ವೀರಾಜಪೇಟೆ, ಫೆ. ೧೬: ವೀರಾಜಪೇಟೆ ಪುರಸಭೆ ವ್ಯಾಪ್ತಿಯಲ್ಲಿರುವ ಉದ್ಯಾನವನ, ಕುಡಿಯುವ ನೀರಿನ ಸಮಸ್ಯೆ ನೀಗಿಸಲು ಹಾಗೂ ಬೀದಿ ದೀಪ ಅಳವಡಿಕೆ ಮತ್ತು ಬೀದಿ ನಾಯಿಗಳ ಹಾವಳಿಯನ್ನು ತಡೆಗಟ್ಟಲು ಬೇಕಾದ ಅನುದಾನವನ್ನು ಮೀಸಲಿಡುವಂತೆ ಜಿಲ್ಲಾ ಉಪವಿಭಾಗಧಿಕಾರಿ, ಪುರಸಭೆಯ ಆಡಳಿತಾಧಿಕಾರಿ ನಿತಿನ್ ಚಕ್ಕಿ ಹೇಳಿದರು.

ವೀರಾಜಪೇಟೆ ಪುರಸಭೆ ವತಿಯಿಂದ ಸ್ಥಳೀಯ ಪುರಭವನದಲ್ಲಿ ಆಯ-ವ್ಯಯದ ಬಗ್ಗೆ ಸೂಕ್ತ ಸಲಹೆ ಸೂಚನೆಗಳನ್ನು ಪಡೆಯಲು ಕರೆದಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಈಗಾಗಲೇ ಪುರಸಭೆ ವ್ಯಾಪ್ತಿಯನ್ನು ವಿಸ್ತರಿಸಿ ವಾರ್ಡ್ ಸಂಖ್ಯೆ ಹೆಚ್ಚಾಗಿರುವುದರಿಂದ ಎಲ್ಲಾ ವಾರ್ಡ್ಗಳಿಗೂ ಮೂಲಭೂತ ಸೌಲಭ್ಯಗಳನ್ನು ಒದಗಿಸಿ ಜನರ ಕುಂದು ಕೊರತೆಗಳನ್ನು ನೀಗಿಸುವ ಕೆಲಸ ಆಗಬೇಕು. ವಾಹನ ದಟ್ಟಣೆ ಇರುವುದರಿಂದ ರಸ್ತೆ ಅಭಿವೃದ್ಧಿ, ಚರಂಡಿ ಹಾಗೂ ಸ್ವಚ್ಚತೆ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಸಭೆಯಲ್ಲಿ ಅಧಿಕಾರಿಗಳಿಗೆ ಸೂಚಿಸಿದರು.

ಕುಡಿಯುವ ನೀರಿನ ಸಮಸ್ಯೆಯಾಗಿದೆ ಎಂದು ಪ್ರಸ್ತಾಪವಾದಾಗ ಮಾತನಾಡಿದ ಪುರಸಭೆ ಮುಖ್ಯಧಿಕಾರಿ ಪಿ.ಕೆ. ನಾಚಪ್ಪ, ಇದುವರೆಗೂ ನೀರಿನ ಸಮಸ್ಯೆಯಾಗಿಲ್ಲ. ನಗರ ನೀರು ಸರಬರಾಜು ಯೋಜನೆಯಿಂದ ಪೈಪ್ ಅಳವಡಿಕೆ ಕಾಮಗಾರಿ ನಡೆಸುತ್ತಿರುವುದರಿಂದ ನೀರು ಸರಬರಾಜಿನಲ್ಲಿ ವ್ಯತ್ಯಾಸವಾಗಿದ್ದು ಸಮಸ್ಯೆ ಬಗೆಹರಿಸಲಾಗಿದೆ ಎಂದರು.

ಪ.ಜಾತಿ, ಪಂಗಡಗಳಿಗೆ ಸೌಲಭ್ಯಗಳನ್ನು ಮೀಸಲಿಡಲಾಗಿದೆ. ಈ ವರ್ಷ ಮಳೆಗಾಲಕ್ಕೂ ಮುನ್ನತೋಡು, ಕಾಲುವೆಗಳನ್ನು ಸ್ವಚ್ಚಗೊಳಿಸುವ ಮೂಲಕ ಸ್ವಚ್ಚತೆಗೆ ಆದ್ಯತೆ ನೀಡಲಾಗುವುದು ಎಂದರು.

ಖಾಸಗಿ ಬಸ್ಸು ಕಾರ್ಮಿಕ ಸಂಘದ ಜೂಡಿವಾಜ್ ಮಾತನಾಡಿ, ಬಸ್ ನಿಲ್ದಾಣದ ಒಳಗೆ ಕಾರು, ಬೈಕ್ ಇತರೆ ವಾಹನಗಳನ್ನು ನಿಲ್ಲಿಸಲಾಗುತ್ತಿದೆ. ಇದರಿಂದ ಖಾಸಗಿ ಬಸ್‌ಗಳನ್ನು ತಿರುಗಿಸಲು ನಿಲ್ಲಿಸಲು ಸಮಸ್ಯೆ ಉಂಟಾಗಿದ್ದು ಕೂಡಲೇ ಇತರೆ ವಾಹನಗಳನ್ನು ಬಸ್ ನಿಲ್ದಾಣದ ಒಳಗ್ಗೆ ನಿಲ್ಲಿಸದಂತೆ ಕ್ರಮ ಕೈಗೊಳ್ಳಬೇಕು ಎಂದಾಗ ಸಂಘದ ಕೆ.ಯು.ಗಣೇಶ್ ತಮ್ಮಯ್ಯ ಕೂಡ ಧ್ವನಿಗೂಡಿಸಿದರು.

ಹಿರಿಯ ನಾಗರಿಕರ ವೇದಿಕೆಯ ಶಂಕರಿ ಪೊನ್ನಪ್ಪ ಮಾತನಾಡಿ, ವೀರಾಜಪೇಟೆ ಸಾರ್ವಜನಿಕ ಆಸ್ಪತ್ರೆಯನ್ನು ೪೦೦ ಹಾಸಿಗೆ ಇರುವಂತೆ ಮೇಲ್ಧರ್ಜೆಗೆರಿಸುವ ಕಾರ್ಯ ನಡೆದಿದೆ. ಆದರೆ ವೈದ್ಯರ ಕೊರತೆ ಇರುವುದರಿಂದ ಹೊರ ರೋಗಿಗಳು ದಿನನಿತ್ಯ ಸಾಲುಗಟ್ಟಿ ನಿಲ್ಲುತ್ತಾರೆ ಇದರ ಬಗ್ಗೆ ಸರಕಾರ ಗಮನ ಹರಿಸಿ ತಾಲೂಕು ಕೇಂದ್ರವಾದ ಈ ಆಸ್ಪತ್ರೆಗೆ ಉತ್ತಮ ವೈದ್ಯರನ್ನು ನೇಮಿಸುವಂತಾಗಬೇಕು ಎಂದರು.

ಪಟ್ಟಣ ಪಂಚಾಯಿತಿ ಮಾಜಿ ಅಧ್ಯಕ್ಷ ವಿ.ಕೆ. ಸತೀಶ್ ಕುಮಾರ್ ಮಾತನಾಡಿ, ಪುರಸಭೆ ವ್ಯಾಪ್ತಿಯಲ್ಲಿ ಪ.ಜಾತಿ, ಪಂಗಡದವರಿಗೆ ಸೌಲಭ್ಯಗಳನ್ನು ತಪ್ಪದೆ ತಲುಪಿಸುವಂತ ಕೆಲಸವನ್ನು ಅಧಿಕಾರಿಗಳು ಮಾಡಬೇಕು ಎಂದರು.

ಎ.ಆರ್. ರವಿ ಕುಮಾರ್ ಮಾತನಾಡಿ, ಪಟ್ಟಣದ ಮುಖ್ಯ ರಸ್ತೆಗಳಲ್ಲಿ ಪೊಲೀಸ್ ಇಲಾಖೆ ಸಿ.ಸಿ.ಕ್ಯಾಮರ ಅಳವಡಿಸಿದ್ದರೂ ಕ್ಯಾಮರಗಳು ಕೆಲಸ ಮಾಡುತ್ತಿಲ್ಲ; ಎಲ್ಲಾ ಕ್ಯಾಮರಗಳು ದುಸ್ಥಿತಿಯಲ್ಲಿವೆ ಕೂಡಲೆ ದುಸ್ಥಿತಿಯಲ್ಲಿರುವ ಸಿ.ಸಿ.ಕ್ಯಾಮರವನ್ನು ರಿಪೇರಿ ಮಾಡಬೇಕು. ಅಥವಾ ಹೊಸ ಸಿ.ಸಿ ಕ್ಯಾಮರವನ್ನು ಅಳವಡಿಸಬೇಕೆಂದು ಒತ್ತಾಯಿಸಿದರು.

ನಿವೃತ್ತ ಶಿಕ್ಷಕ ಎ.ವಿ.ಮಂಜುನಾಥ್ ಮಾತನಾಡಿ, ಗಡಿಯಾರ ಕಂಬದಲ್ಲಿ ಗಡಿಯಾರವೆ ಚಾಲನೆಯಲ್ಲಿಲ್ಲ. ಎಷ್ಟೋ ಸಮಯದಿಂದ ಗಡಿಯಾರ ನಿಂತು ಹೋಗಿದೆ ಕ್ಷೇತ್ರದ ಶಾಸಕರು ಸಾಕಷ್ಟು ಅನುದಾನವನ್ನು ಪುರಸಭೆಗೆ ನೀಡಿದ್ದರೂ ಕಾಮಗಾರಿ ನಡೆಯುತ್ತಿಲ್ಲ ಎಂದು ದೂರಿದರಲ್ಲದೆ, ಪುರಸಭೆ ವ್ಯಾಪ್ತಿಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಭವನ ನಿರ್ಮಾಣ ಮಾಡಲು ಜಾಗ ನೀಡುವಂತೆ ಕೋರಿದರು.

ಆಟೋ ಚಾಲಕರ ಸಂಘದ ಎಂ.ಎA. ಶಶಿಧರನ್, ಶಿವಕೇರಿಯ ಸೀತಮ್ಮ ಮತ್ತಿತರರು ತಮ್ಮ ಹಲವು ಸಮಸ್ಯೆಗಳನ್ನು ಬಗೆ ಹರಿಸುವಂತೆ ಸಭೆಯಲ್ಲಿ ಕೋರಿದಾಗ ಸಮಸ್ಯೆಗಳನ್ನು ಬಗೆಹರಿಸುವ ಪ್ರಯತ್ನ ಮಾಡುವುದಾಗಿ ಮುಖ್ಯಾಧಿಕಾರಿ ನಾಚಪ್ಪ ಹೇಳಿದರು.

ಪಟ್ಟಣದಲ್ಲಿ ಕಿರಿದಾದ ರಸ್ತೆಯಲ್ಲಿ ದಿನದಿಂದ ದಿನಕ್ಕೆ ವಾಹನಗಳ ಸಂಖ್ಯೆ ಹೆಚ್ಚಾಗುತ್ತಿದೆ. ಶಾಲಾ ಕಾಲೇಜು ವಿದ್ಯಾರ್ಥಿಗಳಿಗೂ, ಪಾದಚಾರಿಗಳು ಮತ್ತು ಸಾರ್ವಜನಿಕರಿಗೆ ಓಡಾಡಲು ಸಮಸ್ಯೆಯಾಗಿದ್ದು, ಸುಂಕದಕಟ್ಟೆಯಿAದ ಮೀನುಪೇಟೆವರೆಗೂ ಮುಖ್ಯ ರಸ್ತೆಯ ಅಗಲಿಕರಣ ಮಾಡುವ ಬಗ್ಗೆ ಸಭೆಯಲ್ಲಿ ಪ್ರಸ್ತಾಪ ಕೇಳಿಬಂತು. ಸಭೆಯಲ್ಲಿ ಪುರಸಭೆ ಅಧಿಕಾರಿಗಳು, ಸಿಬ್ಬಂದಿ, ಸಂಘ ಸಂಸ್ಥೆಗಳ ಪದಾಧಿಕಾರಿಗಳು ಸಾರ್ವಜನಿಕರು ಹಾಜರಿದ್ದರು.