ಕುಶಾಲನಗರ, ಫೆ.೧೪: ಸ್ವಚ್ಛ ಕೊಡಗು ನಿರ್ಮಾಣ ಪ್ರತಿಯೊಬ್ಬರ ಜವಾಬ್ದಾರಿಯೊಂದಿಗೆ ಆದ್ಯ ಕರ್ತವ್ಯವಾಗಿದೆ ಎಂದು ಮಡಿಕೇರಿ ಕ್ಷೇತ್ರದ ವಿಧಾನಸಭಾ ಶಾಸಕ ಡಾ.ಮಂತರ್ ಗೌಡ ಹೇಳಿದರು.
ಅವರು ರೋಟರಿ ಕುಶಾಲನಗರ ೫೦ನೇ ವರ್ಷದ ಸಂಭ್ರಮದ ಅಂಗವಾಗಿ ಕುಶಾಲನಗರದ ಸರಕಾರಿ ಬಸ್ ನಿಲ್ದಾಣದ ಎದುರುಗಡೆ ನಿರ್ಮಿಸಿದ ಬೃಹತ್ ಬಾಟಲ್ ಮಾದರಿಯ ಒಣ ಕಸ ಸಂಗ್ರಹ ಘಟಕ ಉದ್ಘಾಟಿಸಿ ಮಾತನಾಡಿದರು.
ಸ್ಥಳೀಯರು ಸೇರಿದಂತೆ ಪ್ರವಾಸಿಗರ ಒತ್ತಡದಿಂದ ಪಟ್ಟಣ ವ್ಯಾಪ್ತಿಯ ಸಾರ್ವಜನಿಕ ಸ್ಥಳಗಳಲ್ಲಿ ತ್ಯಾಜ್ಯಗಳ ಪ್ರಮಾಣ ಹೆಚ್ಚಳವಾಗುತ್ತಿದೆ. ಈ ಮೂಲಕ ನದಿ ಪರಿಸರ ಕಲುಷಿತಗೊಳುತ್ತಿದೆ.
ಪ್ರತಿಯೊಬ್ಬರು ಸ್ವಚ್ಛ ಕುಶಾಲನಗರ ಸ್ವಚ್ಛ ಕಾವೇರಿ ಅಭಿಯಾನದಲ್ಲಿ ರೋಟರಿ ಸಂಸ್ಥೆಯೊAದಿಗೆ ತಮ್ಮನ್ನು ತೊಡಗಿಸಿಕೊಂಡು ಕೈಜೋಡಿಸುವಂತೆ ಕರೆ ನೀಡಿದರು.
ಸಾಮಾಜಿಕ ಕಾರ್ಯಕ್ರಮಗಳ ಮೂಲಕ ರೋಟರಿ ಸಂಸ್ಥೆ ಸರಕಾರ ಮಾಡಬೇಕಾದ ಕಾರ್ಯಗಳನ್ನು ಮಾಡುತ್ತಿರುವ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಮಂತರ್ ಗೌಡ, ಎಲ್ಲಾ ರೀತಿಯ ಸಹಕಾರ ನೀಡುವುದಾಗಿ ಭರವಸೆ ವ್ಯಕ್ತಪಡಿಸಿದರು.
ಈ ಸಂದರ್ಭ ಮಾತನಾಡಿದ ಕುಶಾಲನಗರ ರೋಟರಿ ಅಧ್ಯಕ್ಷರಾದ ಮನು ಪೆಮ್ಮಯ್ಯ, ಸುವರ್ಣ ಮಹೋತ್ಸವ ಅಂಗವಾಗಿ ಕುಶಾಲನಗರ ಕಾವೇರಿ ಸೇತುವೆ ಸಮೀಪ ಮಡಿಕೇರಿ-ಕುಶಾಲನಗರ ರಸ್ತೆ ಪ್ರವೇಶ ದ್ವಾರದಲ್ಲಿ ಸೋಮವಾರಪೇಟೆ, ಕುಶಾಲನಗರ ರಸ್ತೆ ಪ್ರವೇಶ ದ್ವಾರ ಹಾಗೂ ಪ್ರವಾಸಿ ಕೇಂದ್ರಗಳಲ್ಲಿ ಬೃಹತ್ ಗಾತ್ರದ ಬಾಟಲ್ ಮಾದರಿ ಒಣಕಸ ಸಂಗ್ರಹ ಘಟಕ ನಿರ್ಮಿಸಲಾಗುತ್ತಿದೆ. ಪ್ರತಿಯೊಬ್ಬರು ತ್ಯಾಜ್ಯಗಳನ್ನು ಎಲ್ಲೆಂದರಲ್ಲಿ ಎಸೆಯದೆ ಇಂತಹ ತೊಟ್ಟಿಗಳಲ್ಲಿ ವಿಲೇವಾರಿ ಮಾಡುವಂತೆ ಕೋರಿದರು.
ಈ ಸಂದರ್ಭ ಕುಶಾಲನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಪ್ರಮೋದ್ ಮುತ್ತಪ್ಪ, ರೋಟರಿ ಅಧ್ಯಕ್ಷ ಮನು ಪೆಮ್ಮಯ್ಯ, ಕಾರ್ಯದರ್ಶಿ ಹೆಚ್.ಪಿ ಮಂಜುನಾಥ್, ಕೆ.ಎಂ ಜೆಕಬ್, ಸುವರ್ಣ ಮಹೋತ್ಸವ ಸಮಿತಿಯ ಡಾ ಹರಿ ಎ ಶೆಟ್ಟಿ, ಎಂ ಡಿ ರಂಗಸ್ವಾಮಿ, ಕೆ.ಎಸ್ ರಾಜಶೇಖರ್, ಆರತಿ ಎ ಶೆಟ್ಟಿ, ಉಲ್ಲಾಸ್ ಕೃಷ್ಣ ಮತ್ತಿತರರು ಇದ್ದರು.