ಮಡಿಕೇರಿ, ಫೆ. ೯; ಜಿಲ್ಲೆಯ ಪ್ರಮುಖ ಪ್ರವಾಸಿ ತಾಣವಾದ ಮಾಂದಲ್‌ಪಟ್ಟಿಗೆ ಪ್ರವಾಸಿಗರನ್ನು ಕರೆದೊಯ್ಯುವ ವಾಹನಗಳಿಂದ ಹೆಚ್ಚಿನ ಬಾಡಿಗೆ ವಸೂಲಿ ಮಾಡುತ್ತಿರುವ ಬಗ್ಗೆ ದೂರುಗಳು ಬರುತ್ತಿರುವ ಹಿನ್ನೆಲೆಯಲ್ಲಿ ಅಲ್ಲಿಗೆ ಮುಂಗಡ ಪಾವತಿ ಮಾದರಿ(ಪ್ರಿ ಪೇಯ್ಡ್) ವಾಹನಗಳ ವ್ಯವಸ್ಥೆ ಮಾಡುವಂತೆ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿ ಅಧ್ಯಕ್ಷರೂ ಆಗಿರುವ ಜಿಲ್ಲಾಧಿಕಾರಿ ಎಸ್.ಜೆ. ಸೋಮಶೇಖರ್ ಸಂಬAಧಿಸಿದ ಪ್ರವಾಸೋದ್ಯಮ ಇಲಾಖಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ತಮ್ಮ ಅಧ್ಯಕ್ಷತೆಯಲ್ಲಿ ನಡೆದ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು; ಮಾಂದಲ್‌ಪಟ್ಟಿಗೆ ತೆರಳುವ ಬಾಡಿಗೆ ವಾಹನದಾರರು ಪ್ರವಾಸಿಗರಿಂದ ಹೆಚ್ಚಿನ ಬಾಡಿಗೆ ಪಡೆಯುತ್ತಿರುವ ಬಗ್ಗೆ ದೂರುಗಳು ಕೇಳಿಬರುತ್ತಿರುವ ಹಿನ್ನೆಲೆಯಲ್ಲಿ ಪ್ರಿ ಪೇಯ್ಡ್ ಮಾದರಿಯಲ್ಲಿ ಬಾಡಿಗೆ ವಾಹನ ನಿಗದಿ ಮಾಡುವಂತೆ ಹೇಳಿದರು. ಈ ಸಂದರ್ಭ ಮಾತನಾಡಿದ ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ನಾಗೇಂದ್ರ ಪ್ರಸಾದ್ ದುಬಾರೆಯಲ್ಲಿ ಪ್ರಿ ಪೇಯ್ಡ್ ಮಾದರಿಯಲ್ಲಿ ಬೋಟ್‌ಗಳು ಸಂಚರಿಸುತ್ತಿವೆ. ಅದೇ ಮಾದರಿಯಲ್ಲಿ ಮಾಂದಲ್ ಪಟ್ಟಿಗೂ ವ್ಯವಸ್ಥೆ ಮಾಡಬಹುದೆಂದು ಸಲಹೆ ಮಾಡಿದರು.
ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸೆಂಥಿಲ್ ಕುಮಾರ್ ಮಾತನಾಡಿ; ಮಾಂದಲ್‌ಪಟ್ಟಿಯಲ್ಲಿ ಸುಗಮ ಸಾರಿಗೆ ಸಂಚಾರ ವ್ಯವಸ್ಥೆ ಕಲ್ಪಿಸುವ ನಿಟ್ಟಿನಲ್ಲಿ ಸಣ್ಣ ಸಣ್ಣ ಕಲ್ಲುಗಳನ್ನು ಅಳವಡಿಸಿ ರಸ್ತೆ ನಿರ್ಮಾಣ ಮಾಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಜಿಲ್ಲೆಯಲ್ಲಿನ ಹೊಸ ಹೋಂ ಸ್ಟೇಗಳ ನೋಂದಣಿ ಮತ್ತು ಈಗಾಗಲೇ ಇರುವ ಹೋಂ ಸ್ಟೇಗಳಿಗೆ ಪರವಾನಗಿ ನೀಡುವುದು ಹಾಗೂ ಈಗಾಗಲೇ ನೋಂದಾಯಿಸಿರುವ ಹೋಂಸ್ಟೇಗಳಿಗೆ ನವೀಕರಣವನ್ನು ಮಾರ್ಚ್ ೩೧ ರೊಳಗೆ ಪೂರ್ಣಗೊಳಿಸುವಂತೆ ಜಿಲ್ಲಾಧಿಕಾರಿಯೂ ಆಗಿರುವ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಸೂಚನೆ ನೀಡಿದರು.
ಆನ್‌ಲೈನ್ ಮೂಲಕ ಪರವಾನಗಿ ನೋಂದಣಿ ಹಾಗೂ ನವೀಕರಣ ಕಾರ್ಯವು ಸ್ಥಗಿತವಾಗಿದ್ದು, ತಾತ್ಕಾಲಿಕವಾಗಿ ಆಫ್‌ಲೈನ್ ಮೂಲಕ ಸ್ಥಳ ಪರಿಶೀಲಿಸಿ ಅನುಮೋದನೆ ಮಾಡಬೇಕಿದೆ. ಆ ನಿಟ್ಟಿನಲ್ಲಿ ಅಗತ್ಯ ಕ್ರಮವಹಿಸಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಾತನಾಡಿದ ಪ್ರವಾಸೋದ್ಯಮ ಇಲಾಖೆ ಉಪ ನಿರ್ದೇಶಕರು ಹಾಗೂ ಉಪ ವಿಭಾಗಾಧಿಕಾರಿ ನಿತಿನ್ ಚಕ್ಕಿ ಅವರು ಫೆಬ್ರವರಿ ೭ ರವರೆಗೆ ೧೦೦ ಹೊಸ ಹೋಂ ಸ್ಟೇಗಳಿಗೆ ಪರವಾನಗಿ ನೀಡಲು ಅರ್ಜಿ ಸಲ್ಲಿಕೆಯಾಗಿವೆ. ಹಾಗೆಯೇ ೧೮೦ ಹೋಂ ಸ್ಟೇಗಳ ನವೀಕರಣಕ್ಕೆ ಅರ್ಜಿ ಸಲ್ಲಿಕೆಯಾಗಿದೆ ಎಂದು ಮಾಹಿತಿ ನೀಡಿದರು.
ಈ ಬಗ್ಗೆ ಮಾತನಾಡಿದ ಜಿಲ್ಲಾಧಿಕಾರಿ ಸೋಮಶೇಖರ್ ಅವರು ಖುದ್ದಾಗಿ ಸ್ಥಳಕ್ಕೆ ತೆರಳಿ, ನೋಂದಣಿ ಹಾಗೂ ನವೀಕರಣ ಕಾರ್ಯವನ್ನು ಕೈಗೊಳ್ಳಬೇಕು. ಈಗಾಗಲೇ ಸಲ್ಲಿಕೆಯಾಗಿರುವ ಅರ್ಜಿಗಳಿಗೆ ಮಾರ್ಚ್ ಅಂತ್ಯದೊಳಗೆ ಪರಿಶೀಲಿಸಿ ಅರ್ಜಿ ವಿಲೇವಾರಿಗೆ ಕ್ರಮವಹಿಸುವಂತೆ ಸೂಚಿಸಿದರು. ೪ಏಳನೇ ಪುಟಕ್ಕೆ
(ಮೊದಲ ಪುಟದಿಂದ) ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ನಾಗೇಂದ್ರ ಪ್ರಸಾದ್, ಹೋಂ ಸ್ಟೇ ಅಸೋಸಿಯೇಷನ್ ಅಧ್ಯಕ್ಷರಾದ ಮೋಂತಿ ಗಣೇಶ್ ಮಾತನಾಡಿ, ಕೊರೊನಾ ಸಂದರ್ಭದಲ್ಲಿ ಹಲವು ಹೋಂ ಸ್ಟೇಗಳು ಮುಚ್ಚಿ ಹೋದವು. ಆ ಸಂದರ್ಭದಲ್ಲಿ ಬದುಕು ನಡೆಸುವುದೇ ದುಸ್ತರವಾಗಿತ್ತು ಎಂದು ಹೇಳಿದರು.
ಕೂರ್ಗ್ ವಿಲೇಜ್ ಅಭಿವೃದ್ದಿ ಸಂಬAಧಿಸಿದAತೆ ಮಾಹಿತಿ ಪಡೆದ ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್ ಅವರು ನಗರಸಭೆ ಹಾಗೂ ತೋಟಗಾರಿಕೆ ಇಲಾಖೆ ಅಧಿಕಾರಿಗಳು ಆಸಕ್ತರನ್ನು ಒಳಗೊಂಡ ಉಪ ಸಮಿತಿ ರಚಿಸುವಂತೆ ನಿರ್ದೇಶನ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಕೊಡಗು ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಉಪಾಧ್ಯಕ್ಷ ನವೀನ್ ಅಂಬೆಕಲ್ಲು ಅವರು ೯೮ ಲಕ್ಷ ರೂ. ಖರ್ಚು ಮಾಡಿ ಕೂರ್ಗ್ ವಿಲೇಜ್‌ನ್ನು ನಿರ್ಮಿಸಲಾಗಿದೆ. ಅಲ್ಲಿ ಮತ್ತೆ ವೆಚ್ಚ ಮಾಡುವುದಕ್ಕಿಂತ ರಾಜಾಸೀಟನ್ನು ಅಭಿವೃದ್ಧಿ ಪಡಿಸುವುದು ಒಳಿತು ಎಂದು ಸಲಹೆ ಮಾಡಿದರು.
ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಶಶಿಧರ ಅವರು ಸ್ವಸಹಾಯ ಗುಂಪುಗಳಿಗೆ ಹಾಗೂ ವಿವಿಧ ಇಲಾಖೆಗಳಿಗೆ ಮಳಿಗೆ ನೀಡಲು ನಿರ್ಧರಿಸಲಾಗಿತ್ತು, ಆ ಸಂದರ್ಭದಲ್ಲಿ ಯಾರೂ ಸಹ ಮುಂದೆ ಬರಲಿಲ್ಲ. ಸದ್ಯ ಆರ್ಟ್ ಗ್ಯಾಲರಿ, ಮತ್ತಿತರ ಮಳಿಗೆಯನ್ನು ಸ್ಥಾಪಿಸಲು ಉದ್ದೇಶಿಸಲಾಗಿದೆ ಎಂದರು.
ಮೋAತಿ ಗಣೇಶ್ ಅವರು ಮಾತನಾಡಿ ಕೂರ್ಗ್ ವಿಲೇಜ್ ಬಳಕೆಯಾಗಬೇಕು. ಜೊತೆಗೆ ನೆಹರು ಮಂಟಪವನ್ನು ಅಭಿವೃದ್ಧಿ ಪಡಿಸಬೇಕು ಎಂದು ಸಲಹೆ ನೀಡಿದರು.
ರಾಜಾಸೀಟು ಅಭಿವೃದ್ಧಿ ಸಮಿತಿಯಲ್ಲಿ ಆಸಕ್ತರನ್ನು ಆಹ್ವಾನಿಸಬೇಕು. ಉಪ ಸಮಿತಿ ರಚನೆ ಮಾಡಿ ಪ್ರವಾಸಿ ಕೇಂದ್ರವನ್ನು ಮತ್ತಷ್ಟು ಅಭಿವೃದ್ಧಿ ಪಡಿಸಲು ಮುಂದಾಗಬೇಕು. ನಗರಸಭೆ, ತೋಟಗಾರಿಕೆ ಇಲಾಖೆ, ಉಪ ವಿಭಾಗಾಧಿಕಾರಿಯವರು ಹಾಗೆಯೇ ಸಂಚಾರಿ ಪೊಲೀಸರು ಹಾಗೂ ಸಾರ್ವಜನಿಕರನ್ನು ಒಳಗೊಂಡ ಉಪ ಸಮಿತಿಯನ್ನು ರಚನೆ ಮಾಡಿಕೊಂಡು ರಾಜಾಸೀಟು ಅಭಿವೃದ್ಧಿಗೆ ಮುಂದಾಗಬೇಕು. ರಾಜಾಸೀಟಿನಲ್ಲಿ ಪುಟಾಣಿ ರೈಟu ಮೈಸೂರಿನ ರೈಲ್ವೆ ಅಧಿಕಾರಿಗಳ ಜೊತೆ ಚರ್ಚಿಸಿ ತ್ವರಿತ ಕ್ರಮ ಕೈಗೊಳ್ಳಲಾಗುವುದು ಎಂದರು.
ಕೊಡವ ಹೆರಿಟೇಜ್ ಸೆಂಟರ್ ಇನ್ನೂ ಪೂರ್ಣಗೊಳ್ಳದಿರುವುದಕ್ಕೆ ತೀವ್ರ ಅತೃಪ್ತಿ ವ್ಯಕ್ತಪಡಿಸಿದ ಕೊಡಗು ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷ ನಾಗೇಂದ್ರ ಪ್ರಸಾದ್ ಅವರು ಪ್ರತೀ ವರ್ಷ ಚರ್ಚೆಗೆ ಬರುತ್ತಿದೆ. ಆದರೆ ಕೆಲಸ ಆಗಿಲ್ಲ ಎಂದು ದೂರಿದರು.
ಭಾರತ ಸರ್ಕಾರದ ನಾಗರಿಕ ಸೇವೆಯಲ್ಲಿದ್ದ ಕೊಡಗು ಜಿಲ್ಲೆಯ ರತಿ ವಿನೇಜಾ ಅವರ ಪ್ರಯತ್ನದಿಂದ ಕೊಡವ ಹೆರಿಟೇಜ್ ಸ್ಥಾಪನೆಗೆ ಮುಂದಾಗಲಾಗಿತ್ತು. ಆದರೆ ಈ ಕಾಮಗಾರಿ ಪೂರ್ಣಗೊಂಡಿಲ್ಲ, ಹೋಂ ಮೇಡ್ ವೈನ್, ಚಾಕಲೇಟ್ ತಯಾರಿಕೆ ಹಾಗೂ ಸ್ಪೆöÊಸಸ್ ಹೆಸರಿನಲ್ಲಿ ಕೊಡಗು ಜಿಲ್ಲೆಯಲ್ಲಿ ಸುಳ್ಳು ಹೇಳಿ ವ್ಯಾಪಾರ ಮಾಡುತ್ತಿದ್ದು, ಇದಕ್ಕೆ ಕಡಿವಾಣ ಬೀಳಬೇಕು ಎಂದು ಮೋಂತಿ ಗಣೇಶ್ ಮನವಿ ಮಾಡಿದರು.
ಕೊಡಗು ಸಿಲ್ಕ್ ಹೆಸರಿನಲ್ಲಿ ಸೀರೆಯನ್ನು ಮಾರುವುದು ಕಂಡು ಬರುತ್ತಿದೆ. ಇದಕ್ಕೆ ಅರ್ಥವಿದೆಯೇ ಎಂದು ಕರುಂಬಯ್ಯ ಅವರು ಗಮನ ಸೆಳೆದರು. ಕೊಡಗು ಹೋಂ ಮೇಡ್ ಹೆಸರಿನಲ್ಲಿ ಕಡಿಮೆ ಬೆಲೆಗೆ ವೈನ್ ಮಾರಾಟ ಮಾಡುತ್ತಿದ್ದಾರೆ. ಈ ಬಗ್ಗೆ ಗಮನಹರಿಸಬೇಕು. ಆರೋಗ್ಯ ಸುರಕ್ಷತೆಗೆ ಒತ್ತು ನೀಡಬೇಕು ಎಂದು ಜಿಲ್ಲಾಧಿಕಾರಿ ಸಲಹೆ ಮಾಡಿದರು.
ಅಬಕಾರಿ ಇಲಾಖೆ ಇನ್ಸ್ಪೆಕ್ಟರ್ ಅಬ್ರಾಹಂ ಚೇತನ್ ಅವರು ಹೋಂ ಮೇಡ್ ವೈನ್‌ನಲ್ಲಿ ಶೇ.,೬.೮ ರಷ್ಟು ಆಲ್ಕೋ ಹಾಲ್ ಅಂಶ ಇರುವುದು ಕಂಡುಬAದಿದೆ. ಹೋಂ ಮೇಡ್ ಚಾಕಲೇಟ್ ಸಂಬAಧಿಸಿದAತೆ ತಯಾರಿಕಾ ದಿನಾಂಕ ಹಾಗೂ ವರ್ಷ, ತಯಾರಿಕೆ ಸಂಸ್ಥೆಯ ಹೆಸರು, ಎಕ್ಸ್ಪೈಯರಿ ಡೇಟ್, ಪರವಾನಗಿ ಮತ್ತಿತರ ಅಂಶಗಳು ಒಳಗೊಂಡಿರಬೇಕು ಎಂದು ಹೇಳಿದರು.
ಕೊಡಗು ಜಿಲ್ಲಾ ಕೇಂದ್ರ ಮಡಿಕೇರಿಗೆ ರಾಜಾಸೀಟು ವೀಕ್ಷಣೆಗೆ ವಾರಾಂತ್ಯದಲ್ಲಿ ಸಾವಿರಾರು ಜನರು ಆಗಮಿಸುತ್ತಾರೆ. ಇದರಿಂದ ಪ್ರವಾಸಿ ವಾಹನಗಳ ನಿಲುಗಡೆಗೆ ತೊಂದರೆಯಾಗಿದೆ. ಈ ಬಗ್ಗೆ ಗಮನಹರಿಸಬೇಕು ಎಂದು ನಾಗೇಂದ್ರ ಪ್ರಸಾದ್ ಅವರು ಹೇಳಿದರು.
ಕಳೆದ ೧೫ ವರ್ಷಗಳಿಂದ ಇದೇ ಮಾಹಿತಿ ಹೇಳಿಕೊಂಡು ಬರಲಾಗಿದೆ. ಆದರೆ ಕೆಲಸಗಳು ಆಗಿಲ್ಲ ಎಂದು ಸಮಿತಿ ಸದಸ್ಯರೊಬ್ಬರು ಅತೃಪ್ತಿ ವ್ಯಕ್ತಪಡಿಸಿದರು.
ನಗರಾಭಿವೃದ್ಧಿ ಯೋಜನಾ ಶಾಖೆಯ ಯೋಜನಾ ನಿರ್ದೇಶಕ ಬಿ.ಬಸಪ್ಪ, ನಗರೋತ್ಥಾನ ಯೋಜನೆಯಡಿ ಟೆಂಡರ್ ಆಗಿದ್ದು, ಶೀಘ್ರ ಕಾಮಗಾರಿ ಆರಂಭಿಸಲಾಗುತ್ತದೆ ಎಂದು ಹೇಳಿದರು.
ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್ ಅವರು ವಾಹನ ನಿಲುಗಡೆಗೆ ಅಗತ್ಯ ಕ್ರಮ ಕೈಗೊಳ್ಳಬೇಕು. ಆದಷ್ಟು ಕಾಮಗಾರಿಯನ್ನು ಶೀಘ್ರ ಆರಂಭಿಸುವAತೆ ನಿರ್ದೇಶನ ನೀಡಿದರು.
ಜಿಲ್ಲೆಯಲ್ಲಿ ಪ್ಲಾಸ್ಟಿಕ್‌ನ್ನು ಹಂತ ಹಂತವಾಗಿ ರದ್ದುಗೊಳಿಸಬೇಕಿದೆ. ಮಾರ್ಚ್, ೧ ರಿಂದ ಏಪ್ರಿಲ್ ೧ ರ ತನಕ ಸ್ವಚ್ಚ ಹಾಗೂ ಸುಂದರ ಕೊಡಗು ಹೆಸರಿನಲ್ಲಿ ಅಭಿಯಾನ ಆಯೋಜಿಸುವಂತೆ ಹೇಳಿದರು.
ಜಿಲ್ಲಾ ಚೇಂಬರ್ ಆಫ್ ಕಾಮರ್ಸ್ನ ನಿರ್ದೇಶಕÀ ಶ್ಯಾಮ್ ಅವರು ಕಲ್ಯಾಣ ಮಂಟಪದಲ್ಲಿಯೂ ಸಹ ಪ್ಲಾಸ್ಟಿಕ್ ಬಳಸದಂತೆ ಜಾಗೃತಿ ಮೂಡಿಸಬೇಕು. ಕುಟ್ಟ ಹಾಗೂ ಮಾಕುಟ್ಟ ಗಡಿ ಪ್ರದೇಶದಲ್ಲಿ ವಾಹನಗಳ ತಪಾಸಣೆ ಮಾಡಿ ಪರಿಸರ ಶುಚಿತ್ವಕ್ಕೆ ಒತ್ತು ನೀಡಬೇಕು ಎಂದು ಸಲಹೆ ಮಾಡಿದರು.
ನಾಗೇಂದ್ರ ಪ್ರಸಾದ್ ಮಾತನಾಡಿ, ಕುಶಾಲನಗರದಲ್ಲಿ ತಾವರೆಕೆರೆಯನ್ನು ಪ್ರವಾಸೋದ್ಯಮವಾಗಿ ಅಭಿವೃದ್ಧಿ ಪಡಿಸಬೇಕು. ಅಬ್ಬಿಪಾಲ್ಸ್, ತೂಗುಸೇತುವೆ ಸರಿಪಡಿಸುವಂತಾಗಬೇಕು ಎಂದು ಸಲಹೆ ಮಾಡಿದರು. ಜಿಲ್ಲೆಯಲ್ಲಿ ಡ್ರಗ್ಸ್ ನಿಯಂತ್ರಿಸುವ ಸಂಬAಧ ಹೋಂಸ್ಟೇಗಳ ಪರಿಶೀಲನೆ ಮಾಡಬೇಕು ಎಂದು ಉಪ ವಿಭಾಗಾಧಿಕಾರಿ ಸಲಹೆ ಮಾಡಿದರು. ಈ ಕುರಿತು ಪ್ರತಿಕ್ರಿಯಿಸಿದ ಶ್ಯಾಮ್ ಅವರು ನವೀಕರಣ ಸಂದರ್ಭದಲ್ಲಿ ಪರಿಶೀಲಿಸಲಾಗುತ್ತಿದೆ ಎಂದು ಹೇಳಿದರು.
ದುಬಾರೆಯಲ್ಲಿನ ಆನೆ ಶಿಬಿರ ವೀಕ್ಷಣೆಗೆ ತೆರಳುವ ಸಂದರ್ಭದಲ್ಲಿ ಸಾರ್ವಜನಿಕರಿಂದ ಪ್ರವೇಶ ಶುಲ್ಕವನ್ನು ಹೆಚ್ಚು ತೆಗೆದುಕೊಳ್ಳಲಾಗುತ್ತಿದ್ದು, ಇದನ್ನು ಕಡಿಮೆ ಮಾಡಬೇಕು ಎಂದು ಸಮಿತಿ ಸದಸ್ಯರೊಬ್ಬರು ಹೇಳಿದರು.
ಲೋಕೋಪಯೋಗಿ ಇಲಾಖೆ ಕಾರ್ಯಪಾಲಕ ಇಂಜಿನಿಯರ್ ಇಬ್ರಾಹಿಂ ಮಾತನಾಡಿ, ದುಬಾರೆಯಲ್ಲಿ ತೂಗುಸೇತುವೆ ನಿರ್ಮಿಸುವ ಸಂಬAಧ ಟೆಂಡರ್ ಆಗಿದ್ದು, ಕಾರ್ಯಾದೇಶ ನೀಡಬೇಕಿದೆ ಎಂದು ಹೇಳಿದರು. ಟೂರ್ ಅಂಡ್ ಟ್ರಾವಲ್ ಅಸೋಸಿಯೇಷನ್ ಅಧ್ಯಕ್ಷರಾದ ಕುಪ್ಪಂಡ ವಸಂತ್ ಅವರು ಪ್ರವಾಸಿ ಸ್ಥಳಗಳಲ್ಲಿ ಸಾರ್ವಜನಿಕರಿಗೆ ಯಾವುದೇ ಕಿರಿಕಿರಿ ಉಂಟಾಗದAತೆ ಗಮನಹರಿಸಲಾಗುವುದು ಎಂದರು.
ಉಪ ಪೊಲೀಸ್ ವರಿಷ್ಠಾಧಿಕಾರಿ ಐ.ಪಿ.ಮೇದಪ್ಪ, ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ಸಚಿನ್, ಜಿಲ್ಲಾ ಪರಿಸರ ಅಧಿಕಾರಿ ರಘುರಾಮ್, ದುಬಾರೆ ರಿವರ್ ರ‍್ಯಾಪ್ಟಿಂಗ್ ಸದಸ್ಯ ವಿಶ್ವ ಇತರರು ಹಲವು ಮಾಹಿತಿ ನೀಡಿದರು. ಪ್ರವಾಸೋದ್ಯಮ ಇಲಾಖೆಯ ಸಮಾಲೋಚಕÀ ಜತಿನ್ ಬಿದ್ದಪ್ಪ ಇತರರು ಇದ್ದರು.