ಸುAಟಿಕೊಪ್ಪ, ಫೆ. ೧೬: ೨೦೩೦ನೇ ಇಸವಿಯವರೆಗೆ ಕರ್ನಾಟಕ ರಾಜ್ಯದಲ್ಲಿ ಪೊಲೀಸರಿಗಾಗಿ ಪೊಲೀಸ್ ವಸತಿ ಗೃಹ ಯೋಜನೆಯನ್ನು ಮುಂದುವರೆಸಲಾಗುತ್ತದೆ ಎಂದು ರಾಜ್ಯ ಗೃಹ ಸಚಿವ ಡಾ.ಜಿ. ಪರಮೇಶ್ವರ್ ಹೇಳಿದರು.

ಭಾನುವಾರದಂದು ಕೊಡಗು ಜಿಲ್ಲಾ ಪೊಲೀಸ್ ಇಲಾಖೆಯ ವತಿಯಿಂದ ಸುಂಟಿಕೊಪ್ಪದಲ್ಲಿ ನೂತನ ಪೊಲೀಸ್ ವಸತಿ ಗೃಹ ಕಟ್ಟಡದ ಉದ್ಘಾಟನೆಯನ್ನು ನೇರವೇರಿಸಿ ಮಾತನಾಡಿದ ಅವರು ಈಗಾಗಲೇ ಪೊಲೀಸ್ ವಸತಿ ಗೃಹ ಯೋಜನೆಯಡಿಯಲ್ಲಿ ೪೦,೦೦೦ ಮನೆಗಳು ಪೂರ್ಣಗೊಂಡಿದ್ದು ಇನ್ನು ೬೦,೦೦೦ ಮನೆಗಳನ್ನು ಪೂರ್ಣಗೊಳಿಸಬೇಕಾಗಿದೆ. ಈ ಬಗ್ಗೆ ಕೆಲವು ದಿನಗಳ ಹಿಂದೆ ಬಜೆಟ್ ಪೂರ್ವ ಇಲಾಖಾವಾರು ಚರ್ಚೆ ಸಂದರ್ಭ ಹೆಚ್ಚುವರಿ ಪೊಲೀಸ್ ಠಾಣೆಗಳನ್ನು ನೀಡಲು ಸಾಧ್ಯವಾಗದಿದ್ದರೂ ಪೊಲೀಸ್ ವಸತಿ ಗೃಹಗಳನ್ನು ನಿರ್ಮಿಸುವ ನಿಟ್ಟಿನಲ್ಲಿ ಹೆಚ್ಚಿನ ಅನುದಾನಕ್ಕೆ ಬೇಡಿಕೆ ಇಟ್ಟಿದ್ದೇನೆ ಎಂದು ಅವರು ಹೇಳಿದರು.

ಸುಂಟಿಕೊಪ್ಪ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮೊದಲ ಹಂತದ ಪೊಲೀಸ್ ವಸತಿಗೃಹ ನಿರ್ಮಾಣ ಪೂರ್ಣಗೊಂಡಿದ್ದು ಇದರಲ್ಲಿ ೧೨ ಮನೆಗಳಿವೆ. ಈಗಾಗಲೇ ಮಡಿಕೇರಿಯಲ್ಲಿ ರೂ.೭.೫.ಕೋಟಿ ವೆಚ್ಚದಲ್ಲಿ ಪೊಲೀಸ್ ವಸತಿ ಸಮುಚ್ಚಯ ನಿರ್ಮಾಣಕ್ಕೆ ಭೂಮಿ ಪೂಜೆ ಮಾಡಲಾಗಿದೆ. ಇದನ್ನು ಕರ್ನಾಟಕ ರಾಜ್ಯ ಪೊಲೀಸ್ ವಸತಿ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮ ನಿಯಮಿತ ವತಿಯಿಂದ ನಿರ್ಮಿಸಲಾಗುತ್ತಿದ್ದು, ಅದಷ್ಟು ಬೇಗನೆ ಕಾಮಗಾರಿ ಪೂರ್ಣಗೊಂಡರೇ ತಾನೇ ಉದ್ಘಾಟಿಸಲು ಬರುತ್ತೇನೆ ಎಂದು ಅವರು ಹೇಳಿದರು.

ನಮ್ಮ ಸರಕಾರ ಸಾವಿರ ದಿನಗಳನ್ನು ಪೂರೈಸಿದ್ದು ತಮ್ಮ ನೇತೃತ್ವದಲ್ಲೇ ಪ್ರಣಾಳಿಕೆಯನ್ನು ಮಾಡಿದ್ದು, ೫೯೩ ಭರವಸೆಗಳ ಪೈಕಿ ಶೇ.೫೦ಕ್ಕೂ ಹೆಚ್ಚು ಭರವಸೆಗಳನ್ನು ಈಡೇರಿಸಿದ್ದೇವೆ ೫ ಗ್ಯಾರಂಟಿಗಳ ಒಟ್ಟು ಮೊತ್ತ ೧.೩೬ ಲಕ್ಷ ಕೋಟಿ ಈ ಪೈಕಿ ಗೃಹಲಕ್ಷಿಗೆ ೭೦ ಸಾವಿರ ಕೋಟಿ ಖರ್ಚು ಮಾಡುತ್ತಿದ್ದೇವೆ. ನಮ್ಮ ಸರಕಾರ ನುಡಿದಂತೆ ನಡೆಯುತ್ತಿದೆ. ವಿರೋಧ ಪಕ್ಷಗಳು ಅನಾವಶ್ಯಕವಾಗಿ ಆರೋಪಗಳನ್ನು ಮಾಡುತ್ತಿದ್ದು, ಅವರ ಅವಧಿಯ ಪೊಲೀಸ್ ವೈಫಲ್ಯತೆಗಳನ್ನು ಬಹಿರಂಗಗೊಳಿಸಿದರೇ ಏನಾದೀತ್ತು ಎಂದು ಪ್ರಶ್ನಿಸಿದ ಅವರು ತಾನು ಅಂತಹ ವ್ಯಕ್ತಿತ್ವದವನಲ್ಲ ಎಂದು ಧೃಢವಾಗಿ ಪರಮೇಶ್ವರ್ ಕರ್ನಾಟಕ ಪೊಲೀಸ್ ದೇಶದಲ್ಲೇ ನಂ೧ ಆಗಿದ್ದು ಬೆಂಗಳೂರು ಅತ್ಯಂತ ಸುರಕ್ಷಿತ ಎಂದು ಹೆಸರು ಪಡೆದಿದೆ. ಇಲ್ಲದಿದ್ದಲ್ಲಿ ರೂ ೧೦ ಲಕ್ಷ ಕೋಟಿ ಬಡಾವಳ ಹೂಡಿಕೆ ಸಾಧ್ಯವಾಗುತ್ತಿತೆ ಎಂದು ಅವರು ಪ್ರಶ್ನಿಸಿದರು.

ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಮಡಿಕೇರಿ ಶಾಸಕ ಡಾ. ಮಂತರ್‌ಗೌಡ ಮಾತನಾಡಿ, ಕುಶಾಲನಗರ ಪೊಲೀಸ್ ಉಪವಿಭಾಗದಲ್ಲಿ ೧೪೪ ವಸತಿಗೃಹಗಳ ಬೇಡಿಕೆಯಿದ್ದು, ಈಗ ೩೨ ಮಾತ್ರ ಲಭ್ಯವಿದೆ. ಸುಂಟಿಕೊಪ್ಪದಲ್ಲಿ ೫೦ ವಸತಿಗಳ ಪೈಕಿ ೧೨ ನಿರ್ಮಾಣಗೊಂಡಿದ್ದು, ಇನ್ನು ವಸತಿಗೃಹಗಳು ಬೇಕಾಗಿವೆ ಜೋತೆಗೆ ಚಿಕ್ಕಳುವಾರದಲ್ಲಿ ೧೦೮ ಎಕರೆ ಮಿನಿವಿಮಾನ ನಿಲ್ದಾಣಕ್ಕೆ ಕಾಯ್ದಿರಿಸಿದ ಜಾಗ ಪೊಲೀಸ್ ಇಲಾಖೆಗೆ ಬಂದಿದೆ ಈ ಜಾಗವನ್ನು ಸದುಪಯೋಗ ಪಡಿಸಿಕೊಳ್ಳಬೇಕೆಂದು ಅವರು ಮನವಿ ಮಾಡಿದರು. ಹಾಗೆಯೇ ಕೊಡಗಿನಲ್ಲಿ ವಾರಂತ್ಯಗಳಲ್ಲಿ ೧ ಲಕ್ಷಕ್ಕೂ ಹೆಚ್ಚು ಜನ ಬರುತ್ತಿದ್ದು ಪ್ರವಾಸಿಗರಿಗೂ ಸ್ಥಳೀಯರಿಗೂ ರಕ್ಷಣೆ ಒದಗಿಸುವ ನಿಟ್ಟಿನಲ್ಲಿ ಹೆಚ್ಚುವರಿಯಾಗಿ ಕನಿಷ್ಟ ೫೦೦ ರಿಂದ ೬೦೦ ಮಂದಿ ಪೊಲೀಸರ ಅಗತ್ಯತೆ ಇದೆ ಎಂದು ಅವರು ಮನವಿ ಮಾಡಿದರು. ಕೋಡ್ಲಿಪೇಟೆಯಲ್ಲಿ ಪೊಲೀಸ್ ಠಾಣೆ ಬೇಡಿಕೆ ಮಂಡಿಸಿದ ಅವರು ಕೊಡಗಿನ ಇಲಾಖೆಗೆ ಸಮಗ್ರ ಅಭಿವೃದ್ಧಿಯ ಹಿನ್ನೆಲೆಯಲ್ಲಿ ಒಂದು ಪ್ಯಾಕೇಜ್ ಬೇಕಿದೆ ಎಂದು ಮನವಿ ಮಾಡಿದರು. ಇದೇ ಸಂದರ್ಭ ಗೃಹ ಸಚಿವರನ್ನು ಪೊಲೀಸ್ ಇಲಾಖೆಯ ಪರವಾಗಿ ದಕ್ಷಿಣ ವಲಯ ಪೊಲೀಸ್ ಮಹಾ ನಿರೀಕ್ಷಕ ಡಾ.ಎಂ.ಬಿ. ಬೋರಲಿಂಗಯ್ಯ ಸನ್ಮಾನಿಸಿದರು.

ಮುಖ್ಯ ಅತಿಥಿಗಳಾಗಿ ಕ್ರೀಡಾ ಪ್ರಾಧಿಕಾರ ಉಪಾಧ್ಯಕ್ಷ ಸಿ.ಎಸ್. ಅರುಣ್ ಮಾಚಯ್ಯ, ಮಾಜಿ ಶಾಸಕ ಕೆ.ಎಂ.ಇಬ್ರಾಹಿA ಮಾಸ್ಟರ್, ಕೊಡಗು ಜಿಲ್ಲಾ ಗ್ಯಾರಂಟಿ ಯೋಜನೆಗ ಅನುಷ್ಠಾನ ಸಮಿತಿ ಅಧ್ಯಕ್ಷ ತೀತಿರ ಧರ್ಮಜ ಉತ್ತಪ್ಪ, ತಾಲೂಕು ಗ್ಯಾರಂಟಿ ಯೋಜನೆಗ ಅನುಷ್ಠಾನ ಸಮಿತಿ ಅಧ್ಯಕ್ಷ ವಿ.ಪಿ.ಶಶಿಧರ್, ಸುಂಟಿಕೊಪ್ಪ ಗ್ರಾಮ ಪಂಚಾಯಿತಿಯ ನಿಕಟಪೂರ್ವ ಅಧ್ಯಕ್ಷ ಪಿ.ಆರ್. ಸುನಿಲ್‌ಕುಮಾರ್, ಕೊಡಗು ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್, ಕೊಡಗು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆನಂದ್ ಪ್ರಕಾಶ್ ಮೀನಾ, ಉಪ ಅರಣ್ಯ ಸಂರಕ್ಷಣಾಧಿಕಾರಿ ಅಭಿಷೇಕ್, ಬೆಂಗಳೂರು ಕ.ರಾ.ಪೊ.ವ ಮತ್ತು ಮೂ.ಸೌ.ಅ.ನಿ.ನಿ.ಮುಖ್ಯ ಅಭಿಯಂತರ ಪಿ.ಬಿ.ಪ್ರಕಾಶ್, ಜಿ.ಪಂ.ಮಾಜಿ ಅಧ್ಯಕ್ಷೆ ಕೆ.ಪಿ.ಚಂದ್ರಕಲಾ, ಮಾಜಿ ಸದಸ್ಯ ಪಿ.ಎಂ.ಲತೀಫ್, ಕೆಪಿಸಿಸಿ ವಕ್ತಾರ ಎಂ.ಲಕ್ಷö್ಮಣ್, ಬೆಟ್ಟಗೇರಿ ಸಮೂಹ ತೋಟ ಮಾಲೀಕರಾದ ಡಿ.ವಿನೋದ್ ಶಿವಪ್ಪ, ಕೆ.ಕೆ.ಮಂಜುನಾಥ್ ಕುಮಾರ್, ಕಾಂಗ್ರೆಸ್ ಮುಖಂಡರಾದ ಕೆ.ಎಂ.ಲೋಕೇಶ್ ಮತ್ತಿತರರು ಉಪಸ್ಥಿತರಿದ್ದರು. ಮೊದಲಿಗೆ ಕೊಡಗು ಜಿಲ್ಲಾ ಪೊಲೀಸ್ ಸಾಂಸ್ಕೃತಿಕ ವೇದಿಕೆ ತಂಡದವರು ನಾಡ ಗೀತೆಯನ್ನು ಹಾಡಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಎನ್.ಬಿಂದುಮಣಿ ಸ್ವಾಗತಿಸಿದರು. ಜಿಲ್ಲಾ ಪೊಲೀಸ್ ಇಲಾಖೆಯ ಕಾವೇರಮ್ಮ ಮತ್ತು ಲೋಕೇಶ್ ಎಂ.ಎಸ್. ನಿರೂಪಿಸಿ, ವಂದಿದರು.