ಗೋಣಿಕೊಪ್ಪಲು.ಫೆ. ೧೬: ರಾಷ್ಟಿçÃಯ ಸ್ವಯಂಸೇವಕ ಸಂಘ ನೂರು ವಸಂತಗಳನ್ನು ಪೂರೈಸಿರುವ ಹಿನ್ನೆಲೆಯಲ್ಲಿ, ಹಿಂದೂ ಸಮಾಜದಲ್ಲಿ ಧರ್ಮ ಮತ್ತು ಸಂಸ್ಕೃತಿಯ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಪೊನ್ನಂಪೇಟೆ ತಾಲೂಕು ಹಾತೂರು ಮಂಡಲದ ಹಿಂದೂ ಸಂಗಮ ಆಯೋಜನ ಸಮಿತಿ ವತಿಯಿಂದ ಕೈಕೇರಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮೈದಾನದಲ್ಲಿ ಆಯೋಜಿಸಲಾಗಿದ್ದ ಹಿಂದೂ ಸಂಗಮ ಕಾರ್ಯಕ್ರಮ ನಡೆಯಿತು.
ಗೋಣಿಕೊಪ್ಪಲುವಿನ ಕಾವೇರಿ ಕಾಲೇಜು ಬಳಿ ವೀರ ಸೇನಾನಿಗಳಾದ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಹಾಗೂ ಜನರಲ್ ತಿಮ್ಮಯ್ಯ ಅವರ ಪುತ್ಥಳಿಗೆ ಕೊಡಗು ಜಿಲ್ಲಾ ಸರಸಂಚಾಲಕರಾದ ಚೆಕ್ಕೆರ ಮನು ಹಾಗೂ ಗಣ್ಯರು ಮಾಲಾರ್ಪಣೆ, ಪುಷ್ಪಾರ್ಚನೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಕಾವೇರಿ ಕಾಲೇಜು ಬಳಿಯಿಂದ ಮುಖ್ಯ ರಸ್ತೆಯ ಮೂಲಕ ಮೆರವಣಿಗೆ ಸಾಗಿ ಕೈಕೇರಿಯ ಕಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ಸಮಾಗಮಗೊಂಡಿತು.
ಮುಖ್ಯ ರಸ್ತೆಯ ಮೂಲಕ ಸಾಗಿ ಬಂದ ಶೋಭಾಯಾತ್ರೆಯಲ್ಲಿ ಭಾರತಾಂಬೆಯ ಭಾವಚಿತ್ರಕ್ಕೆ ಗಣ್ಯರು ಪುಷ್ಪಾರ್ಚನೆ ಮಾಡಿದರು. ಮೆರವಣಿಗೆಯಲ್ಲಿ ಕೇಸರಿ ಶಾಲು ಧರಿಸಿದ ಮಹಿಳೆಯರು ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡು ಭಾರತ್ ಮಾತಾ ಕಿ ಜೈ ಎಂಬ ಘೋಷಣೆಯೊಂದಿಗೆ ಮೆರವಣಿಗೆಗೆ ಮೆರಗು ನೀಡಿದರು. ಕಳಸ ಹೊತ್ತ ಹೆಣ್ಣು ಮಕ್ಕಳು ಮೆರವಣಿಗೆಯಲ್ಲಿ ಹೆಜ್ಜೆ ಹಾಕಿದರು. ಚಂಡೆ ಹಾಗೂ ಕೊಡವ ವಾಲಗ, ವೀರಗಾಸೆ ನೃತ್ಯ ಶೋಭಾಯಾತ್ರೆಗೆ ಮೆರಗು ನೀಡಿತು. ಸುವೃತ ನಾಟ್ಯಾಲಯ ವಿದ್ಯಾರ್ಥಿಗಳಿಂದ ಭಜನಾ ಕುಣಿತ ಗಮನ ಸೆಳೆಯಿತು. ನಂತರ ಕೈಕೇರಿಯ ಶಾಲಾ ಮೈದಾನದಲ್ಲಿ ಆಯೋಜನೆಗೊಂಡಿದ್ದ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಿರಿಯ ವೈದ್ಯರಾದ ಕಾಳಿಮಾಡ ಡಾ.ಶಿವಪ್ಪ ವಹಿಸಿದ್ದರು.ಪೊನ್ನಂಪೇಟೆ ಶ್ರೀ ರಾಮಕೃಷ್ಣ ಶಾರದಾಶ್ರಮದ ಅಧ್ಯಕ್ಷ ಪರಹಿತಾನಂದ ಮಹಾರಾಜ್ ಅವರು ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಸರ್ವರಿಗೂ ಒಳಿತನ್ನು ಬಯಸುವ ಹಿಂದೂ ಧರ್ಮ ಶ್ರೇಷ್ಠ ಧರ್ಮವಾಗಿದ್ದು, ಪ್ರತಿಯೊಬ್ಬರೂ ಕೂಡ ಧರ್ಮ ಹಾಗೂ ಸಂಸ್ಕೃತಿಯನ್ನು ಪಾಲನೆ ಮಾಡಬೇಕು ಎಂದು ಕರೆ ನೀಡಿದರು. ದಿಕ್ಸೂಚಿ ಭಾಷಣಕಾರರಾಗಿ ಮಾತನಾಡಿದ ವಿಶ್ವ ಹಿಂದೂ ಪರಿಷತ್ ಕರ್ನಾಟಕ ಪ್ರಾಂತ ಸಹ ಕಾರ್ಯದರ್ಶಿ ಶರಣ್ ಪಂಪ್ವೆಲ್, ಹಿಂದೂ ಧರ್ಮದ ಅಡಿಪಾಯವನ್ನು ರಾಷ್ಟಿçÃಯ ಸ್ವಯಂಸೇವಕ ಸಂಘ ಗಟ್ಟಿಗೊಳಿಸಿದೆ. ಹಿಂದುತ್ವ ಎನ್ನುವುದು ಜೀವನ ಪದ್ಧತಿ, ನೆಮ್ಮದಿಗೋಸ್ಕರ ಭಾರತ ದೇಶಕ್ಕೆ ಜನರು ಬರುತ್ತಿದ್ದಾರೆ. ಇದು ಸನಾತನ ಧರ್ಮದ ಕೊಡುಗೆ. ಭಾರತದಲ್ಲಿ ೮೩ ಸಾವಿರ ಸ್ವಯಂ ಸೇವಕ ಸಂಘಗಳು ಕಾರ್ಯ ನಿರ್ವಹಿಸುತ್ತಿವೆ. ಪ್ರೀತಿ ಪ್ರೇಮದ ಹೆಸರಿನಲ್ಲಿ ಮತಾಂತರ ನಡೆಯುತ್ತಿರುವುದು ಆತಂಕಕಾರಿ ಬೆಳವಣಿಗೆ ಸಂಘ ಇರುವುದು ಸಮಾಜಕ್ಕೋಸ್ಕರ ಎಂದು ನುಡಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಜಮ್ಮಡ ಮೋನ ಭೀಮಯ್ಯ ಮಾತನಾಡಿ, ಸನಾತನ ಧರ್ಮ ಎಲ್ಲಿ ಇದೆಯೋ ಅಲ್ಲಿ ಪದ್ಧತಿ ಪರಂಪರೆ ಆಚಾರ ವಿಚಾರ ಇರಲು ಸಾಧ್ಯ. ಯಾವುದು ತಪ್ಪು ಯಾವುದು ಸರಿ ಎಂಬುದನ್ನು ಅರ್ಥ ಮಾಡಿಸುವಂತಹ ವಿದ್ಯೆಯನ್ನು ನಾವು ನಮ್ಮ ಮಕ್ಕಳಿಗೆ ಕೊಡಬೇಕು. ನಮ್ಮ ಮಕ್ಕಳಲ್ಲಿ ಸನಾತನ ಧರ್ಮದ ಬಗ್ಗೆ ಅರಿವು ಮೂಡಿಸಬೇಕು. ಮನೆಯಲ್ಲಿ ಸಂಸ್ಕಾರ ಕಲಿಸುವ ಕೆಲಸ ಮಾಡಬೇಕು ಎಂದರು.
ವೇದಿಕೆಯಲ್ಲಿ ಹಿಂದೂ ಸಂಗಮ ಆಯೋಜನಾ ಸಮಿತಿಯ ಅಧ್ಯಕ್ಷ ಕೊಕ್ಕಂಡ ಕುಶ ಬಿದ್ದಪ್ಪ, ನಿರ್ವಾಹಣ ತಂಡದ ಉಪಾಧ್ಯಕ್ಷ ಜಮ್ಮಡ ಪೂವಣ್ಣ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಪ್ರಮುಖರಾದ ಚಿರಿಯಪಂಡ ರಾಜಾ ನಂಜಪ್ಪ, ಶ್ರೀ ಬಸವೇಶ್ವರ ದೇವಸ್ಥಾನ ಆಡಳಿತ ಮಂಡಳಿ ಉಪಾಧ್ಯಕ್ಷ ರುದ್ರಪ್ಪ, ಪೊನ್ನಂಪೇಟೆ ಪಟ್ಟಣ ಸಹಕಾರಿ ಬ್ಯಾಂಕ್ ಅಧ್ಯಕ್ಷ ಚಿರಿಯಪಂಡ ಉಮೇಶ್ ಉತ್ತಪ್ಪ, ಸಾಯಿ ಶಂಕರ್ ವಿದ್ಯಾ ಸಂಸ್ಥೆಯ ಅಧ್ಯಕ್ಷ ಕೋಳೆರ ಝರು ಗಣಪತಿ ಪಾಲ್ಗೊಂಡಿದ್ದರು. ಹಿಂದೂ ಸಂಗಮ ಆಯೋಜನ ಸಮಿತಿಯ ಪದಾಧಿಕಾರಿಗಳು, ಸದಸ್ಯರು, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸದಸ್ಯರು, ಎಸ್ಎನ್ಡಿಪಿ ಸದಸ್ಯರು, ವಿವಿಧ ಸಂಘಟನೆ ಹಾಗೂ ಸಂಘ ಸಂಸ್ಥೆಗಳ ಸದಸ್ಯರು, ಹಿಂದೂ ಕಾರ್ಯಕರ್ತರು ಭಾಗವಹಿಸಿದ್ದರು. ಪುತ್ತಾಮನೆ ವಿದ್ಯಾ ಜಗದೀಶ್ ವಂದೇ ಮಾತರಂ ಹಾಡಿದರು. ಮುತ್ತುರಾಜ್ ಪ್ರಾರ್ಥಿಸಿ, ಕೊಕ್ಕಂಡ ರಿನಿ ಧರ್ಮಜ ಸ್ವಾಗತಿಸಿ, ಮುರುಗೇಶ್ ನಿರೂಪಿಸಿ, ಗುಮ್ಮಟ್ಟಿರ ಕಿಲನ್ ಗಣಪತಿ ವಂದಿಸಿದರು. ಹಿಂದೂ ಸಂಗಮ ಆಯೋಜನಾ ಸಮಿತಿಯ ಪದಾಧಿಕಾರಿಗಳಾದ ಸಿ.ಕೆ. ಬೋಪಣ್ಣ, ಪಡಿಕಲ್ ಯಧು, ಗುಮ್ಮಟ್ಟಿರ ಕಿಲನ್, ಕುಪ್ಪಂಡ ಗಿರಿ ಪೂವಣ್ಣ, ಚೆಪ್ಪುಡೀರ ಹರೀಶ್, ಕುಪ್ಪಂಡ ಕೃಷ್ಣ, ಗುಮ್ಮಟ್ಟಿರ ದರ್ಶನ್, ಪುಲಿಯಂಡ ಸುರೇಶ, ಕೊಕ್ಕಂಡ ನಮಿತಾ ಬಿದ್ದಪ್ಪ, ಕಾಯೇರ ಕಿರಣ್, ಸೇರಿದಂತೆ ಹಾತೂರು ಮಂಡಲದ ೫ ಗ್ರಾಮಸ್ಥರು, ಮತ್ತಿತರರು ಹಾಜರಿದ್ದರು.