ಸಿದ್ದಾಪುರ, ಫೆ. ೧೦: ಮಾಲ್ದಾರೆ ಗ್ರಾಮದಲ್ಲಿ ನೂತನ ಅಂಚೆ ಕಚೇರಿಯನ್ನು ಮಾಲ್ದಾರೆಯ ಸಮಾಜ ಸೇವಕ ಹಾಗೂ ಹಿರಿಯರಾದ ಮುಕ್ಕಾಟಿರ ಮಿಟ್ಟು ನಂಜಪ್ಪ ಹಾಗೂ ಮಾಲ್ದಾರೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಾಲತಿ ಉದ್ಘಾಟಿಸಿದರು.

ಈ ವೇಳೆ ಅಧ್ಯಕ್ಷೆ ಮಾಲತಿ ಮಾತನಾಡಿ, ಮಾಲ್ದಾರೆ ಗ್ರಾಮದಲ್ಲಿ ಈ ಹಿಂದೆ ಇದ್ದ ಅಂಚೆ ಕಚೇರಿಯು ಹಳೆಯ ಕಟ್ಟಡದ ಬಹುಮಹಡಿಯಲ್ಲಿ ಇದ್ದ ಕಾರಣ ವಯಸ್ಸಾದವರಿಗೆ, ವಿಶೇಷಚೇತನರಿಗೆ ಕಚೇರಿಗೆ ತೆರಳಲು ಸಮಸ್ಯೆ ಎದುರಾಗಿತ್ತು. ಈ ಹಿನ್ನೆಲೆಯಲ್ಲಿ ತಾನು ಗ್ರಾಮ ಪಂಚಾಯಿತಿ ಆಡಳಿತ ಮಂಡಳಿಯ ಗಮನಕ್ಕೆ ತಂದು, ಆಡಳಿತ ಮಂಡಳಿ ಸದಸ್ಯರ ಸಹಕಾರ ಮತ್ತು ಗ್ರಾಮಸ್ಥರ ಸಹಕಾರದಿಂದ ಮಾಲ್ದಾರೆ ಗ್ರಾಮದ ಪಟ್ಟಣದಲ್ಲಿ ಸುಸಜ್ಜಿತವಾದ ನೂತನ ಅಂಚೆ ಕಚೇರಿಯನ್ನು ಸಾರ್ವಜನಿಕರಿಗಾಗಿ ನಿರ್ಮಿಸಿ ಲೋಕಾರ್ಪಣೆ ಮಾಡಲಾಗಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಮಾಲ್ದಾರೆ ಗ್ರಾಮ ಪಂಚಾಯಿತಿ ಸದಸ್ಯರುಗಳಾದ, ಮೊಹಮ್ಮದ್ ಅಲಿ, ಸರಸ್ವತಿ, ಪುಷ್ಪ, ಶೋಭಾ, ಇಸ್ಮಾಯಿಲ್ ಹಾಗೂ ಅಂಚೆ ಇಲಾಖೆಯ ಅಧಿಕಾರಿಗಳಾದ ಮಂಜುನಾಥ್, ಪ್ರಮೀಳಾ, ಸೋಮ, ಗ್ರಾಮದ ಪ್ರಮುಖರಾದ ಮುಕ್ಕಾಟಿರ ಬೋಪಣ್ಣ, ರವಿ, ಸೂದನ ಯತೀಶ್, ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ಪುಷ್ಪ, ಹಾಗೂ ಗ್ರಾಮ ಪಂಚಾಯಿತಿ ಸಿಬ್ಬಂದಿಗಳು ಹಾಜರಿದ್ದರು. ಕಲಾವಿದ ಬಾವ ಮಾಲ್ದಾರೆ, ಸ್ವಾಗತಿಸಿ, ವಂದಿಸಿದರು.