ಕಡಂಗ, ಫೆ. ೧೨: ಸ್ಥಳೀಯ ಶಾದಿ ಮಹಲ್ ಸಭಾಂಗಣದಲ್ಲಿ ೧೧ನೇ ವರ್ಷದ ಕೆ.ಪಿ.ಎಲ್ ಕ್ರಿಕೆಟ್ ಆಟಗಾರರ ಬಿಡ್ಡಿಂಗ್ ಕಾರ್ಯಕ್ರಮವು ನಡೆಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೆಪಿಎಲ್ ಸ್ಥಾಪಕರಾದ ಜುನೈದ್ ಕೆ.ಎಂ ವಹಿಸಿದ್ದರು. ಎಂಟು ತಂಡಗಳ ನಾಯಕರು ಮತ್ತು ಮಾಲೀಕರ ಸಮ್ಮುಖದಲ್ಲಿ ಆಟಗಾರರ ಬಿಡ್ಡಿಂಗ್ ಕಾರ್ಯಕ್ರಮ ನಡೆಸಲಾಯಿತು.

ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯರಾದ ಕಿರಣ್ ಕಾರ್ಯಪ್ಪ ಮಾತನಾಡಿ, ಕ್ರೀಡಾಕೂಟದಿಂದ ವರ್ಷದಿಂದ ವರ್ಷಕ್ಕೆ ಯುವ ಪ್ರತಿಭೆಗಳನ್ನು ಹೊರ ತರಲು ಸಾಧ್ಯವಾಗುತ್ತಿದೆ ಎಂದರು.

ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾದ ಪ್ರಸನ್ನ ತಮ್ಮಯ್ಯ ಮಾತನಾಡಿ, ಕಡಂಗದಲ್ಲಿ ಕ್ರೀಡಾ ಚಟುವಟಿಕೆಗಳು ಹೆಚ್ಚಾಗಿದ್ದು ಒಂದೇ ವೇದಿಕೆಯಲ್ಲಿ ಎಲ್ಲಾ ಕ್ರೀಡೆಗಳು ನಡೆಯಲಿ ಎಂದು ಆಶಿಸಿದರು.

ಗ್ರಾಮ ಪಂಚಾಯಿತಿ ಸದಸ್ಯರಾದ ಸುಬೀರ್ ಮಾತನಾಡಿ, ಗ್ರಾಮದ ಯುವ ಪ್ರತಿಭೆಗಳಿಗೆ ಕೆ.ಪಿ.ಎಲ್ ಉತ್ತಮ ವೇದಿಕೆಯಾಗಿದೆ ಎಂದರು.

ಮತ್ತೊಬ್ಬ ಮುಖ್ಯ ಅತಿಥಿ ಜಮಾತ್ ಕಾರ್ಯದರ್ಶಿ ಅಬ್ದುಲ್ ರಹ್ಮಾನ್ ಮಾತನಾಡಿ ಪಂದ್ಯಾಟಕ್ಕೆ ಶುಭ ಕೋರಿದರು.

ವೇದಿಕೆಯಲ್ಲಿ ಜಮಾಅತ್ ಅಧ್ಯಕ್ಷರಾದ ಅಬ್ದುಲ್ಲ, ಉಸ್ಮಾನ್, ಶಿಯಾಬುದ್ದೀನ್, ಅಬ್ದುರಹಮಾನ್ ಅರಫಾ, ಸಮದ್, ಸಿದ್ದಿಕ್, ರಾಜಿಕ್ ಅಬೂಬಕ್ಕರ್, ಆಯೋಜಕರಾದ ರಹೀಮ್, ಆಸ್ಕರ್, ಸಮೀರ್, ಯೂನಿಸ್ ಉಪಸ್ಥಿತರಿದ್ದರು. ಕಾರ್ಯಕ್ರಮದ ನಿರೂಪಣೆಯನ್ನು ಪತ್ರಕರ್ತ ನೌಫಲ್ ಎಂ.ಬಿ ನೆರವೇರಿಸಿದರು.