ವೀರಾಜಪೇಟೆ, ಫೆ. ೧೭: ವೀರಾಜಪೇಟೆ ನಗರದಲ್ಲಿರುವ ಸಂತ ಅನ್ನಮ್ಮನ ಚರ್ಚ್ ಮೈದಾನದಲ್ಲಿ ಆಯೋಜನೆಗೊಂಡ ರೋಮನ್ ಕ್ಯಾಥೋಲಿಕ್ ಕ್ರಿಕೆಟ್ ಪಂದ್ಯಾಟದ ಉದ್ಘಾಟನಾ ಕಾರ್ಯಕ್ರಮದಲ್ಲಿ ವೀರಾಜಪೇಟೆ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ ಭಾಗವಹಿಸಿ ಪಂದ್ಯಾಟ ಉದ್ಘಾಟಿಸಿದರು.
ಈ ವೇಳೆ ಮಾತನಾಡಿದ ಅವರು, ಯುವಜನತೆಯನ್ನು ಒಗ್ಗೂಡಿಸುವ ಶಕ್ತಿ ಕ್ರೀಡೆಗಿದೆ. ಅದರಲ್ಲೂ ವಿಶೇಷವಾಗಿ ವಿಶ್ವವ್ಯಾಪ್ತಿ ಮನ್ನಣೆ ಪಡೆದು ಯುವಜನತೆಯಲ್ಲಿ ಹಾಸು ಹೊಕ್ಕಾಗಿರುವ ಕ್ರಿಕೆಟ್ ಪಂದ್ಯಾಟ ಪ್ರತಿಯೊಬ್ಬ ಯುವಕನ ಜೀವಾಳವಾಗಿದೆ. ಇಂತಹ ಕ್ರೀಡಾಕೂಟಗಳು ಸಮುದಾಯದ ಯುವ ಕ್ರೀಡಾಳುಗಳಿಗೆ ಸ್ಪೂರ್ತಿ ನೀಡಿ ಮುಂದಿನ ಕ್ರೀಡಾ ಭವಿಷ್ಯಕ್ಕೆ ದಾರಿದೀಪವಾಗಲಿ ಎಂದು ನುಡಿದರು.
ಇದೇ ಸಂದರ್ಭದಲ್ಲಿ ಸಂತ ಅನ್ನಮ್ಮ ಶಾಲೆಯ ಆವರಣದಲ್ಲಿ ನಡೆಯುತ್ತಿರುವ ಮೂರು ದಿನಗಳ ಕರಾಟೆ ಶಿಬಿರದಲ್ಲಿ ಭಾಗವಹಿಸಿದ ಪೊನ್ನಣ್ಣ ಅವರು, ಮಕ್ಕಳಿಗೆ ಮಾರ್ಗದರ್ಶನ ನೀಡಿ ಶುಭ ಹಾರೈಸಿದರು.
ಕ್ರಿಕೆಟ್ ಪಂದ್ಯಾಟದ ಆಯೋಜಕರಾದ ಪ್ರವೀಣ್, ಸಂತೋಷ್, ಎಜೆ ಬಾಬು, ಜೋಕಿಂ, ಮರ್ವಿನ್ ಲೋಬೊ, ರಾಬಿನ್, ಮೆಲ್ರಾಯ್ ಲೋಬೊ, ಮುಕ್ಕಾಟೀರ ಸಂದೀಪ್, ಆಪುö್ರ ರವೀಂದ್ರ, ಕಾಳಿಮಾಡ ಪ್ರಶಾಂತ್, ಭವಿನ್, ಆಯುಬ್, ಕರಾಟೆ ಶಿಬಿರದ ತರಬೇತುದಾರರು ಹಾಗೂ ಪ್ರಮುಖರು ಹಾಜರಿದ್ದರು.