ಮಡಿಕೇರಿ, ಫೆ. ೯: ಚೇನಂಡ ಕೊಡವ ಕೌಟುಂಬಿಕ ಹಾಕಿ ಪಂದ್ಯಾವಳಿಯ ಫೈನಲ್‌ಗೆ ಮೇ ೨ ರಂದು ನಾಪೋಕ್ಲುವಿಗೆ ಬರಲು ಕೇಂದ್ರ ಕ್ರೀಡಾ ಸಚಿವರಾದ ಡಾ. ಮಾನ್ಸೂಕ್ ಲಕ್ಷö್ಮಣಭಾಯ್ ಮಾಂಡವೀಯ ಸಮ್ಮತಿ ಸೂಚಿಸಿದ್ದಾರೆ.

ಚೇನಂಡ ಕೊಡವ ಹಾಕಿ ಪಂದ್ಯಾವಳಿ ಸಮಿತಿಯ ಪ್ರಮುಖರ ನಿಯೋಗ ಇಂದು ನವದೆಹಲಿಯಲ್ಲಿ ಸಂಸದ ಯದುವೀರ್ ಒಡೆಯರ್ ಅವರ ನೇತೃತ್ವದಲ್ಲಿ ಕೇಂದ್ರ ಕ್ರೀಡಾ ಸಚಿವ ಮಾನ್ಸೂಕ್ ಮಾಂಡವೀಯ ಅವರನ್ನು ಭೇಟಿಯಾಗಿ ಕೊಡವ ಕೌಟುಂಬಿಕ ಹಾಕಿ ಪಂದ್ಯಾವಳಿಗೆ ಬರುವಂತೆ ಆಹ್ವಾನ ನೀಡಿದ ಸಂದರ್ಭ, ಇದಕ್ಕೆ ಸಚಿವರು ಸಮ್ಮತಿ ಸೂಚಿಸಿದ್ದಾರೆ. ಕೊಡವ ಕುಟುಂಬಗಳ ನಡುವಿನ ೨೬ ನೇ ವರ್ಷದ ಹಾಕಿ ಪಂದ್ಯಾವಳಿಗೆ ಖಂಡಿತಾ ಬರುವುದಾಗಿ ಹೇಳಿದ ಸಚಿವರು, ಕುಟುಂಬಗಳ ನಡುವೆ ಹಾಕಿ ಪಂದ್ಯಾವಳಿಯನ್ನು ಒಗ್ಗಟ್ಟು, ಬೆಸುಗೆಯಾಗಿ ರೂಪಿಸಿರುವುದು ಮಾದರಿಯಾಗಿದೆ ಎಂದು ಹೆಮ್ಮೆ ವ್ಯಕ್ತಪಡಿಸಿದರು.

ಇದೇ ಸಂದರ್ಭ ಚೇನಂಡ ಹಾಕಿ ಪಂದ್ಯಾವಳಿಯ ಬ್ರೋಷರ್‌ನ್ನೂ ಸಚಿವರಿಗೆ ನೀಡಲಾಯಿತು. ಕೊಡವ ಕೌಟುಂಬಿಕ ಹಾಕಿ ಕ್ರೀಡೆಗೆ ಎಲ್ಲಾ ರೀತಿಯ ಸಹಕಾರ ನೀಡುವುದಾಗಿ ಭರವಸೆ ನೀಡಿದ ಸಚಿವರು. ಕೊಡವ ಕೌಟುಂಬಿಕ ಹಾಕಿ ಕ್ರೀಡಾ ಪಂದ್ಯಾಟದ ಯಶಸ್ವಿ ಆಯೋಜನೆಗೆ ಶುಭಹಾರೈಸಿದರು.

ನವದೆಹಲಿಯಲ್ಲಿ ರಾಜ್ಯ ಸಭಾ ಸದಸ್ಯ ಅಜಯ್ ಮಖಾನ್ ಅವರನ್ನು ಭೇಟಿಯಾದ ಚೇನಂಡ ಕೊಡವ ಕೌಟುಂಬಿಕ ಹಾಕಿ ಪಂದ್ಯಾವಳಿಯ ಪ್ರಮುಖರು ಫೈನಲ್ ಪಂದ್ಯಾಟಕ್ಕೆ ಸಂಸದರನ್ನು ಆಹ್ವಾನಿಸಿದರು.

೧೦ ವರ್ಷಗಳ ಹಿಂದೆಯೇ ಕೊಡವ ಕೌಟುಂಬಿಕ ಹಾಕಿ ಪಂದ್ಯಾವಳಿಯ ಉದ್ದೇಶವನ್ನು ಶ್ಲಾಘಿಸಿ ಕೊಡಗಿನಲ್ಲಿ ಕ್ರೀಡೆಗೆ ಎಲ್ಲಾ ರೀತಿಯ ಸಹಕಾರ ನೀಡುವುದಾಗಿ ಹೇಳಿದ್ದನ್ನು ಸ್ಮರಿಸಿಕೊಂಡ ಅಜಯ್ ಮಖಾನ್ ಈ ಬಾರಿ ಕೊಡವ ಕೌಟುಂಬಿಕ ಹಾಕಿ ಪಂದ್ಯಾವಳಿಗೆ ಬರಲು ಸಮ್ಮತಿ ಸೂಚಿಸಿದರು.

ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು, ವೀರಾಜಪೇಟೆ ಶಾಸಕರಾದ ಎ.ಎಸ್. ಪೊನ್ನಣ್ಣ ಸಹಕಾರದಲ್ಲಿ ರಾಜ್ಯ ಸಭಾ ಸದಸ್ಯ ಅಜಯ್ ಮಖಾನ್ ಅವರನ್ನು ನವದೆಹಲಿಯಲ್ಲಿ ಚೇನಂಡ ಕುಟುಂಬಸ್ಥರ ನಿಯೋಗ ಭೇಟಿ ಮಾಡಿತ್ತು. ನಿಯೋಗದಲ್ಲಿ ಚೇನಂಡ ಕೊಡವ ಕೌಟುಂಬಿಕ ಹಾಕಿ ಪಂದ್ಯಾವಳಿ ಸಮಿತಿ ಅಧ್ಯಕ್ಷÀ ಕರುಂಬಯ್ಯ ಸಿ.ಪಿ. ಕಾರ್ಯಾಧ್ಯಕ್ಷ ದೀನಾ ಚಂಗಪ್ಪ ಚೇನಂಡ , ವಿವೇಕ್ ಪೂಣಚ್ಚ, ಬ್ರಿಗೇಡಿಯರ್ ಸಿ.ಎಂ. ಚೀಯಣ್ಣ, ದ್ರೋಣಾಚಾರ್ಯ ಪ್ರಶಸ್ತಿ ವಿಜೇತರಾದ ವಿಶು ಕುಟ್ಟಪ್ಪ, ಹಾಜರಿದ್ದರು.