ನಾಪೋಕ್ಲು, ಫೆ. ೧೩: ಮಹಿಳೆಯರು ದಿನಬಳಕೆ ವಸ್ತುಗಳ ತಯಾರಿಕೆಯಲ್ಲಿ ತೊಡಗಿಸಿಕೊಳ್ಳುವುದರ ಮೂಲಕ ಸ್ವಾವಲಂಬಿಗಳಾಗಬೇಕು ಎಂದು ಪೊಮ್ಮಕ್ಕಡ ಕೂಟದ ಅಧ್ಯಕ್ಷೆ ಬಡ್ಡಿರ ನಳಿನಿ ಪೂವಯ್ಯ ಕರೆ ನೀಡಿದರು

ಸಮೀಪದ ಚೇರಂಬಾಣೆ ಬೆಂಗ್‌ನಾಡ್ ಕೊಡವ ಸಮಾಜದಲ್ಲಿ ಪೊಮ್ಮಕ್ಕಡ ಕೂಟವು ಮಹಿಳೆಯರಿಗಾಗಿ ಆಯೋಜಿಸಿದ್ದ ಗೃಹ ಬಳಕೆ ವಸ್ತುಗಳ ತಯಾರಿ ಕಾರ್ಯಾಗಾರದ ಅಧ್ಯಕ್ಷತೆಯನ್ನು ವಹಿಸಿ ಅವರು ಮಾತನಾಡಿದರು. ವಿವಿಧ ಸಂಸ್ಥೆಗಳು ಮಹಿಳೆಯರ ಶ್ರೇಯೋಭಿವೃದ್ಧಿಗೆ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸುತ್ತಿವೆ. ಮಹಿಳೆಯರು ಪಾಲ್ಗೊಳ್ಳುವುದರ ಮೂಲಕ ಆರ್ಥಿಕವಾಗಿ ಸಬಲರಾಗಬೇಕು ಎಂದರು.

ಕೊಡವ ಸಮಾಜದ ಸಭಾಂಗಣದಲ್ಲಿ ಮಹಿಳೆಯರಿಗಾಗಿ ಆಯೋಜಿಸಲಾಗಿದ್ದ ಪ್ರಾತ್ಯಕ್ಷಿಕೆಯಲ್ಲಿ ವಿವಿಧ ಹಣ್ಣು, ತರಕಾರಿಗಳಿಂದ ತಯಾರಿಸಬಹುದಾದ ಉತ್ಪನ್ನಗಳ ಬಗ್ಗೆ ಮಾಹಿತಿ ನೀಡಲಾಯಿತು. ಪಟ್ರಪಂಡ ಡಿಂಪಲ್ ಅಯ್ಯಪ್ಪ ಕಾರ್ಯಾಗಾರದಲ್ಲಿ ಪ್ರಾತ್ಯಕ್ಷಿಕೆ ನೀಡಿದರು. ಶಿಲ್ಪ ಪ್ರಾರ್ಥಿಸಿದರು. ಕಾರ್ಯದರ್ಶಿ ಪಟ್ಟಮಾಡ ಜಯಂತಿ ಚಂಗಪ್ಪ ಸ್ವಾಗತಿಸಿ, ತೇಲಪಂಡ ಸುನಿತಾ ವಂದಿಸಿದರು. ಕಾರ್ಯಕ್ರಮದಲ್ಲಿ ಕೂಟದ ನಿರ್ದೇಶಕರು, ಸದಸ್ಯರು ಪಾಲ್ಗೊಂಡಿದ್ದರು.