ಮಡಿಕೇರಿ, ಫೆ. ೧೪: ೧೦ನೇ ಆವೃತ್ತಿಯ ಪುರುಷರ ಕ್ರಿಕೆಟ್ ಟಿ-೨೦ ವಿಶ್ವಕಪ್ ಲೀಗ್ ಪಂದ್ಯಗಳು ತಾ.೭ ರಿಂದ ಪ್ರಾರಂಭಗೊAಡಿದ್ದು, ತಾ. ೧೫ ರಂದು (ಇಂದು) ಬಹುನಿರೀಕ್ಷಿತ ಭಾರತ-ಪಾಕಿಸ್ತಾನ ಪಂದ್ಯ ನಡೆಯಲಿದೆ.

ಭಾರತ ಹಾಗೂ ಶ್ರೀಲಂಕಾದಲ್ಲಿ ಈ ಬಾರಿ ವಿಶ್ವಕಪ್ ನಡೆಯುತ್ತಿದ್ದು, ಭಾರತದಲ್ಲಿ ಬಾಂಗ್ಲಾ ಆಟಗಾರರಿಗೆ ಭದ್ರತೆಯ ಕೊರತೆ ಇದೆ ಎಂದು ಆರೋಪಿಸಿ ಬಾಂಗ್ಲಾ ತಂಡವು ಬಾಂಗ್ಲಾ ಕ್ರಿಕೆಟ್ ಬೋರ್ಡ್ ಹಾಗೂ ಸರಕಾರದ ನಿರ್ಧಾರದಂತೆ ಟೂರ್ನಿಯನ್ನು ಬಹಿಷ್ಕರಿಸಿದೆ. ಬಾಂಗ್ಲಾಗೆ ಬೆಂಬಲವಾಗಿ ನಿಂತ ಪಾಕಿಸ್ತಾನ, ಟೂರ್ನಿ ಬಹಿಷ್ಕರಿಸದಿದ್ದರೂ ಭಾರತದ ವಿರುದ್ಧ ನಿಗದಿ ಪಡಿಸಿದ್ದ ಪಂದ್ಯವನ್ನು ಆಡದಿರಲು ನಿಶ್ಚಯಿಸಿತ್ತು.

ಆದರೆ ದಿಢೀರನೆ ತನ್ನ ನಿರ್ಧಾರ ಬದಲಾಯಿಸಿದ್ದು, ಭಾರತದ ವಿರುದ್ಧ ಆಡಲು ಕಳೆದೆರಡು ದಿನಗಳ ಹಿಂದೆ ಪಾಕ್ ಕ್ರಿಕೆಟ್ ಬೋರ್ಡ್ ಹಾಗೂ ಸರಕಾರ ತನ್ನ ನಿರ್ಧಾರ ಪ್ರಕಟಿಸಿತು.

ತಾ. ೧೫ ರಂದು (ಇಂದು) ಸಂಜೆ ೭ ಗಂಟೆಗೆ ಶ್ರೀಲಂಕಾದ ಕೊಲಂಬೋದಲ್ಲಿ ಪಂದ್ಯ ನಡೆಯಲಿದ್ದು, ಸ್ಟಾರ್ ಸ್ಪೋರ್ಟ್ಸ್ ಅಥವಾ ಜಿಯೋ ಹಾಟ್ ಸ್ಟಾರ್‌ನಲ್ಲಿ ವೀಕ್ಷಿಸಬಹುದಾಗಿದೆ.

ಕಳೆದ ಆವೃತ್ತಿಯಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸಿದ್ದ ಭಾರತ, ಈ ಬಾರಿ ತಾನಾಡಿದ ಮೊದಲೆರಡೂ ಪಂದ್ಯಗಳಲ್ಲಿ ಯು.ಎಸ್.ಎ ಹಾಗೂ ನಮೀಬಿಯಾ ತಂಡಗಳನ್ನು ಮಣಿಸಿ ‘ಎ’ ಗುಂಪಿನಲ್ಲಿ ಮೊದಲ ಸ್ಥಾನದಲ್ಲಿದೆ. ಪಾಕ್ ತಂಡ ಯು.ಎಸ್.ಎ ಹಾಗೂ ನೆದರ್‌ಲ್ಯಾಂಡ್ ವಿರುದ್ಧ ಗೆದ್ದು ನೆಟ್ ರನ್ ರೇಟ್ ಅನುಸಾರ ೨ನೇ ಸ್ಥಾನದಲ್ಲಿದೆ. ಒಟ್ಟು ೪ ಗುಂಪುಗಳಿದ್ದು, ೨೦ ತಂಡಗಳು ಈ ವಿಶ್ವಕಪ್‌ನಲ್ಲಿ ಪಾಲೊಳ್ಳುತ್ತಿವೆ.