ಸೋಮವಾರಪೇಟೆ,ಫೆ.೧೬: ತಾಲೂಕಿನ ಜಂಬೂರು ಗ್ರಾಮದಲ್ಲಿ ಅಕ್ರಮವಾಗಿ ಗೋ ಮಾಂಸವನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದ ಆರೋಪಿಯನ್ನು ಹಿಂದೂ ಜಾಗರಣಾ ವೇದಿಕೆಯ ಕಾರ್ಯಕರ್ತರು ಪತ್ತೆಹಚ್ಚಿ, ಸೋಮವಾರಪೇಟೆ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ ಮೇರೆ, ಪೊಲೀಸರು ವಾಹನ ಸಹಿತ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ನಿನ್ನೆ ರಾತ್ರಿ ಕೆಂಪು ಬಣ್ಣದ ಡಸ್ಟರ್ ಕಾರಿನಲ್ಲಿ ಸುಂಟಿಕೊಪ್ಪದ ಸುಹೈಲ್ ಎಂಬಾತ ಸುಮಾರು ೧೫ ಕೆ.ಜಿ.ಯಷ್ಟು ಗೋಮಾಂಸವನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿರುವ ಬಗ್ಗೆ ಮಾಹಿತಿ ಪಡೆದ ಹಿಂದೂ ಜಾಗರಣಾ ವೇದಿಕೆ ಕಾರ್ಯಕರ್ತರು, ಸ್ಥಳೀಯರ ಸಹಕಾರದಿಂದ ಕಾರನ್ನು ಪರಿಶೀಲಿಸಿದ ಸಂದರ್ಭ ೧೫ ಕೆ.ಜಿ.ಯಷ್ಟು ಗೋ ಮಾಂಸ ಅಕ್ರಮವಾಗಿ ಸಾಗಾಟಗೊಳ್ಳುತ್ತಿದ್ದುದು ಕಂಡುಬAದಿದೆ. ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ ಮೇರೆ, ಸ್ಥಳಕ್ಕಾಗಮಿಸಿದ ಪೊಲೀಸರು, ಆರೋಪಿ ಸುಹೈಲ್ ಸಹಿತ ಕೃತ್ಯಕ್ಕೆ ಬಳಸಿದ ಡಸ್ಟರ್ ಕಾರು, ಅಕ್ರಮ ಗೋ ಮಾಂಸವನ್ನು ವಶಕ್ಕೆ ಪಡೆದಿದ್ದಾರೆ.
ಗೋಹತ್ಯೆಯ ವಿರುದ್ಧ ಕೊಡಗಿನ ರಾಜಕಾರಣಿಗಳು ಧ್ವನಿ ಎತ್ತುತ್ತಿಲ್ಲ ಪೋಲೀಸ್ ಇಲಾಖೆ ಗೋಹತ್ಯೆ ತಡೆಯುವಲ್ಲಿ ನಿರಂತರ ವಿಫಲತೆ ಕಾಣುತ್ತಿದೆ.ಇದರಿಂದಾಗಿಯೇ ಕೊಡಗಿನಲ್ಲಿ ನಿರಂತರವಾಗಿ ಗೋಹತ್ಯೆಗಳು ನಡೆಯುತ್ತಿವೆ ಎಂದು ಆರೋಪಿಸಿರುವ ಹಿಂದು ಜಾಗರಣ ವೇದಿಕೆಯ ಜಿಲ್ಲಾ ಸಂಯೋಜಕ್ ಬೋಜೇಗೌಡ, ಇದರ ವಿರುದ್ಧ ಹಿಂದೂ ಜಾಗರಣಾ ವೇದಿಕೆ ವತಿಯಿಂದ ಜನಾಂದೋಲನ ರೂಪಿಸುವ ಮೂಲಕ ಸಮಾಜದಲ್ಲಿ ಜಾಗೃತಿ ಮೂಡಿಸಲಾಗುವುದು ಎಂದು ತಿಳಿಸಿದ್ದಾರೆ.