ಮಡಿಕೇರಿ, ಫೆ. ೧೦: ಚೇರಂಬಾಣೆ ಗೌಡ ಸಮಾಜ ಹಾಗೂ ಗೌಡ ಯುವ ವೇದಿಕೆ ವತಿಯಿಂದ ಪ್ರಥಮ ವರ್ಷದ ಜಿಲ್ಲಾ ಮಟ್ಟದ ಗೌಡ ಜನಾಂಗದ ಕೇರಂ ಪಂದ್ಯಾವಳಿ ಆಯೋಜಿಸಲಾಗಿದೆ ಎಂದು ಆಯೋಜಕರು ತಿಳಿಸಿದರು.
ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಿರ್ದೇಶಕ ಕೂರನ ಪ್ರವೀಣ್, ಗೌಡ ಸಮುದಾಯದವರಿಗಾಗಿ ಪಂದ್ಯಾಟ ಆಯೋಜನೆ ಮಾಡಲಾಗಿದ್ದು, ೧೫ ವರ್ಷದೊಳಗಿನ ಹಾಗೂ ೧೫ ವರ್ಷ ಮೇಲ್ಪಟ್ಟ ಸಿಂಗಲ್ಸ್ ಹಾಗೂ ಡಬಲ್ಸ್ ವಿಭಾಗದಲ್ಲಿ ಪಂದ್ಯ ನಡೆಯಲಿದೆ. ವಿಜೇತರಿಗೆ ರೂ. ೧೦ ಸಾವಿರ, ದ್ವಿತೀಯ ಸ್ಥಾನ ಪಡೆಯುವವರಿಗೆ ರೂ. ೫ ಸಾವಿರ ನಗದು ಬಹುಮಾನ ನೀಡಲಾಗುವುದು. ಕಾರುಗುಂದ ಗೌಡ ಸಮಾಜದಲ್ಲಿ ತಾ. ೧೫ ರಂದು ಕಾರ್ಯಕ್ರಮ ನಡೆಯಲಿದೆ. ಬೆಳಿಗ್ಗೆ ೯ ಗಂಟೆಗೆ ಗೌಡ ಸಮಾಜದ ಉಪಾಧ್ಯಕ್ಷ ಕೇಕಡ ದಿನೇಶ್ ಹಾಗೂ ಉದ್ಯಮಿ ಎಡಿಕೇರಿ ಪ್ರಸನ್ನ ಕುಶಾಲಪ್ಪ ಉದ್ಘಾಟಿಸಲಿದ್ದಾರೆ. ಸಮಾರೋಪ ಸಮಾರಂಭದಲ್ಲಿ ಗೌಡ ಮಹಿಳಾ ಒಕ್ಕೂಟದ ಅಧ್ಯಕ್ಷೆ ಕಡ್ಲೇರ ತುಳಸಿ ಮೋಹನ್, ಕಾರುಗುಂದ ಗೌಡ ಸಮಾಜ ಅಧ್ಯಕ್ಷ ಕೊಡಪಾಲು ಗಣಪತಿ, ಕರ್ನಾಟಕ ಒಕ್ಕಲಿಗರ ಸಂಘದ ನಿರ್ದೇಶಕ ಹರಪಳ್ಳಿ ರವೀಂದ್ರ, ಉದ್ಯಮಿ ಎಡಿಕೇರಿ ಪ್ರಸನ್ನ, ಗೌಡ ಸಮಾಜ ಉಪಾಧ್ಯಕ್ಷ ಕೇಕಡ ದಿನೇಶ್, ಕಾರ್ಯದರ್ಶಿ ಬೆಳ್ಯನ ಚಂದ್ರಪ್ರಕಾಶ್, ದಸರಾ ಕ್ರೀಡಾ ಕಾರ್ಯದರ್ಶಿ ಕಾವೇರಿಮನೆ ಭರತ್ ಭಾಗವಹಿಸಲಿದ್ದಾರೆ. ಸ್ವಾಮಿ ವಿವೇಕಾನಂದ ಸದ್ಭಾವನಾ ಪ್ರಶಸ್ತಿ ಪುರಸ್ಕೃತ ಬಾಳಾಡಿ ದಿಲೀಪ್ ಕುಮಾರ್, ರಾಜ್ಯ ಪ್ರಶಸ್ತಿ ಪುರಸ್ಕೃತೆ ತುಳಸಿ ಮೋಹನ್ ಅವರನ್ನು ಸನ್ಮಾನಿಸಲಾಗುವುದು ಎಂದು ವಿವರಿಸಿದರು.
ಅಧ್ಯಕ್ಷ ಪಾರೆಮಜಲು ಪ್ರದೀಪ್ ಮಾತನಾಡಿ, ಮೊದಲ ವರ್ಷದ ಪ್ರಯತ್ನ ಇದಾಗಿದ್ದು, ಸರ್ವರ ಸಹಕಾರ ಬೇಕಿದೆ. ಚೇರಂಬಾಣೆ ಗೌಡ ಯುವ ವೇದಿಕೆಯ ವತಿಯಿಂದ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿ ಏಪ್ರಿಲ್ ೩ರಿಂದ ೫ ರವರೆಗೆ ನಡೆಯಲಿದೆ ಎಂದರು. ಚೇರಂಬಾಣೆ ಅರುಣ ಜೂನಿಯರ್ ಕಾಲೇಜು ಮೈದಾನದಲ್ಲಿ ನಡೆಯುವ ಪಂದ್ಯಾವಳಿಯಲ್ಲಿ ಬೆಟ್ಟಗೇರಿ, ಆವಂದೂರು, ಅರವತ್ತೊಕ್ಲು, ಅಪ್ಪಂಗಳ, ತಾಳತ್ತಮನೆ, ಕಾರುಗುಂದ, ಕಡಿಯತ್ತೂರು, ಕೊಟ್ಟೂರು, ಬಕ್ಕ, ಬೆಟ್ಟತ್ತೂರು, ಕೊಳಗದಾಳು, ಚೇರಂಬಾಣೆ, ಬೇಂಗೂರು, ಬಿ.ಬಾಡಗ, ಕೋಪಟ್ಟಿ, ಚರಂದೆಟ್ಟಿ, ಸಿಂಗತ್ತೂರು, ಕೋರಂಗಾಲ, ಭಾಗಮಂಡಲ, ಕರಿಕೆ, ಸಣ್ಣ ಪುಲಿಕೋಟು, ದೊಡ್ಡ ಪುಲಿಕೋಟು, ಮರಗೋಡು, ಕಾಂತೂರು, ಬಿಳಿಗೇರಿ, ಮೇಕೇರಿ, ಮಡಿಕೇರಿ, ಮೂರ್ನಾಡು, ನಾಪೋಕ್ಲು, ಹೊದ್ದೂರು, ಕುಂಬಳದಾಳು ಗ್ರಾಮಗಳ ಗೌಡ ಜನಾಂಗದ ಆಟಗಾರರಿಗೆ ಬಿಡ್ಡಿಂಗ್ ಆಧಾರದಲ್ಲಿ ಸ್ಪರ್ಧಿಸಲು ಅವಕಾಶವಿದೆ ಎಂದು ತಿಳಿಸಿದರು.
ಗೋಷ್ಠಿಯಲ್ಲಿ ಕಾರ್ಯದರ್ಶಿ ಯಶ್ವಂತ್ ಕೇಟೋಳಿ, ಖಜಾಂಜಿ ನಿಖಿಲ್ ಕೊಡಪಾಲು, ನಿರ್ದೇಶಕ ನಮಿತ್ ಮುಕ್ಕಾಟಿ, ಕೂರನ ಜೀವನ್ ಹಾಜರಿದ್ದರು.