ಮಡಿಕೇರಿ, ಫೆ. ೧೦; ಮಲಯಾಳಂ ಭಾಷೆಯಲ್ಲಿ ಪ್ರಚಾರ ಮಾಡುತ್ತಾ ಹಣ್ಣಿನ ವ್ಯಾಪಾರ ಮಾಡುತ್ತಿ ದ್ದವರಿಗೆ ಕನ್ನಡದಲ್ಲಿ ಪ್ರಚಾರ ಮಾಡುವಂತೆ ನೀಡಿದ ಸಲಹೆ ಮೇರೆಗೆ ಕೂಡಲೇ ಕನ್ನಡ ಭಾಷೆಯನ್ನು ಅಳವಡಿಸಿಕೊಂಡು ವ್ಯಾಪಾರ ಆರಂಭಿಸಿದ ಪ್ರಸಂಗ ಇಂದು ಕುಶಾಲನಗರದಲ್ಲಿ ನಡೆಯಿತು. ಕೇರಳದ ವಾಹನವೊಂದರಲ್ಲಿ ಧ್ವನಿವರ್ಧಕದ ಮೂಲಕ ಮಲಯಾಳಂ ಭಾಷೆಯಲ್ಲಿ ಪ್ರಚಾರ ಮಾಡುತ್ತಾ ದ್ರಾಕ್ಷಿ ಹಣ್ಣು ವ್ಯಾಪಾರ ಮಾಡಲಾಗುತ್ತಿತ್ತು. ಇದನ್ನು ಗಮನಿಸಿದ ಕನ್ನಡ ಜಾಗೃತಿ ಸಮಿತಿ ಸದಸ್ಯ ಬಿ.ಎಸ್.ಲೋಕೇಶ್ ಸಾಗರ್; ಕರ್ನಾಟಕದಲ್ಲಿ ಅನ್ಯ ಭಾಷೆಯಲ್ಲಿ ಪ್ರಚಾರ ಮಾಡುವಂತಿಲ್ಲ ಎಂದು ವ್ಯಾಪಾರಿಗಳ ಗಮನಕ್ಕೆ ತಂದಿದ್ದಾರೆ. ಈ ಸಂದರ್ಭ ಈ ವಿಚಾರ ತಮಗೆ ತಿಳಿದಿಲ್ಲ ಎಂದು ಹೇಳಿದ ವ್ಯಾಪಾರಿಗಳು ಕ್ಷಮೆ ಕೇಳಿದ್ದಲ್ಲದೆ ಧ್ವನಿವರ್ದಕ ಸ್ಥಗಿತಗೊಳಿಸಿ ಕನ್ನಡದಲ್ಲಿ ಹೇಳಿಕೊಡುವಂತೆ ಲೋಕೇಶ್ ಅವರಲ್ಲಿ ಭಿನ್ನವಿಸಿಕೊಂಡಿದ್ದಾರೆ. ಅವರ ಕೋರಿಕೆಯಂತೆ ಕನ್ನಡದಲ್ಲಿ ಅವರದ್ದೇ ಧ್ವನಿಯಲ್ಲಿ ಮುದ್ರಿಸಿ ಕೊಟ್ಟಿದ್ದಾರೆ. ಅದನ್ನು ಧ್ವನಿವರ್ಧಕಕ್ಕೆ ಅಳವಡಿಸಿದಲ್ಲದೆ ಮೊದಲು ಅಳವಡಿಸಿದ್ದ ಮಲಯಾಳಂ ಭಾಷೆಯ ಫಲಕವನ್ನು ತೆಗೆದು ಕನ್ನಡದಲ್ಲಿ ಹೊಸದಾಗಿ ಬರೆಯಿಸಿ ವ್ಯಾಪಾರ ಆರಂಭಿಸಿದರು. ಹೊರ ಜಿಲ್ಲೆ, ರಾಜ್ಯಗಳಿಂದ ವ್ಯಾಪಾರ ಮಾಡಿಕೊಂಡು ಬರುವವರು ಇವರುಗಳ ಹಾಗೆ ಅನುಸರಿಸಿಕೊಂಡು ಹೋದಲ್ಲಿ ನಮ್ಮ ಕನ್ನಡಕ್ಕೆ ಒಂದಿಷ್ಟು ಗೌರವ ನೀಡಿದಂತಾಗುತ್ತದೆ..! -ಸಂತೋಷ್