಿ, ಅಷ್ಟದಿಕ್ಪಾಲಕರ ಪೂಜೆ, ದಿಗ್ಭಂಧನ ಪೂಜೆ, ಪಂಚಕಳಸ ಆರಾಧನೆ, ಶ್ರೀ ರುದ್ರಪಾರಾಯಣ, ಮಂಡಲ ಆರಾಧನೆ, ದೀಪಾರಾಧನೆ, ಗಣಪತಿ ಹೋಮ, ಕಲಶ ಹೋಮ, ತತ್ವ ಹೋಮ, ಪೂರ್ಣಾಹುತಿ ನಡೆಯಲಿದೆ.

ತಾ. ೨೦ ರಂದು ಬೆಳಿಗ್ಗಿನ ಜಾವ ೩.೩೦ಕ್ಕೆ ಗಂಗಾ ಪೂಜೆಯ ನಂತರ ಕುಂಭಾಭಿಷೇಕ, ಕಲಶಾಭಿಷೇಕ, ರುದ್ರಾಭಿಷೇಕ, ಫಲಪಂಚಾಮೃತ ಅಭಿಷೇಕ, ರಾಜೋಪಾರ ಪೂಜೆ, ವಿಶೇಷ ಅಲಂಕಾರ, ಮೂಲದೇವರಿಗೆ ಪ್ರಾಣ ಪ್ರತಿಷ್ಠಾಪನೆ, ಮಹಾನೈವೇದ್ಯ, ಮಹಾ ಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗ ನಡೆಯಲಿದೆ.ತಾ. ೧೯ರ ರಾತ್ರಿ ಅನ್ನಸಂತರ್ಪಣೆ ನಡೆಯಲಿದ್ದು, ತಾ. ೨೦ ರಂದು ಬೆಳಿಗ್ಗೆ ಉಪಹಾರ ಹಾಗೂ ಮಧ್ಯಾಹ್ನ ಅನ್ನಸಂತರ್ಪಣೆ ಏರ್ಪಡಿಸಲಾಗಿದೆ ಎಂದರು.

ತಾ. ೨೦ ರ ಬೆಳಿಗ್ಗೆ ೧೧ ಗಂಟೆಗೆ ನಡೆಯುವ ಸಭಾ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಕೋಡಿಮಠದ ಶ್ರೀ ಡಾ. ಶಿವಾನಂದ ಶಿವಯೋಗಿ ರಾಜೇಂದ್ರ ಮಹಾಸ್ವಾಮಿ ವಹಿಸಲಿದ್ದಾರೆ. ಮಡಿಕೇರಿ ಶಾಸಕ ಡಾ. ಮಂತರ್ ಗೌಡ ಉದ್ಘಾಟಿಸಲಿದ್ದು, ಅರಮೇರಿ ಕಳಂಚೇರಿ ಮಠದ ಶ್ರೀ ಶಾಂತಮಲ್ಲಿಕಾರ್ಜುನ ಮಹಾಸ್ವಾಮಿ ಅಧ್ಯಕ್ಷತೆ ವಹಿಸಲಿದ್ದಾರೆ. ಶನಿವಾರಸಂತೆ ಮುದ್ದಿನ ಕಟ್ಟೆಮಠದ ಶ್ರೀ ಅಭಿನವ ಸಿದ್ದಲಿಂಗ ಶಿವಾಚಾರ್ಯ ಸ್ವಾಮಿಗಳು ಧಾರ್ಮಿಕ ಪ್ರವಚನ ನೀಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಸ್ವಾಮಿ ಸೋಮನಾಥ ನಂದಪುರಿ, ಮಾಜಿ ಸಚಿವ ಎಂ.ಪಿ. ಅಪ್ಪಚ್ಚು ರಂಜನ್, ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಹರಪಳ್ಳಿ ರವೀಂದ್ರ, ಮಾದಾಪುರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ನಾಪಂಡ ಉಮೇಶ್ ಉತ್ತಪ್ಪ, ಜಿ.ಪಂ. ಮಾಜಿ ಸದಸ್ಯ ಟಿ.ಪಿ. ಸಂದೇಶ್, ಗ್ರಾ.ಪಂ. ಸದಸ್ಯರುಗಳಾದ ಪಿ.ಡಿ. ಅಂತೋಣಿ, ವಿ.ಆರ್. ಸುರೇಶ್ ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.

ಗೋಷ್ಠಿಯಲ್ಲಿ ದೇವಾಲಯ ಸಮಿತಿ ಅಧ್ಯಕ್ಷ ಎಂ.ಬಿ. ರಮೇಶ್, ಮಾಜಿ ಅಧ್ಯಕ್ಷ ಎಸ್.ಡಿ. ಲೋಕೇಶ್, ಉಪಾಧ್ಯಕ್ಷ ಪಿ.ಎಸ್. ರತೀಶ್, ಖಜಾಂಚಿ ಸಿ.ಎಂ. ಹರೀಶ್ ಹಾಜರಿದ್ದರು.